Saturday, December 14, 2024
Homeಸುದ್ದಿಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್

ಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್

ಹುಬ್ಬಳ್ಳಿ: ವಾಸ್ಕೊ ಮತ್ತು ಹೌರಾ ನಡುವೆ ಸಂಚರಿಸುವ ಅಮರಾವತಿ ಎಕ್ಸ್‌ಪ್ರೆಸ್ ರೈಲು ಗೋವಾದ ದೂಧ್‌ಸಾಗರ– ಕಾರಂಜೋಲ್ ಮಾರ್ಗ ಮಧ್ಯೆ ಮಂಗಳವಾರ ಬೆಳಿಗ್ಗೆ ಹಳಿ ತಪ್ಪಿದೆ. ಘಟನೆಯಲ್ಲಿ ರೈಲಿನ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಯಾರಿಗೂ ತೊಂದರೆಯಾಗಿಲ್ಲ.

ಬೆಳಿಗ್ಗೆ 6.30ಕ್ಕೆ ವಾಸ್ಕೊದಿಂದ ಹೊರಟ್ಟಿದ್ದ ರೈಲು 8.50ರ ಸುಮಾರಿಗೆ ದೂಧ್‌ಸಾಗರ ದಾಟಿದೆ. ಅಲ್ಲಿಂದ ಕಾರಂಜೋಲ್‌ ಕಡೆಗೆ ಹೊರಟ ರೈಲಿನ ಎಂಜಿನ್‌ನ ಮುಂಭಾಗದ ಚಕ್ರಗಳು ಹಳಿ ತಪ್ಪಿವೆ. ವಿಷಯ ತಿಳಿದ ತಕ್ಷಣ ಕ್ಯಾಸಲ್‌ರಾಕ್‌ನಿಂದ ಅಪಘಾತ ಪರಿಹಾರ ರೈಲು(ಎಆರ್‌ಟಿ) ಹಾಗೂ ವೈದ್ಯಕೀಯ ಸಲಕರಣೆ ಹೊತ್ತ ವ್ಯಾನ್ ಘಟನಾ ಸ್ಥಳಕ್ಕೆ ಬಂದಿದೆ.

ರೈಲಿನಲ್ಲಿದ್ದ ಪ್ರಯಾಣಿಕರಿಗೆ ಬೆಳಿಗ್ಗೆ ಉಪಾಹಾರ ಹಾಗೂ ಊಟ ಪೂರೈಕೆ ಮಾಡಲಾಗಿದೆ. ಘಟನೆಯಲ್ಲಿ ರೈಲಿನ ಬೋಗಿಗಳಿಗೂ ಯಾವುದೇ ಹಾನಿಯಾಗಿಲ್ಲ. ರೈಲಿನ ಕಾರ್ಯಾಚರಣೆ 11.30ರ ಹೊತ್ತಿಗೆ ಪೂರ್ಣಗೊಳಿಸಿ, ಪ್ರಯಾಣಿಕರಿದ್ದ ಬೋಗಿಗಳನ್ನು ಕುಲೇಂಗೆ ಕಳಿಸಲಾಯಿತು. ಅಲ್ಲಿ ಬೇರೆ ಎಂಜಿನ್‌ ವ್ಯವಸ್ಥೆ ಮಾಡಿ ಮಧ್ಯಾಹ್ನ 2 ಗಂಟೆಗೆ ರೈಲು ಕುಲೇಂನಿಂದ ಮತ್ತೆ ಸಂಚಾರ ಆರಂಭಿಸಿತು.

ಹಿನ್ನೆಲೆಯಲ್ಲಿ ಇದೇ ಮಾರ್ಗದಲ್ಲಿ ಸಂಚರಿಸಬೇಕಿದ್ದ ಎರ್ನಾಕುಲಂ – ಪುಣೆ ಎಕ್ಸ್‌ಪ್ರೆಸ್‌ ರೈಲು ಸಂಚಾರದಲ್ಲಿ ವಿಳಂಬವಾಯಿತು ಎಂದು ನೈರುತ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ನೈರುತ್ಯ ರೈಲ್ವೆಯು ಸಹಾಯವಾಣಿ ಕೂಡ ಆರಂಭಿಸಿದೆ. ಪ್ರಯಾಣಿಕರ ಸಂಬಂಧಿಕರು ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಬಹುದು. 0836 2363481 ಮತ್ತು 0836 2289826.