ಗ್ಲಾಸ್ಗೋ (ಸ್ಕಾಟ್‌ಲೆಂಡ್): ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ಮೂಲಕ ಮಾನವ ಕುಲವನ್ನು ರಕ್ಷಿಸಬೇಕು ಎಂದು ಜಾಗತಿಕ ನಾಯಕರಿಗೆ ಗ್ಲಾಸ್ಗೋ ಹವಾಮಾನ ವೈಪರೀತ್ಯ ತಡೆ ಶೃಂಗ ಸಭೆಯು ಸೋಮವಾರ ಕರೆ ಕೊಟ್ಟಿದೆ.
ಇಂಗಾಲ ಹೊರಸೂಸುವಿಕೆಯ ಕಡಿತದ ಬದ್ಧತೆಗೆ ರಾಷ್ಟ್ರಗಳು ವಿಫಲವಾದರೆ, ಪ್ರತಿ ದೇಶವೂ ತಮ್ಮ ಹವಾಮಾನ ವೈಪರೀತ್ಯ ತಡೆ ಯೋಜನೆ ಮತ್ತು ನೀತಿಯನ್ನು ಪ್ರತಿ ಪರಿಷ್ಕರಿಸುತ್ತಲೇ ಇರಬೇಕು. ಇದು ಐದು ವರ್ಷಕ್ಕೆ ಒಮ್ಮೆ ಆದರೆ ಸಾಲದು, ಪ್ರತಿ ವರ್ಷವೂ ಮಾಡಬೇಕಾಗುತ್ತದೆ ಎಂದು ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಹೇಳಿದರು.
ಇಂಗಾಲ ಹೊರಸೂಸುವಿಕೆ ತಡೆ ಮತ್ತು ಹೊರಸೂಸುವಿಕೆ ಸೊನ್ನೆಗೆ ಇಳಿಸುವಿಕೆ ವಿಚಾರದಲ್ಲಿ ವಿಶ್ವಾಸಾರ್ಹತೆಯ ಕೊರತೆ ಇದೆ, ಗೊಂದಲ ಬಹಳ ಹೆಚ್ಚು ಇದೆ ಎಂದು ಅವರು ವಿಶ್ಲೇಷಿಸಿದರು.
ಜೀವ ವೈವಿಧ್ಯದ ಮೇಲಿನ ದಮನ ಸಾಕು. ಇಂಗಾಲದಿಂದ ನಮ್ಮನ್ನು ನಾವೇ ಹತ್ಯೆ ಮಾಡಿಕೊಂಡದ್ದು ಸಾಕು. ನಿಸರ್ಗವನ್ನು ಶೌಚಾಲಯದಂತೆ ಬಳಸಿದ್ದು ಸಾಕು. ಉರಿಸಿದ್ದು ಸಾಕು. ಇನ್ನೂ ಆಳಕ್ಕೆ ಗಣಿಗಾರಿಕೆಗಾಗಿ ತೋಡಿದ್ದು ಸಾಕು. ನಾವು ನಮ್ಮ ಗೋರಿಗಳನ್ನು ತೋಡುತ್ತಿದ್ದೇವೆ ಎಂದು ಗುಟೆರಸ್ ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ.
ಶೃಂಗಸಭೆಯು ವಿಫಲವಾದರೆ ಜನರ ಆಕ್ರೋಶವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮುಂದಿನ ತಲೆಮಾರುಗಳು ‘ನಮ್ಮನ್ನು ಕ್ಷಮಿಸದು’ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಕೆ ಕೊಟ್ಟಿದ್ದಾರೆ.
ಭಾರತದ ಹಾಗೆಯೇ ಎಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳ ಕೃಷಿಗೂ ಹವಾಮಾನ ಬದಲಾವಣೆಯು ಬಹುದೊಡ್ಡ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ. ಕುಡಿಯುವ ನೀರಿನಿಂದ ಕೈಗೆಟಕುವ ದರದ ವಸತಿಯ ವರೆಗೆ ಎಲ್ಲವೂ ಹವಾಮಾನ ಬದಲಾವಣೆ ತಡೆಗೆ ಪೂರಕವಾಗಿರಬೇಕು ಎಂದು ಅವರು ಹೇಳಿದರು.
ಹವಾಮಾನ ಬದಲಾವಣೆ ತಡೆ ವಿಚಾರಗಳು ಶಾಲಾ ಪಠ್ಯಕ್ರಮದ ಭಾಗವಾಗಬೇಕು. ಆ ಮೂಲಕ ಮುಂದಿನ ತಲೆಮಾರುಗಳು ಕೂಡ ಈ ವಿಷಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ದೇಶಗಳಿಗೆ ಆರ್ಥಿಕ ನೆರವು ನಿರಾಕರಿಸಿದರೆ ಮತ್ತು ಹವಾಮಾನ ಬದಲಾವಣೆಯನ್ನು ತಡೆಯಲು ಈ ದೇಶಗಳು ವಿಫಲವಾದರೆ ಅದು ನಮ್ಮ ಸಮುದಾಯಗಳಲ್ಲಿನ ಜೀವಗಳು ಮತ್ತು ಜೀವನೋಪಾಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಬಾರ್ಬಡೋಸ್ ಪ್ರಧಾನಿ ಹೇಳಿದ್ಧಾರೆ.
ಈ ಸಮಾವೇಶದ ಮೂಲಕ ಇನ್ನಷ್ಟು ಮುಂದಕ್ಕೆ ನಾವು ಹೋಗಬೇಕಿದೆ. ಹೊಸತೊಂದು ಆರಂಭಕ್ಕೆ ಮುನ್ನುಡಿ ಬರೆಯಲಾಗಿದೆ. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಬಹುದೊಡ್ಡ ನೆಗೆತ ಬೇಕಾಗಿದೆ ಎಂದು ಇಟಲಿಯ ಪ್ರಧಾನಿ ಹೇಳಿದ್ಧಾರೆ.