ಬೆಂಗಳೂರು: ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಹೇರುವುದನ್ನು ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಿರೋಧಿಸಿದರು.
ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ವೇದಿಕೆಯಲ್ಲೇ ತಮ್ಮ ವಿರೋಧವನ್ನು ಪ್ರಕಟಿಸಿದರು.
ದೇಶದಲ್ಲಿ ಶೇಕಡ 34ರಷ್ಟು ಜನರು ಮಾತ್ರ ಮಾತೃಭಾಷೆಯಾಗಿ ಹಿಂದಿಯನ್ನು ಬಳಸುತ್ತಾರೆ. ಉಳಿದ ಶೇ 66ರಷ್ಟು ಜನರ ಮೇಲೆ ಹಿಂದಿ ಭಾಷೆಯನ್ನು ಹೇರುವುದು ಪ್ರಜಾಪ್ರಭುತ್ವದ ವಿರೋಧಿ ಎಂದರು.
ಹಿಂದಿಯನ್ನು ಒಂದು ಭಾಷೆಯಾಗಿ ಕಲಿಯುವುದನ್ನು ಒಪ್ಪಬಹುದು. ಆದರೆ, ಹಿಂದಿಯನ್ನು ಹೇರುವುದನ್ನು ಸಹಿಸಲಾಗದು ಎಂದು ಹೇಳಿದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಪ್ರಶ್ನಿಸಿ ಕೆಲವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಗಟ್ಟಿಯಾದ ನಿಲುವು ತಾಳುವುದು ಅಗತ್ಯ ಎಂದರು.