ಬೆಂಗಳೂರು: ‘ಹಿಜಾಬ್ ಅಪ್ರಸ್ತುತ ವಿಚಾರ. ಬಹಳ ವರ್ಷಗಳಿಂದ ಹಿಜಾಬ್ ಬಳಕೆಯಲ್ಲಿದೆ. ಮುಸ್ಲಿಂ ಸಮುದಾಯದವರು ಅದನ್ನು ಧರಿಸುತ್ತಿದ್ದಾರೆ. ಇದ್ದಕ್ಕಿದ್ದಂತೆ ಅದನ್ನೊಂದು ದೊಡ್ಡ ವಿಚಾರವಾಗಿ ಮಾಡಿ, ತೆಗೆಸುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಹಾಗೂ ಹಿಂದುತ್ವ ಗಟ್ಟಿ ಮಾಡಲು, ಹಿಂದೂ ಮತ ಕ್ರೋಡೀಕರಣಕ್ಕಾಗಿ ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹ್ಮದ್ ನಲಪಾಡ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉಡುಪಿಯಲ್ಲಿ ಆರಂಭವಾಗಿ ನಂತರ ಕುಂದಾಪುರ ಮೂಲಕ ಇಡೀ ರಾಜ್ಯವನ್ನು ಈ ಗಲಾಟೆ ವ್ಯಾಪಿಸಿದೆ. ಕೇಸರಿ ಶಾಲು, ಟೋಪಿ ಧರಿಸಿ ಯಾವುದೇ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬಂದಿರುವುದನ್ನು ನಾನು ಎಂದೂ ನೋಡಿರಲಿಲ್ಲ. ಸಂಘ ಪರಿವಾರದವರು ಇದನ್ನು ಖರೀದಿಸಿ ಮಕ್ಕಳಿಗೆ ಬಲವಂತವಾಗಿ ತೊಡಿಸಿ ಕಳುಹಿಸಿದ್ದಾರೆ. ಈ ವಿವಾದವನ್ನು ಹುಟ್ಟು ಹಾಕಿದವರು ಆರೆಸ್ಸೆಸ್‌ನವರು, ಸಂಘಪರಿವಾರದವರು’ ಎಂದು ವಾಗ್ದಾಳಿ ನಡೆಸಿದರು.
‘ಸಮವಸ್ತ್ರದ ಹೆಸರಿನಲ್ಲಿ ದ್ವೇಷ ಭಾವನೆ ಹುಟ್ಟುಹಾಕುತ್ತಿರುವ ಬಿಜೆಪಿ ನಾಯಕರು, ಬೇರೆಯವರ ಮೇಲೆ ಗೂಬೆ ಕೂರಿಸುವ ಕಾರ್ಯ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿರುವ ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರು ಈ ವಿಚಾರವಾಗಿ ಸೂಕ್ತ ತನಿಖೆ ನಡೆಸಲಿ’ ಎಂದು ಆಗ್ರಹಿಸಿದರು.
‘ಧರ್ಮದ ಪ್ರಕಾರ, ನಂಬಿಕೆ ಪ್ರಕಾರ ಮುಸ್ಲಿಂ ಸಮುದಾಯದ ಬಾಲಕಿಯರು ಹಿಜಾಬ್ ಧರಿಸುತ್ತಾರೆ. ಇದರಿಂದಾಗಿ ಯಾರಿಗಾದರೂ ತೊಂದರೆ ಆಗಿದೆಯೇ? ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ಒಬ್ಬರು ಯುವತಿಯರಿಗೆ ಪ್ರವೇಶ ನೀಡದೆ ಅಮಾನವೀಯವಾಗಿ ವರ್ತಿಸಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಬೇಕಿತ್ತು. ಜಾತಿ ಹಾಗೂ ಧರ್ಮದ ವಿಚಾರವನ್ನು ಮಕ್ಕಳಲ್ಲಿ ತುಂಬಿ ಹಾಳು ಮಾಡುವ ಕೆಲಸವನ್ನು ಬಿಜೆಪಿಯವರು, ಸಂಘ ಪರಿವಾರದವರು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ರಾಷ್ಟ್ರಧ್ವಜವನ್ನೇ ಇಳಿಸಿ ಕೇಸರಿ ಧ್ವಜ ಏರಿಸುವ ಕಾರ್ಯವನ್ನು ಒಬ್ಬ ಮಂತ್ರಿ ಮಾಡಿರುವುದು ನಾಚಿಕೆಗೇಡು. ಅಂಥವರು ಜನಪ್ರತಿನಿಧಿಯಾಗಿ, ಸಚಿವರಾಗಿ ಉಳಿಯುವುದೇ ನಾಚಿಕೆಗೇಡು. ರಾಷ್ಟ್ರಧ್ವಜ ಇರುವ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇನೆ ಎಂಬ ನಾಯಕರು ರಾಜಕೀಯದಲ್ಲಿ ಇರಲು ಲಾಯಕ್ಕಾ? ಅಂಥವರು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ’ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೆಸರು ಪ್ರಸ್ತಾಪಿಸದೆ ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರದ ಪ್ರಚೋದನೆಗೆ ಒಳಗಾಗಿ ಯುವಕರು ಹಾದಿ ತಪ್ಪಬಾರದು. ಪ್ರತಿಯೊಬ್ಬರೂ ಸಂವಿಧಾನ ಓದಲೇಬೇಕು’ ಎಂದು ಸಲಹೆ ನೀಡಿದ ಸಿದ್ದರಾಮಯ್ಯ, ‘ನರೇಂದ್ರ ಮೋದಿ ಅವರಿಂದ ದೇಶಭಕ್ತಿ ಕಲಿಯುವ ಪರಿಸ್ಥಿತಿ ಬಂತಲ್ಲ ಎಂದು ಬೇಸರ ಆಗುತ್ತದೆ. ಅವರು ಹುಟ್ಟಿದ್ದೆ ಸ್ವಾತಂತ್ರ್ಯ ಬಂದ ನಂತರ. ದೇಶಕ್ಕಾಗಿ ಬಿಜೆಪಿಯ ಯಾವುದೇ ನಾಯಕ ಪ್ರಾಣ, ಆಸ್ತಿ ಕಳೆದುಕೊಂಡಿದ್ದಾರಾ? ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಯಾವ ನಿರ್ದೇಶನವು ಇಲ್ಲ. ಅವರು ನಮಗೆ ದೇಶಭಕ್ತಿಯ ಪಾಠ ಮಾಡುತ್ತಿದ್ದಾರೆ. ಯಾವುದಾದರೂ ರಾಜಕೀಯ ಪಕ್ಷ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದರೆ, ತ್ಯಾಗ ಬಲಿದಾನ ಮಾಡಿ ಸೆರೆಮನೆ ವಾಸ ಅನುಭವಿಸಿದ್ದರೆ, ಅದು ಕಾಂಗ್ರೆಸ್ ಪಕ್ಷದವರು. ಬಿಜೆಪಿಯವರಲ್ಲ’ ಎಂದರು.
‘ಅಧಿಕಾರಕ್ಕೆ ಬರಬೇಕೆಂಬ ಆಸೆಯಿಂದ ಅಲ್ಲ, ರಾಜ್ಯವನ್ನು ಹಾಳು ಮಾಡುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಮತ್ತೆ ಅಧಿಕಾರಕ್ಕೆ ಬರಲು ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಜನರು ದಡ್ಡರಲ್ಲ. ಅವರಿಗೆ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಬಿಜೆಪಿಯವರ ಸುಳ್ಳನ್ನು ಜನರಿಗೆ ತಿಳಿಸಿ ಸಮಾಜದಲ್ಲಿ ಬೆತ್ತಲೆಗೊಳಿಸುವ ಕಾರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು’ ಎಂದು ಮನವಿ ಮಾಡಿದರು.
‘ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಎಲ್ಲರೂ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ದೇಶ ಉಳಿಸುವ ಸವಾಲು ಪ್ರತಿಯೊಬ್ಬ ಕಾಂಗ್ರೆಸ್ ನಾಯಕರ ಮೇಲಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನುಡಿದಂತೆ ನಡೆದಿಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ಮಾತ್ರ ಜನರಲ್ಲಿ ತುಂಬಿ, ಧರ್ಮ ಜಾತಿ ಹೆಸರಿನಲ್ಲಿ ರಾಜ್ಯ, ದೇಶವನ್ನು ಒಡೆಯುವ ಕಾರ್ಯ ಮಾಡಿದೆ. ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ’ ಎಂದರು.
‘ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕಳೆದ ಎರಡೂವರೆ ವರ್ಷದಲ್ಲಿ ಏನನ್ನೂ ಮಾಡಿಲ್ಲ. ಅಭಿವೃದ್ಧಿ ನಿಂತಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಬಿಜೆಪಿಯವರು ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ. ತಮ್ಮ ತಪ್ಪು ಮುಚ್ಚಿಕೊಳ್ಳುವುದಕ್ಕಾಗಿ ಭಾವನಾತ್ಮಕ ವಿಚಾರಗಳನ್ನು ಜನರ ಮುಂದೆ ತರುತ್ತಿದ್ದಾರೆ’ ಎಂದೂ ಕಿಡಿಕಾರಿದರು.