Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಹಿಜಾಬ್‌ ಧರಿಸಲು ಅವಕಾಶ ಕೊಡುವಂತೆ ಪ್ರತಿಭಟನೆ

ಹಿಜಾಬ್‌ ಧರಿಸಲು ಅವಕಾಶ ಕೊಡುವಂತೆ ಪ್ರತಿಭಟನೆ

ಬೆಳಗಾವಿ: ‘ಶಾಲಾ–ಕಾಲೇಜುಗಳಲ್ಲಿ ನಮ್ಮ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅವಕಾಶ ಕೊಡಬೇಕು’ ಎಂದು ಆಗ್ರಹಿಸಿ ಹಾಗೂ ಕಡ್ಡಾಯವಾಗಿ ಸಮವಸ್ತ್ರ ಸಂಹಿತೆ ಪಾಲಿಸುವಂತೆ ಸರ್ಕಾರ ಹೊರಡಿಸಿರುವ ಆದೇಶ ಖಂಡಿಸಿ ಅಖಿಲ ಭಾರತ ಮಜಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ನೇತೃತ್ವದಲ್ಲಿ ಮುಸ್ಲಿಮರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

‘ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು. ಆದರೆ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ತರಗತಿಗೆ ಹೋಗಲು ರಾಜಕೀಯ ಕಾರಣಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ. ಸರ್ಕಾರದ ಈ ನಡೆ ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಿಜಾಬ್ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತದೆ. ಹಾಗಾಗಿ ಹಿಜಾಬ್ ಧರಿಸಿಯೇ ನಮ್ಮ ವಿದ್ಯಾರ್ಥಿನಿಯರು ಶಾಲಾ-ಕಾಲೇಜಿಗೆ ಹೋಗುತ್ತಾರೆ. ಮುಂದೆಯೂ ಅದನ್ನು ಪಾಲಿಸುತ್ತಾರೆ. ಹಾಗಾಗಿ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ಮಹಿಳೆಯರು, ಪುರುಷರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ‘ಭಾರತ ಬಿಡುವುದಿಲ್ಲ; ಪಾಕಿಸ್ತಾನಕ್ಕೆ ಹೋಗುವುದಿಲ್ಲ’ ಎಂದು ಘೋಷಣೆ ಕೂಗಿದರು.

ಮೌಲಾನಾ ಸಲೀಂ, ಮೌಲಾನಾ ಆರೀಫ್, ಮುಫ್ತಿ ಕಾಶೀಮ್, ಆಜಾದ್ ಮುಲ್ಲಾ, ಇಮ್ರಾನ್ ಪೀರಜಾದೆ, ಲತೀಫ್‌ ಪಠಾಣ, ಫಜಲ್ ಪಠಾಣ, ಶಾಹೀನ್ ಶೇಖ್, ತಮನ್ನಾ ಸನದಿ, ಶಮೀನಾ ಅನ್ಸಾರಿ, ಶಬಾನಾ ಚೋಪದಾರ ನೇತೃತ್ವ ವಹಿಸಿದ್ದರು.