ಬೆಂಗಳೂರು: ಕಾಲೇಜು ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಹೈಕೋರ್ಟ್ ಸಾರಾಸಗಟಾಗಿ ತಿರಸ್ಕರಿಸಿದೆ.
ಹಿಜಾಬ್ ಗೆ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಪೀಠ ವಜಾ ಮಾಡಿದೆ.
ಈ ಕುರಿತಂತೆ ಕಾಯ್ದಿರಿಸಲಾಗಿದ್ದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜೈಬುನ್ನೀಸಾ ಮೊಹಿಯುದ್ದೀನ್ ಖಾಜಿ ಅವರನ್ನು ಒಳಗೊಂಡ ವಿಸ್ತೃತ ನ್ಯಾಯಪೀಠ ಮಂಗಳವಾರ ಬೆಳಿಗ್ಗೆ 10.35ಕ್ಕೆ ಪ್ರಕಟಿಸಿತು.
ಹಿಜಾಬ್ ಅಗತ್ಯ ಧಾರ್ಮಿಕ ಆಚರಣೆ ಅಲ್ಲ. ಅಂತೆಯೇ ಕುರಾನ್ ನಲ್ಲಿ ಹಿಜಾಬ್ ಅವಶ್ಯಕ ಆಚರಣೆ ಎಂಬ ಉಲ್ಲೇಖಕ್ಕೆ ಯಾವುದೇ ಆಧಾರವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಂಪೂರ್ಣ ತೀರ್ಪು ವೆಬ್ ಸೈಟಿನಲ್ಲಿ ಅಪ್ಲೋಡ್ ಆಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ತಿಳಿಸಿದರು.
ಈ ಮಹತ್ವದ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಕಳೆದ ತಿಂಗಳ 25ಕ್ಕೆ ಪೂರ್ಣಗೊಳಿಸಿತ್ತು.