ಬರ್ಮಿಂಗ್ಹ್ಯಾಮ್:: ಹೆಣ್ಣುಮಕ್ಕಳ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತೆ, ಹೋರಾಟ ನಡೆಸುತ್ತಿರುವಾಗ ಮೂಲಭೂತವಾದಿಗಳು ಗುಂಡು ಹಾರಿಸಿದರೂ ಪಾರಾಗಿದ್ದ ಮಲಾಲಾ ಯೂಸುಫ್ ಝಾಯಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
24 ವರ್ಷ ವಯಸ್ಸಿನ ಹೋರಾಟಗಾರ್ತಿ ತಮ್ಮ ನಿಖಾ ಸಮಾರಂಭದ ಚಿತ್ರಗಳನ್ನು ಮಂಗಳವಾರ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬ್ರಿಟನ್‌ನ ಬರ್ಮಿಂಗ್ಹ್ಯಾಮ್ ನಗರದಲ್ಲಿ ಈ ಸಮಾರಂಭ ನಡೆದಿದೆ.
ಇದು ನನ್ನ ಜೀವನದ ಪಾಲಿಗೆ ಅಮೂಲ್ಯ ದಿನ. ಅಸ್ಸರ್ ಮತ್ತು ನಾವು ಬಾಳ ಸಂಗಾತಿಗಳಾಗಿದ್ದೇವೆ. ಬರ್ಮಿಂಗ್‌ಹ್ಯಾಂನಲ್ಲಿರುವ ನಮ್ಮ ಮನೆಯಲ್ಲಿ ನಮ್ಮ ಕುಟುಂಬಗಳ ಜತೆ ಈ ಸಮಾರಂಭವನ್ನು ಸಂಭ್ರಮಿಸಿದ್ದೇವೆ. ನಿಮ್ಮ ಪ್ರಾರ್ಥನೆ ನಮ್ಮ ಜತೆಗಿರಲಿ. ಮುಂದಿನ ಪಯಣಕ್ಕೆ ಜತೆಯಾಗಿ ಹೆಜ್ಜೆ ಇಡಲು ರೋಮಾಂಚನವಾಗುತ್ತಿದೆ” ಎಂದು ಮಲಾಲಾ ತಮ್ಮ ಟ್ವಿಟ್‌ನಲ್ಲಿ ವಿವರಿಸಿದ್ದಾರೆ.
ಹೆಣ್ಣುಮಕ್ಕಳು ಶಾಲೆಗೆ ಹಾಜರಾಗುವುದನ್ನು ವಿರೋಧಿಸುತ್ತಿದ್ದ ತಾಲಿಬಾನ್‌ನಂಥ ಸಂಘಟನೆಯ ವಿರುದ್ಧವೂ ನಿರ್ಭೀತಿಯಿಂದ ಹೋರಾಡಿದ ಇವರ ವೈಯಕ್ತಿಕ ಸಾಹಸ ಮತ್ತು ಹೆಣ್ಣುಮಕ್ಕಳ ಹಾಗೂ ಮಹಿಳೆಯರ ಶಿಕ್ಷಣದ ಹಕ್ಕಿಗಾಗಿ ಇವರು ಧ್ವನಿ ಎತ್ತಿದ್ದು, ಇವರಿಗೆ ನೊಬೆಲ್ ಪ್ರಶಸ್ತಿ ತಂದುಕೊಟ್ಟಿತ್ತು. 2012ರಲ್ಲಿ ಮಹಿಳೆಯರಿಗೆ ಶಿಕ್ಷಣ ನಿರಾಕರಿಸುವ ಪ್ರಯತ್ನದ ವಿರುದ್ಧ ಅಭಿಯಾನ ನಡೆಸುತ್ತಿದ್ದ ವೇಳೆ ಇವರ ಮೇಲೆ ತಾಲಿಬಾನ್ ಕಾರ್ಯಕರ್ತರಿಂದ ಗುಂಡಿನ ದಾಳಿ ನಡೆದಿತ್ತು. ಆದರೆ ಮಲಾಲಾ ಪಾರಾಗಿದ್ದರು. 2014ರಲ್ಲಿ 17 ವರ್ಷ ವಯಸ್ಸಿನವರಾಗಿದ್ದ ಇವರು, ನೊಬೆಲ್ ಪುರಸ್ಕಾರಕ್ಕೆ ಪಾತ್ರರಾದ ಅತ್ಯಂತ ಕಿರಿಯರು ಎನಿಸಿಕೊಂಡಿದ್ದರು.