ಶಿವಮೊಗ್ಗ: ದೀಪಾವಳಿ ಹಬ್ಬದ ನಿಮಿತ್ತ ಒಕ್ಕಲಿಗ ರೈತಾಪಿ ವರ್ಗವೇ ಹೆಚ್ಚಾಗಿ ನೆಲೆಸಿರುವ ತಾಲ್ಲೂಕಿನಲ್ಲಿ ವಿಭಿನ್ನ ಬಗೆಯ ಆಚರಣೆಗಳು ನಡೆಯುತ್ತವೆ.
ಬಯಲು ಸೀಮೆಯಂತೆ ಹೋರಿ ಬೆದರಿಸುವ ಪದ್ದತಿ ಇಲ್ಲವಾದರೂ ಗೋವುಗಳನ್ನು ಓಡಿಸಿ ಅವುಗಳಿಗೆ ಕಟ್ಟಿದ್ದ ಗೋಮಾಲೆ ಹರಿಯುವ, ಪ್ರಸಾದ ಎಂದು ಮನೆಗೆ ಕೊಂಡೊಯ್ಯುವ ಕ್ರಮ ತಾಲ್ಲೂಕಿನಲ್ಲಿದೆ. ಹಳ್ಳಿಗಳಲ್ಲಿ ಹೀಗೆ ಗೋಮಾಲೆ ಹರಿಯುವವನು ಬಲು ಗಟ್ಟಿಗ ಎಂಬ ಖ್ಯಾತಿಯೂ ಇದೆ. ಯಾರು ಎಷ್ಟು ಮಾಲೆ ಹರಿಯುತ್ತಾನೋ ಆ ವ್ಯಕ್ತಿಗೆ ಸನ್ಮಾನ ಮಾಡಿದ್ದು ಉಂಟು.
ಹಿಂದಿನ ಕಾಲದ ಕೆಲ ಆಚರಣೆ ಕೊಂಚ ನಶಿಸಿದರೂ ಬಲಿ ಹೂಡುವುದು, ಸುತ್ತಿನಪೂಜೆ, ಕೆರಕ, ಬಲಿಂದ್ರನ ಕರೆಯುವ ದೀಪದ ಕೋಲು ಹಚ್ಚುವುದು, ದೀಪ ಹಂಚುವ ಅಂಟಿಕೆ ಪಂಟಿಗೆ, ಕೋಲಾಟಗಳು ನಡೆಯುತ್ತಿವೆ.
ಅಂಟಿಕೆ ಪಂಟಿಗೆ ಶುರು:
ತಾಲ್ಲೂಕಿನ ಹಲವಷ್ಟು ಹಳ್ಳಿಗಳಲ್ಲಿ ಅಂಟಿಕೆ ಪಂಟಿಕೆ ತಂಡಗಳು ಅಸ್ತಿತ್ವದಲ್ಲಿದ್ದು, ದೀಪಾವಳಿ ದಿನ ಸಂಜೆ ದೀಪ ಹಚ್ಚಿ ಮನೆ ಮನೆಗೆ ಬಂದು, ‘ಸೂವಾಲೋ.. ಸೂವಾಲು.. ಸೂವಾಲೂ ಎನ್ನಿರಿ ಶಿವನಿಗೆ’.. ಎಂಬ ದೀಪದ ಹಾಡನ್ನು ಸುಶ್ರಾವ್ಯವಾಗಿ ಹಾಡಿ ಪ್ರತಿ ಮನೆಗೆ ದೀಪ ಮುಟ್ಟಿಸುವ ಕೈಂಕರ್ಯ ಇದೆ.
ನಾಲ್ಕೈದು ದಿನಗಳ ರಾತ್ರಿ ಕಾಲದಲ್ಲಿ ಹಳ್ಳಿಗಳನ್ನು ಸುತ್ತಾಡುವ ಈ ತಂಡಗಳು ರೈತರು ಕೊಡುವ ಹಣ ದವಸ ಧಾನ್ಯಗಳನ್ನು ಸಂಗ್ರಹಿಸಿ ಹಬ್ಬ ಆಚರಿಸುತ್ತಾರೆ. ಉಳಿದ ಹಣವನ್ನು ಸಂಗ್ರಹಿಸಿ ಗ್ರಾಮ ದೇವತೆಗಳ ಆಲಯ, ಗುಡಿ ನಿರ್ಮಾಣ ಮತ್ತಿತರ ಶುಭ ಕಾರ್ಯಕ್ಕೆ ಬಳಸುವುದು ವಾಡಿಕೆ ಇದೆ.
ಮಳೆ ಅಡ್ಡಿ: ಮಲೆನಾಡಿನಲ್ಲಿ ದಿನವೂ ಮಳೆ ಸುರಿಯುತ್ತಿದ್ದು, ದೀಪಾವಳಿ ಸಂಭ್ರಮಕ್ಕೆ ಅಡ್ಡಿಯಾಗಿದೆ. ಸಂಜೆಯಾಗುತ್ತಿದ್ದಂತೆ ಆರಂಭವಾದ ಗುಡುಗು ಸಹಿತ ಮಳೆ ರಾತ್ರಿಯ ವೇಳೆಯಲ್ಲೂ ಸುರಿಯಿತು.