Saturday, December 14, 2024
Homeಸುದ್ದಿರಾಷ್ಟ್ರೀಯಹೊಸ ಪಕ್ಷ ಕಟ್ಟಲು ಅಮರಿಂದರ್‌ ಸಿಂಗ್‌ ನಿರ್ಧಾರ

ಹೊಸ ಪಕ್ಷ ಕಟ್ಟಲು ಅಮರಿಂದರ್‌ ಸಿಂಗ್‌ ನಿರ್ಧಾರ

ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಸದ್ಯದಲ್ಲಿಯೇ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ..

ರೈತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಪರಿಹಾರ ದೊರೆತರೆ, 2022ರಲ್ಲಿ ನಡೆಯುವ ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸೀಟು ಹೊಂದಾಣಿಕೆಗೆ ಮುಕ್ತವಿರುವುದಾಗಿ ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪಂಜಾಬ್‌ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಜೊತೆಗಿನ ಜಗಳ ಮತ್ತು ಪಕ್ಷದ ಆಂತರಿಕ ಸಮಸ್ಯೆಯಿಂದ ಕಳೆದ ತಿಂಗಳು ಅಮರಿಂದರ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪಂಜಾಬ್‌ನ ಭವಿಷ್ಯಕ್ಕಾಗಿ ಯುದ್ಧ ನಡೆಯುತ್ತಿದೆ. ಒಂದು ವರ್ಷದಿಂದ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಇಲ್ಲಿನ ಜನರ ಹಿತಾಸಕ್ತಿಗಾಗಿ ನನ್ನದೇ ರಾಜಕೀಯ ಪಕ್ಷವನ್ನು ಆರಂಭಿಸುತ್ತೇನೆ. ಶೀಘ್ರವೇ ಹೊಸ ಪಕ್ಷವನ್ನು ಘೋಷಿಸುತ್ತೇನೆ ಎಂದು ಸಿಂಗ್ ತಿಳಿಸಿದ್ದಾರೆ.

ಪಂಜಾಬ್‌ಗೆ ರಾಜಕೀಯ ಸ್ಥಿರತೆ ಮತ್ತು ಆಂತರಿಕ ಹಾಗೂ ಬಾಹ್ಯ ಬೆದರಿಕೆಗಳಿಂದ ರಕ್ಷಣೆಯ ಅಗತ್ಯವಿದೆ. ನನ್ನ ಜನರು ಮತ್ತು ನನ್ನ ರಾಜ್ಯದ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ರೈತರ ಹಿತದೃಷ್ಟಿಯಿಂದ ಅವರ ಪ್ರತಿಭಟನೆ ಬಗೆಹರಿದರೆ 2022 ರಲ್ಲಿ ನಡೆಯುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಒಡೆದು ಹೋಗಿರುವ ಅಕಾಲಿ ಗುಂಪುಗಳು, ವಿಶೇಷವಾಗಿ ದಿಂಡಸಾ ಮತ್ತು ಬ್ರಹ್ಮಪುರ ಸೇರಿದಂತೆ ಸಮಾನ ಮನಸ್ಕ ನಾಯಕರ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮುಕ್ತವಾಗಿರುವುದಾಗಿ ಅವರು ತಿಳಿಸಿದ್ದಾರೆ.