Saturday, December 14, 2024
Homeಸುದ್ದಿರಾಷ್ಟ್ರೀಯಹೋಗಿ ಬನ್ನಿ ಟುಟು

ಹೋಗಿ ಬನ್ನಿ ಟುಟು


ಆಲ್ ಫ್ರೆಡ್ ನೊಬೆಲ್ 1896ರ ಡಿಸೆಂಬರ್ 10ರಂದು ತೀರಿಕೊಂಡ. ಅವನು ಜೀವನಪರ್ಯಂತ ದುಡಿದ ಸುಮಾರು ಒಂಬತ್ತು ಮಿಲಿಯನ್ ಡಾಲರ್ ನಷ್ಟು ಹಣವನ್ನ ವಾರ್ಷಿಕ ಪ್ರಶಸ್ತಿಯೊಂದಕ್ಕೆ ಮೀಸಲಿಟ್ಟ. ಅದು ನೊಬೆಲ್ ಪ್ರಶಸ್ತಿಯೆಂದು ಖ್ಯಾತಿಯಾಯಿತು. ಸ್ವೀಡನ್ ದೇಶದವನಾದ ನೊಬೆಲ್ ಸ್ಪೋಟಕಗಳ ತಯಾರಿಕೆಯಲ್ಲಿ ನಿಪುಣ. ಡೈನಾಮೈಟ್ ಎಂಬ ಹೆಸರಿನಿಂದ ಇಂದು ನಮಗೆ ಪರಿಚಯವಿರುವ ಸ್ಪೋಟಕದ ಪೇಟೆಂಟ್ ಅನ್ನು 1867ರಲ್ಲೇ ಪಡೆದು, ತನ್ನ ಮೂವತ್ತನೇ ವಯಸ್ಸಿಗೆ ಸಾಕಷ್ಟು ಹಣ ಸಂಪಾದಿಸಿದ್ದ. ಸ್ಪೋಟಕಗಳನ್ನ ತಯಾರಿಸುತ್ತಿದ್ದ ನೊಬೆಲ್ “ ದೇಶಗಳ ದೇಶಗಳ ನಡುವೆ ಗೆಳೆತನ ಬೆಳೆಸುವ, ನಿರಸ್ತ್ರೀಕರಣಕ್ಕೆ ಉತ್ತೇಜನ ನೀಡುವ ಹಾಗು ಶಾಂತಿ ಸ್ಥಾಪನೆಗೆ ಶ್ರಮಿಸುವವರಿಗೆ” ನೊಬೆಲ್ ಪ್ರಶಸ್ತಿ ಸ್ಥಾಪಿಸಿದ್ದು ಸೋಜಿಗದ ಸಂಗತಿ.


1901ರಿಂದ ನೊಬೆಲ್ ಪ್ರಶಸ್ತಿ ಹಲವು ಸಾಧಕರಿಗೆ ನೀಡಲಾಗಿದೆ. ಆದರೆ ಕಪ್ಪು ವರ್ಣದ ಸಾಧಕನೊಬ್ಬನನ್ನು ಗುರುತಿಸಿ ನೊಬೆಲ್ ಪ್ರಶಸ್ತಿ ನೀಡಿದ್ದು 1963ರಲ್ಲಿ. ವರ್ಣಭೇದ ನೀತಿಯ ಕರಾಳ ದಿನಗಳಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ನಾಯಕ ಆಲ್ಬರ್ಟ್ ಲುತುಲಿಗೆ ಈ ಪ್ರಶಸ್ತಿ ನೀಡಲಾಗಿತ್ತು.

ದುರಂತವೆಂದರೆ ಅಂದಿನ ದಕ್ಷಿಣ ಆಫ್ರಿಕದ ಬಿಳಿಯರ ಸರ್ಕಾರ ಲುತುಲಿಗೆ ನೊಬೆಲ್ ನಂತಹ ಪ್ರತಿಷ್ಠಿತ ಪ್ರಶಸ್ತಿಯನ್ನ ಓಸ್ಲೋ ನಗರದಲ್ಲಿ ಸ್ವೀಕರಿಸಲು ಅನುಮತಿ ನೀಡಲಿಲ್ಲ. ಲುತುಲಿಯನ್ನ ಗೃಹಬಂಧನದಲ್ಲಿಡಲಾಯಿತು. ನೆಲ್ಸನ್ ಮಂಡೇಲ, ವಾಲ್ಟರ್ ಸಿಸುಲುಗೆ ತುಂಬ ಆಪ್ತನಾಗಿದ್ದ ಲುತುಲಿ ಗೃಹಬಂಧನದಲ್ಲೇ ಪ್ರಾಣಬಿಟ್ಟ. ಇದಾದ ನಂತರ ಅಮೆರಿಕಾದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನೊಬೆಲ್ ಪಡೆದ ಕಪ್ಪು ವರ್ಣದ ಎರಡನೆಯವರಾದರೆ, ಆಫ್ರಿಕಾದ ಆರ್ಕ್ ಬಿಷಪ್ ಡೆಸ್ಮಂಡ್ ಟುಟು ಮೂರನೆಯವರು.


ನೆನ್ನೆ ನಿಧನರಾದ ಡೆಸ್ಮಂಡ್ ಟುಟು ನನಗೆ ಹಲವು ಕಾರಣಕ್ಕೆ ಇಷ್ಟವಾಗುತ್ತಾರೆ. “ಒಬ್ಬ ಪ್ರಭಾವಿ ಧರ್ಮಗುರುವಾಗಿ ನಿಮಗ್ಯಾಕೆ ಈ ರಾಜಕೀಯ? ಅದರಿಂದ ದೂರ ಉಳಿಯಿರಿ. ಪ್ರವಚನ ನೀಡಿ ಸಾಕು” ಎಂದು ಹಲವರು ಅವರಿಗೆ ಸಲಹೆ ನೀಡಿದಿದ್ದೆ. ಅಂತಹವರಿಗೆ ಅವರು ತುಂಬ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದರು-


“ ಧರ್ಮದ ಜೊತೆಗೆ ರಾಜಕೀಯ ಬೆರೆಸುವ ಆರೋಪ ನನ್ನ ಮೇಲಿದೆ. ಹೌದು, ನಾನು ಏನೇ ಮಾಡಿದರು ಬೈಬಲ್ನ ಆಜ್ಞಾಪಕದಂತೆ ಮತ್ತು ಯೇಸು ಕ್ರಿಸ್ತನ ಗಾಸ್ಪೆಲ್ನಂತೆ ಮಾಡುತ್ತೇನೆ. ಬೈಬಲ್ ನಲ್ಲಿ ನೀವು ಮುಖಮುಖಿಯಾಗುವ ದೇವರು ಯಾವುದೇ ಧಾರ್ಮಿಕ ಸನ್ನಿವೇಶದಲ್ಲಿರದೆ ಪಕ್ಕಾ ರಾಜಕೀಯ ಸನ್ನಿವೇಶದಲ್ಲಿರುತ್ತಾನೆ. ಗುಲಾಮರನ್ನ ದಾಸ್ಯದಿಂದ ಜೀತದಿಂದ ಬಿಡುಗಡೆಗೊಳಿಸುವ ಗದ್ದಲದಲ್ಲೇ ದೇವರನ್ನ ನಾವು ಕಾಣೋದು. ಅದೊಂದು ಹೋರಾಟ. ಪಕ್ಕಾ ರಾಜಕೀಯ ಅನುಭವದು!!!”


ನೆಲ್ಸನ್ ಮಂಡೇಲ, ವಾಲ್ಟರ್ ಸಿಸುಲು ರೋಬೇನ್ ದ್ವೀಪದ ಸೆರೆಮನೆಯಲ್ಲಿ ಬಂಧಿಗಳಾದಾಗ. ಯುವ ನಾಯಕನೊಬ್ಬ ಉದಯಿಸಿದ. ಆತನೇ ಕ್ರಾಂತಿಕಾರಿ ಸ್ಟೀವ್ ಬೀಕೋ. ನಾವು ಕಪ್ಪು ಎಂಬ ಪ್ರಜ್ಞೆಯಿರಲಿ, ಕಪ್ಪು ಚರಿತ್ರೆ, ಇತಿಹಾಸ, ಜನಪದ, ಸಾಹಿತ್ಯ, ಕಲೆ, ಸಂಸ್ಕೃತಿ ಬಗ್ಗೆ ಗರ್ವವಿರಲಿ (Black Pride, Black Consciousness) ಎಂದೇಳುತ್ತಾ ವರ್ಣಭೇದ ನೀತಿಯಿಂದ ಕುಗ್ಗಿ ಹೋಗಿದ್ದ ಕಪ್ಪು ಜನರಲ್ಲಿ ಆತ್ಮವಿಶ್ವಾಸ ಮೂಡಿಸತೊಡಗಿದ. ಕಪ್ಪು ಜನರ ಮೇಲೆ ಬಿಳಿಯ ಸರ್ಕಾರ ಹೇರಿದ್ದ ನಿರ್ಬಂಧಗಳನ್ನ ಹೇಗೋ ಮೀರಿ ಜನರನ್ನ ತಲುಪಿದ್ದ. ಇದ್ದನ್ನ ಸಹಿಸದ ಸರ್ಕಾರ 1977ರಲ್ಲಿ ಅವನ ಮೇಲೆ ಸುಳ್ಳು ಆರೋಪಗಳನ್ನ ಹೊರೆಸಿ ಜೈಲಿಗಟ್ಟಿತ್ತು.

ವಿಚಾರಣೆಗೊಳಪಡಿಸುವ ನೆಪದಲ್ಲಿ ಆತನನ್ನ ಚಿತ್ರ ವಿಚಿತ್ರವಾಗಿ ದಂಡಿಸಿ, ಹಿಂಸಿಸಲಾಯಿತು. ಮೈಮೂಳೆ ಮುರಿದುಕೊಂಡು ಮಾಂಸದ ಮುದ್ದೆಯಂತಾಗಿದ್ದ ಬೀಕೋನನ್ನು ಪೋಲಿಸ್ ವ್ಯಾನಿನಲ್ಲಿ ಹಾಕಿ ಪೋರ್ಟ್ ಎಲಿಜಬೆತ್ನಿಂದ ಸುಮಾರು 965km ದೂರದಲ್ಲಿರುವ ಪ್ರಿಟೋರಿಯಾಗೆ ಸಾಗಿಸಲಾಯಿತು. ಕಲ್ಲು ಗುಂಡಿಗಳ ಹಾಳು ದಾರಿಯಲ್ಲಿ ಸಾಗುತ್ತಿದ್ದ ವ್ಯಾನಿನಲ್ಲೆ ಸ್ಟೀವ್ ಪ್ರಾಣ ಬಿಟ್ಟಿದ್ದ. (ಸ್ಟೀವ್ ಬರೆದ I like What I like ಎಂತಹ ಅದ್ಭುತ ಪುಸ್ತಕ!)
ಸ್ಟೀವ್ ಈ ಬರ್ಬರ ಹತ್ಯೆಯಿಂದ ದಕ್ಷಿಣ ಆಫ್ರಿಕಾ ಉದ್ವಿಗ್ನಗೊಂಡಿತ್ತು. 1976, ಜೋಹಾನ್ಸ್ಬರ್ಗ್ ನಗರದ ಸೋವೆತೋ ಎಂಬ ಸ್ಲಮ್ ಒಂದರಲ್ಲಿ ಬಿಳಿಯ ಪೊಲೀಸರು ನಡೆಸಿದ ನರಮೇಧದಲ್ಲಿ ಸುಮಾರು 700 ಕಪ್ಪು ವರ್ಣದವರು ಪ್ರಾಣ ಕಳೆದುಕೊಂಡಿದ್ದರು. (Soweto- South West Township) ಸ್ಟೀವ್ ಬೀಕೋವನ್ನ ಕೊಲ್ಲಲಾಗಿದೆ ಎಂಬ ಸುದ್ದಿ ತಿಳಿದ ಕಪ್ಪು ಜನರು ಮತ್ತೆ ದಂಗೆಯೇಳುವ ಎಲ್ಲಾ ಸೂಚನೆಗಳಿದ್ದವು. ಡೆಸ್ಮಂಡ್ ಟುಟು ಉದ್ವಿಗ್ನ ಪರಿಸ್ಥಿತಿಯನ್ನ ತಿಳಿಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಉಬುಂಟು (ಸ್ಥಳೀಯ ಬುಡಕಟ್ಟು ಸಂಸ್ಕೃತಿ) ಥಿಯಾಲಜಿಯಲ್ಲಿ ಅಪಾರ ನಂಬಿಕೆಯಿದ್ದ ಟುಟು ಅಂದು ಮಾನವೀಯತೆ, ಪ್ರೀತಿ, ದಯೆ, ಅಹಿಂಸೆಯಲ್ಲಿ ದೇವರ ದೊಷಾತೀತ ನ್ಯಾಯದಲ್ಲಿ ನಂಬಿಕೆಯಿಡಿ ಸೇಡಿನಲ್ಲಲ್ಲ ಎಂದು ಕರೆನೀಡಿದ್ದರು.


ಆರ್ಕ್ ಬಿಷಪ್ ಟುಟು ಅವರ ಭಾಷಣ ಹಾಗು ಪ್ರವಚನಗಳಲ್ಲಿ ಉಬುಂಟು ಜನಪದ ಸಂಪ್ರದಾಯದ ಪ್ರಭಾವವಿತ್ತು. People are people because of other people ಎಂಬ ಉದ್ಧಾತ ಸಂಪ್ರದಾಯವದು. ಕ್ರೈಸ್ತ ಧರ್ಮಗುರುವಾಗಿ ಟುಟು ಒಮ್ಮೆ- ಆಫ್ರಿಕಾಕ್ಕೆ ಕ್ರಿಸ್ಚಿಯನ್ ಮಿಷಿನರಿಗಳು ಬಂದಾಗ ಅವರ ಕೈಯಲ್ಲಿ ಬೈಬಲ್ ಇತ್ತು ನಮ್ಮ ಬಳಿ ಭೂಮಿಯಿತ್ತು. ಬಿಳಿಯರು “ಬನ್ನಿ ಪ್ರಾರ್ಥಿಸೋಣ” ಎಂದು ಕರೆ ನೀಡಿದರು. ನಾವು ಕಣ್ಣು ಮುಚ್ಚಿದೆವು. ಕಣ್ತೆರೆದು ನೋಡಿದಾಗ ನಮ್ಮ ಕೈಯಲ್ಲಿ ಬೈಬಲ್ ಇತ್ತು, ಅವರ ಬಳಿ ಭೂಮಿ ಇತ್ತು.” ಎಂಬ ಹೇಳಿಕೆ ಕೊಟ್ಟರು. ಬಿಳಿಯರು ಧರ್ಮವನ್ನ ತಮ್ಮ ವಸಾಹತುಗಳಲ್ಲಿ ಹೇಗೆ ಬಳಸಿಕೊಂಡರು ಎಂಬುದರ ಸ್ಪಷ್ಟತೆ ಅವರಿಗಿತ್ತು. ಸತ್ಯ ಕಹಿಯಾಗಿದ್ದರು ಯಾವುದೇ ಮುಚ್ಚು ಮರೆಯಿಲ್ಲದೆ ಅದನ್ನ ಹೇಳುತ್ತಿದ್ದರು ಟುಟು.


ಹಿಂಸೆ ತಡೆಯುವುದಕ್ಕೆ ಜೀವಭಯವಿಲ್ಲದೆ ಜನಸಾಗರದಲ್ಲಿ ಧುಮುಕಿಬಿಡುವುದು ಟುಟುಗೆ ಸಾಮಾನ್ಯವಾಗಿತ್ತು, 1985, ಜೋಹಾನ್ಸ್ಬರ್ಗ್ ನಗರದಿಂದ ಮೂವತ್ತು ಕಿಲೋಮೀಟರು ದೂರದ ದುದುಜ ಪಟ್ಟಣ. ಪೋಲೀಸರ ಗುಂಡಿಗೆ ಬಲಿಯಾದ ನಾಲ್ಕು ಕಪ್ಪು ವರ್ಣದವರ ಅಂತ್ಯಕ್ರಿಯೆಯನ್ನ ಟುಟು ನಡೆಸಿಕೊಡುತ್ತಿದ್ದಾರೆ. ಅಲ್ಲಿ ನೆರೆದಿದ್ದ ಜನರಲ್ಲೇ ಇದ್ದ ಕಪ್ಪು ಯುವಕನೊಬ್ಬ ಪೋಲೀಸರ ಮಾಹಿತಿದಾರ ಎಂದು ತಿಳಿದು ಬರುತ್ತದೆ. ಜನ ಅವನನ್ನ ಹಿಡಿದು ಥಳಿಸ ತೊಡಗುತ್ತಾರೆ. ಆತನಿಗೆ ನೆಕ್ಲೆಸ್ (ಅಪಾದಿತನ ಕೈ ಕಟ್ಟಿ ಹಳೆಯ ರಬ್ಬರ್ ಟೈರ್ ಒಂದನ್ನ ಕೊರಳಿನ ಸುತ್ತ ಹಾಕಿ ಬೆಂಕಿ ಹಚ್ಚುವುದು) ಹಾಕಲು ಮುಂದಾಗುತ್ತಾರೆ. ಟುಟು ಚಂಗನೆ ಜಿಗಿದು ಅಪಾದಿತನನ್ನ ತಬ್ಬಿ “ This undermines the struggle… let us not use methods in the struggle that we will later be ashamed of… ಮುಂದೆ ನಾಚಿಕೆಯಿಂದ ತಲೆ ತಗ್ಗಿಸುವಂತಹ ವಿಧಾನಗಳನ್ನ ನಮ್ಮ ಹೋರಾಟದಲ್ಲಿ ಬಳಸುವುದು ಬೇಡ ಅಂತ ಕೂಗುತ್ತಾರೆ. ಅಹಿಂಸೆ ಪಾಲಿಸುವವ ಹೇಡಿಯಲ್ಲ ಆತ ಧೈರ್ಯವಂತ ಮತ್ತು ಶೂರ ಎಂಬ ಗಾಂಧಿಯ ಮಾತುಗಳು ಟುಟುವಿಗೆ ಸಂಪೂರ್ಣವಾಗಿ ಅನ್ವಯಿಸುತ್ತದೆ.


ನವೆಂಬರ್ 1989ರಲ್ಲಿ ಬರ್ಲಿನ್ ಗೋಡೆ ಉರುಳಿತು. ಪೂರ್ವ ಮತ್ತು ಪಶ್ಚಿಮ ಜರ್ಮನಿಗಳು ಒಂದಾದವು. ವರ್ಣಬೇಧ ನೀತಿ ಕೊನೆಗೊಳ್ಳುವ ದಿನಗಳು ಸಮೀಪಿಸುತ್ತಿದ್ದವು. ದಕ್ಷಿಣ ಆಫ್ರಿಕಾದ ಬಿಳಿಯ ಪ್ರಧಾನಿ ಬೋಥ ಅವರಿಗೆ “ ಕಪ್ಪು ವರ್ಣದವರಿಗೆ ಒಳ್ಳೆಯ ದಿನಗಳು ಬರುತ್ತಿವೆ. ಬೋಥ ನೀವು ಕೂಡ ಕಪ್ಪು ಚಳುವಳಿಗೆ ಬೆಂಬಲ ನೀಡಿಬಿಡಿ” ಅಂತ ಹೇಳುವ ಧೈರ್ಯ ಟುಟುವಿಗಿತ್ತು.

ಇಪ್ಪತ್ತೇಳು ವರ್ಷಗಳ ನಂತರ ಬಿಡುಗಡೆಗೊಂಡ ಮಂಡೇಲರನ್ನ ಆಲಿಂಗಿಸಿ ಬರಮಾಡಿಕೊಂಡವರಲ್ಲಿ ವಿನ್ನಿ ಮಂಡೇಲ, ಟುಟು ಮೊದಲಿಗರಾಗಿದ್ದರು. ಮಂಡೇಲ ಸ್ವತಂತ್ರ ದಕ್ಷಿಣ ಆಫ್ರಿಕಾದ ಮೊದಲ ರಾಷ್ಟ್ರಪತಿಯಾದರು. ಅವರಿಗೆ ಪ್ರಮಾಣವಚನ ಬೋಧಿಸಿದ್ದು ಇದೇ ಡೆಸ್ಮಂಡ್ ಟುಟು. ಸೇಡು ದ್ವೇಷಗಳನ್ನ ಮರೆತು ಎಲ್ಲ ವರ್ಣದವರು ಸೌಹಾರ್ದತೆಯಿಂದ ಬದುಕುವ ದೇಶ ನಮ್ಮದಾಗಬೇಕೆಂಬ ಆಶಯದಿಂದ ಆಫ್ರಿಕವನ್ನ ರೈನ್ಬೊ ದೇಶ (Rainbow Nation) ಎಂದು ಹೆಸರಿಟ್ಟವರು ಟುಟು. ಜೊಸ, ಜೂಲು ಬುಡಕಟ್ಟು ಜನಾಂಗಗಳ ನಡುವೆ ಕಲಹ ಪರಿಹರಿಸಿ ಸಾಮರಸ್ಯ ತರುವಲ್ಲಿ ಮಂಡೇಲ/ಟುಟು ಅವರ ಕೊಡುಗೆ ಸ್ಮರಣಿಯ.


ಸ್ವಾತಂತ್ರ್ಯ ನಂತರ ಟುಟು ಸತ್ಯ ಸಮನ್ವಯ ಸಮಿತಿಯ (Truth and Reconciliation Committee) ಮುಖ್ಯಸ್ಥರಾದರು. ವರ್ಣಬೇಧ ನೀತಿಯ ಕಾಲದ ಭಯಾನಕ ಸತ್ಯಗಳನ್ನ ಎದುರುಗೊಳ್ಳುವ ಸಮಯವದು. ಸಾವಿರಾರು ಬಿಳಿಯರು, ಪೊಲೀಸರು ಮತ್ತು ಕೆಲ ಕಪ್ಪು ವರ್ಣದವರು ಸಮಿತಿಯ ಮುಂದೆ ಹಾಜರಾಗಿ ಮಾಡಿದ ಘೋರ ತಪ್ಪು ಕಗ್ಗೊಲೆಗಳನ್ನ ಒಪ್ಪಿಕೊಂಡರು. ಅವರಲ್ಲಿ ತಪ್ಪೋಪ್ಪಿಕೊಳ್ಳುವ ಆತ್ಮವಿಶ್ವಾಸ ಮೂಡಿದ್ದೆ ಟುಟುವಿನಿಂದ. ಕಳೆದ ದಶಕದಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಅಲ್ಪಸಂಖ್ಯಾತ ಬಿಳಿಯರ ಮೇಲೆ ನಡೆಸಿದ ದಾಳಿಗಳನ್ನೂ, ಸರ್ಕಾರದ ಭ್ರಷ್ಟಚಾರವನ್ನ, ಜಾಕೋಬ್ ಜೂಮ ಅವರ ಅಪ್ರಮಾಣಿಕ ಆಳ್ವಿಕೆಯನ್ನ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳುವ ನಿಷ್ಠುರತೆ ಟುಟುವಿಗಿತ್ತು. ಗಾಂಧಿ, ಮಾರ್ಟಿನ ಲೂಥರ್ ಕಿಂಗ್, ಮಂಡೇಲ, ಮಾಲ್ಕಂ x, ಸಿಸುಲುರವರ ಸಾಲಿನಲ್ಲಿ ಟುಟುವಿಗೂ ಜಾಗವಿದೆ. ಹೋಗಿ ಬನ್ನಿ, ಟುಟು… ನಿಮ್ಮ ಕೊಡುಗೆ ಅಪಾರ.

  • * ಹರೀಶ್ ಗಂಗಾಧರ್