ನಂಗಲಿ: ಕಿರುಮಣಿ ಮಿಟ್ಟೆ ಬಳಿ ಮಾಂಸಹಾರಿ ಹೋಟೆಲ್ಲನ್ನು ಕೆಲವು ಕಿಡಿ ಗೇಡಿಗಳು ಭಾನುವಾರ ರಾತ್ರಿ ಸಮಯದಲ್ಲಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ನಾಗನಹಳ್ಳಿ ಗ್ರಾಮದ ರಘುಪತಿ ದಂಪತಿಗಳು ಜೀವನ ನಿರ್ವಹಣೆಗಾಗಿ ಹೆಬ್ಬಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿರುಮಣಿ ಮಿಟ್ಟೆಯ ಆಂಧ್ರಪ್ರದೇಶದ ಪುಂಗನೂರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಇರುವುದರಿಂದ ಮಾಂಸಹಾರಿ ಹೋಟೆಲನ್ನು ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಮತ್ತು ವ್ಯಾಪಾರ ಚೆನ್ನಾಗಿ ಆಗುತ್ತಿದ್ದರಿಂದ ಅಕ್ಕಪಕ್ಕದವರಿಗೆ ಹೊಟ್ಟೆ ಕಿಚ್ಚು ಇತ್ತು. ಆದ್ದರಿಂದ ತಮಗಾಗದವರು ಯಾರೋ ಭಾನುವಾರ ರಾತ್ರಿ ಸುಮಾರು 11.45 ಸಮಯಕ್ಕೆ ಹೋಟೆಲ್ಲಿಗೆ ಬೆಂಕಿ ಹಚ್ಚಿ ಹೋಟೆಲನ್ನು ಪೆಟ್ರೋಲ್ ನಿಂದ ಸಂಪೂರ್ಣವಾಗಿ ಸುಟ್ಟು ನಾಶ ಪಡಿಸಿದ್ದಾರೆ ಎಂದು ಮಾಲೀಕ ರಘುಪತಿ ಅಳಲು ತೋಡಿಕೊಂಡರು.
ಇಬ್ಬರು ಮಕ್ಕಳನ್ನು ಓದಿಸಲು ಮತ್ತು ಜೀವನ ನಡೆಸಲು ಮಾಂಸಹಾರಿ ಹೋಟೆಲನ್ನು ನಡೆಸಲಾಗುತಿತ್ತು. ಮತ್ತು ಪ್ರತಿದಿನ ಒಳ್ಳೆಯ ವ್ಯಾಪಾರ ಆಗುತ್ತಿದ್ದರಿಂದ ಜೀವನ ಸ್ವಲ್ಪಮಟ್ಟಿಗೆ ಚೆನ್ನಾಗಿ ಸಾಗುತಿತ್ತು. ಆದರೆ ಕಿರುಮಣಿ ಮಿಟ್ಟೆಯ ಬಾರಲ್ಲಿ ಕುಡಿದು ಯಾರೋ ಬೆಂಕಿ ಹಚ್ಚಿರಬಹುದು ಅಥವಾ ತಮಗೆ ಆಗದವರು ಬೆಂಕಿ ಹಚ್ಚಿರಬಹುದು. ಇದರಿಂದ ಮುಂದೆ ಜೀವನ ಸಾಗಿಸುವುದು ಹೇಗೆಂದು ತಿಳಿಯದಂತಾಗಿದೆ ಎಂದು ರಘುಪತಿ ಹೇಳಿದರು.
ಇನ್ನು ಹೋಟೆಲ್ಲಿನಲ್ಲಿ ಸಾವಿರಾರು ರೂಪಾಯಿಗಳ ಸಾಂಬಾರ್ ಪದಾರ್ಥಗಳು ಹಾಗೂ ಹೋಟೆಲ್ಲಿಗೆ ಸಂಭಂಧಿಸಿದ ಸುಮಾರು ವಸ್ತುಗಳು ಬೆಂಕಿಯಲ್ಲಿ ನಾಶವಾಗಿದ್ದು ಸುಮಾರು ಐವತ್ತು ಸಾವಿರ ರೂಪಾಯಿಗಳ ವಸ್ತುಗಳು ಮತ್ತು ಅಡುಗೆ ಪದಾರ್ಥಗಳು ನಾಶವಾಗಿದೆ ಎಂದು ತಿಳಿಸಿದರು .