ಹೋರಾಟದ ಹಾದಿ ಎಂದಿಗೂ ಸುಲಭದ್ದಾಗಿರುವುದಿಲ್ಲ. ಅದು ಸುಗಮವಾದ ದಾರಿಯು ಅಲ್ಲ. ದುರ್ಗಮ ಹಾದಿ ಕ್ರಮಿಸಿ ಯಶಸ್ಸು ಕಾಣಬೇಕಾದರೆ ವರುಷಗಳೇ ಉರುಳಬಹುದು, ಹಲವರ ತಲೆಗಳೂ ಉರುಳಬಹುದು. ಬದಲಾವಣೆ ಆಮೆ ಗತಿಯಲ್ಲಿ ಬರುತ್ತದೆ, ಜನರ ಮನಸ್ಥಿತಿ ಬದಲಾವಣೆ ಕಷ್ಟ ಸಾಧ್ಯವೆಂದೆನಿಸಿ ಹತಾಶೆ ಅಟ್ಟಹಾಸ ಬೀರುತ್ತದೆ. ಆದರೆ ನಿರಾಶೆ ಬದಿಗೊತ್ತಿ ಬದಲಾವಣೆಗಾಗಿ, ಮುಂದಿನ ಪೀಳಿಗೆ ಜೀವಿಸಬಲ್ಲ ಮಾನವೀಯ, ಹಿತಕರ ಜಗತ್ತಿಗಾಗಿ ಹೋರಾಟ ಮಾಡುತ್ತಲೇ ಇರಬೇಕು.
ಅದು ೧೯೩೦ ದಶಕ, ಅಮೇರಿಕಾದಲ್ಲಿ ಆರ್ಥಿಕ ಮುಗ್ಗಟ್ಟಿನ ದುಸ್ತರ ದಿನಗಳು. ಬಿಳಿಯರಿಗೆ ಬದುಕುವುದು, ಕೆಲಸ ಕಂಡುಕೊಳ್ಳುವುದು ಕಠಿಣವಾದರೆ, ಕಪ್ಪು ವರ್ಣದ ಆಫ್ರೋ ಅಮೆರಿಕಾನ್ನರಿಗೆ ಬಾಳು ಭೀಕರ. ತಿನ್ನಲು ಒಂದೊತ್ತಿನ ಕೂಳು ಇಲ್ಲದಿರುವಾಗ, ಕಪ್ಪು ವರ್ಣದವರನ್ನ ಇರಿದು ಕೊಂದ ಸುದ್ದಿ, ಬೀದಿ ಬೀದಿಗಳಲ್ಲಿ ಸಾಯೋವರೆಗೆ ಬಡಿದ ಸುದ್ದಿಗಳನ್ನ ಕೇಳಿ ಕೇಳಿ ಕಪ್ಪು ವರ್ಣದವರು ಅಮೇರಿಕಾದಲ್ಲಿ ಎರಡನೇ ದರ್ಜೆಯ ನಾಗರೀಕರು ಎಂಬ ಭಾವನೆ ಅವನ ಮನದಲ್ಲಿ ಮೂಡ ತೊಡಗಿತ್ತು. ಆದರೂ ಓದಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಬಿಳಿಯರಿಗೆ ಸಮಾನವಾಗಿ ನಿಲ್ಲುವ ಛಲ.
ಕಪ್ಪುವರ್ಣದವರಾದರು ಸುಶಿಕ್ಷಿತರಾಗಿದ್ದ ಅಪ್ಪ ಅಮ್ಮನಿಂದ ಬಂದ ಬಳುವಳಿ ಈ ಓದುವ ಹುಚ್ಚು. ಹೇಗಾದರೂ ಮಾಡಿ ಬಿಳಿಯನಾಗಿಬಿಡುವ ಆಸೆ ಅವನಿಗೆ. ತರಗತಿಯಲ್ಲಿ ಆತನೊಬ್ಬನೇ ಕಪ್ಪು ಬಣ್ಣದ ಹುಡುಗ. ಏ ನಿಗ್ಗರ್ ಎಂದು ಕರೆಸಿಕೊಳ್ಳುವುದು ಆತನಿಗೆ ಸಾಮಾನ್ಯವಾಗಿತ್ತು. ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಓದಿನ ಕಡೆಗೆ ಗಮನಹರಿಸಿದ್ದ. ಮನೆಯ ಪರಿಸ್ಥಿತಿ ಬಿಗಾಡಾಯಿಸಿತ್ತು. ಕ್ರಾಂತಿಕಾರಿಯಾದ ಅಪ್ಪ ಕೊಲೆಯಾಗಿ ಹೋಗಿದ್ದ, ವಿದ್ಯಾವಂತಳಾದರು, ತನ್ನ ಓದಿಗೆ ಸಮನಾದ ಕೆಲಸ ಸಿಗದೆ, ಕುಟುಂಬದ ಜವಾಬ್ದಾರಿಗಳಿಂದ ಕುಗ್ಗಿ ಅಮ್ಮ ಖಿನ್ನತೆಗೆ ಒಳಗಾಗಿದ್ದಾಳೆ. ತಮ್ಮ ಅಕ್ಕಂದಿರು ಕೂಳಿಗಾಗಿ ಬೇರೆ ಬೇರೆ ಕುಟುಂಬಗಳ ಜೊತೆ ಬಾಳ ತೊಡಗಿದ್ದಾರೆ. ಕುಟುಂಬವೇ ಹರಿದು ಹಂಚಿಹೋಗಿದೆ.
ಮತ್ತೊಂದೆಡೆ ಹದಿಮೂರ ವರ್ಷದ ಅವನ ತರಗತಿಯ ಗೆಳೆಯರೆಲ್ಲ ತಮ್ಮ ಬಿಳಿಯ ಗೆಳೆತಿಯೊರೊಂದಿಗೆ ಡೇಟಿಂಗ್, ಕುಣಿತದಲ್ಲಿ ಮಗ್ನರಾಗಿದ್ದಾರೆ. ತರಗತಿಯ ಏಕೈಕ ಕಪ್ಪು ವರ್ಣದ ಹುಡುಗನಿಗೆ ಬಿಳಿಯ ಹುಡುಗಿಯ ಜೊತೆ ಕಾಣಿಸಿಕೊಂಡು ಓಡಾಡುವುದರ, ಪ್ರಪೋಸ್ ಮಾಡುವುದರ ಪರಿಣಾಮ ಚನ್ನಾಗಿಯೇ ತಿಳಿದಿತ್ತು. ಸಹಜವಾದ ಆಸೆಗಳು ಚಿಗುರಿದಾಗ ಮರಗಳಿಂದ ನೇತಾಡುತ್ತಿದ್ದ, ರಸ್ತೆಯ ಬದಿಯಲ್ಲಿ ಮುದ್ದೆಯಾಗಿ ಬಿದ್ದಿದ್ದ ಕೊಳೆತ ಆಫ್ರೋ ಅಮೇರಿಕನ್ ಶವಗಳು ಅವನ ಕಣ್ಮುಂದೆ ಹಾದು ಹೋಗುತ್ತಿದ್ದವು.
ಹೀಗಿರುವಾಗ ಆ ದಿನ ಅವನಿಗೆ ಆಕಾಶವೇ ಕಳಚಿ ಬಿದ್ದಾಂಗಿತ್ತು. ತರಗತಿ ಬಂದ ಟೀಚರ್ ಒಬ್ಬರು ಒಂದು ಪ್ರಶ್ನೆ ಕೇಳಿದ್ದರು. “ನೀನು ಮುಂದೆ ಜೀವನದಲ್ಲಿ ಏನು ಮಾಡ ಬೇಕೆಂದಿದ್ದಿ?” ಎಂದು. ಆ ಟೀಚರ್ ಆತನಿಗೆ ಅಚ್ಚುಮೆಚ್ಚು. ಎಂದೂ ಯಾರ ಮುಂದೆಯೂ ಹೇಳಿಕೊಳ್ಳದ ತನ್ನೆಲ್ಲಾ ಮಹಾಭಿಲಾಷೆಗಳನ್ನ ಅವರ ಮುಂದೆ ಹೇಳಿಕೊಂಡು ಬಿಡುವ ತವಕದಲ್ಲಿ ಅಂದು ಮನಸ್ಸು ಬಿಚ್ಚಿ ಮಾತನಾಡಿದ್ದ. ಬಹಳ ಸಂತೋಷದಿಂದ ಸ್ಪಂದಿಸಿ, ಉತ್ತೇಜನ ನೀಡುವರೆಂಬ ನಿರೀಕ್ಷೆಯಲ್ಲಿ. ” ನಾನು ವಕೀಲನಾಗಬೇಕೆಂದಿದ್ದೇನೆ ಸರ್” ಎಂದ. ಟೀಚರ್ ಒಂದು ಗಳಿಗೆ ಕಸಿವಿಸಿಗೊಂಡರು ಸುಧಾರಿಸಿಕೊಂಡು ಹೇಳಿದ- ” ನೋಡು, ನೀನು ಅಂದ್ರೆ ನನಗಿಷ್ಟ. ನನಗೇ ಏಕೆ ತರಗತಿಗೆಲ್ಲಾ ನೀನಿಷ್ಟ. ಅದು ನಿನಗೆ ಗೊತ್ತಿದೆ ಕೂಡ. But you’ve got be realistic about being a nigger. A lawyer – that’s no realistic goal for a nigger. ನೀನು ಕರಿಯ. ಸ್ವಲ್ಪ ರಿಯಲಿಸ್ಟಿಕ್ ಆಗಿ ಯೋಚಿಸು. ಏನಾದ್ರೂ ನಿಜವಾಗಿಯೂ ಆಗುವುದಂತದನ್ನು ಮಾಡು. ನೀನು ಬಡಗಿ ಏಕಾಗಬಾರದು? ಎಂಬ ಪ್ರಶ್ನೆ ಕೇಳಿದ್ದ!
ಅಂದು ಅಮೇರಿಕಾದಲ್ಲಿ ಕಪ್ಪು ವರ್ಣದವರು ಯಶಸ್ವಿಯಾಗಲಾರರು ಎಂಬ ಅರಿವು ಮೂಡಿತ್ತು. ಅಲ್ಲಿಯವರೆಗೆ ಶ್ರದ್ದೆಯಿಂದ ಓದಿ, ಶ್ರಮಪಟ್ಟು ಅಭಾಸ ಮಾಡಿ ಒಳ್ಳೆಯ ಅಂಕಗಳನ್ನ ಗಳಿಸಿದರೆ ನಾನು ಕೂಡ ಬಿಳಿಯರಂತಾಗಬಹುದು ಎಂದುಕೊಂಡಿದ್ದ. ಅಂದು ಅವನ ಅಮೇರಿಕನ್ ಕನಸು ಸತ್ತು ಬಿದ್ದಿತ್ತು. ಅಂದಾದ ನಿರಾಸೆ ನಡುವೆಯೂ ಆತನಿಗೆ ತನ್ನ ಅಚ್ಚುಮೆಚ್ಚಿನ ಟೀಚರ್ ಮೇಲೆ ಸಿಟ್ಟೇನು ಬಂದಿರಲಿಲ್ಲ. ಶಾಲೆಯ ಟೀಚರ್ ಕೆಟ್ಟ ಸಲಹೆಯನ್ನೇನು ಕೊಟ್ಟಿರಲಿಲ್ಲ. ಅಮೇರಿಕಾದ ವ್ಯವಸ್ಥೆ ಹಾಗಿತ್ತು. ಕಪ್ಪುವರ್ಣದವರು ವ್ಯಾಸಂಗ ಮಾಡಿ ದೊಡ್ಡ ದೊಡ್ಡ ಡಿಗ್ರಿಗಳನ್ನ ಗಳಿಸಿದರೆ ಅರ್ಹತೆ, ಪ್ರತಿಭೆಗಳಿದ್ದರು ಅವರಿಗೆ ಅಷ್ಟೇ ದೊಡ್ಡ ಮಟ್ಟದ ಕೆಲಸವೇನು ಸಿಗುತ್ತಿರಲಿಲ್ಲ. ದೊಡ್ಡ ಹುದ್ದೆಗಳು, ಆಡಳಿತ, ರಾಜಕೀಯ ಎಲ್ಲವು ಬಿಳಿಯರಿಗೆ ಮಾತ್ರವೆಂಬ ಅಪ್ರಕಟಿತ ಶಾಸನ ಜಾರಿಯಲ್ಲಿತ್ತು. ಕಪ್ಪುವರ್ಣದವರು ಶ್ರಮಪಟ್ಟು ಓದಿ ಹುದ್ದೆ ಗಿಟ್ಟಿಸಿಕೊಂಡರೂ ಆ ಹುದ್ದೆಯಲ್ಲಿ, ಬಿಳಿಯ ಬೇಟೆ ನಾಯಿಗಳ ನಡುವೆ ಬಹುಕಾಲ ಬಾಳುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಕಪ್ಪು ವರ್ಣದ ಆಫ್ರೋ ಅಮೆರಿಕನ್ನರು ಓದದೇ ಬಿಳಿಯರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬದುಕಿಬಿಡುತ್ತಿದ್ದರು. ಇಂತಹ ಬದುಕುವ ಮಾರ್ಗವನ್ನೇ ಟೀಚರ್ ಸೂಚಿಸಿದ್ದು.
ಮಾಲ್ಕಮ್ ಬಾಲ್ಯ ಹೀಗಾದರೆ ಅವನ ತಂದೆಯ ಬದುಕು ಅವಮಾನ, ಹೋರಾಟಗಳದ್ದು. ತಂದೆ ಅರ್ಲ್ ಲಿಟಲ್ಗೆ ಇರುವ ಪ್ರಪಂಚವನ್ನ ಇರುವ ಹಾಗೆ ಸ್ವೀಕರಿಸಲು ಆಗುತ್ತಿರಲಿಲ್ಲ. ಪ್ರಪಂಚವನ್ನ ಬದಲಾಯಿಸಬೇಕು, ಕಪ್ಪು ವರ್ಣದವರಿಗೆ ಗೌರವ, ಘನತೆಗಳನ್ನ ತಂದುಕೊಡಬೇಕೆಂಬ ಹಂಬಲ, ಕನಸು. ಲಿಟಲ್ ಎಂಬ ಹೆಸರಿನವನಾದರೂ ಎತ್ತರದ ಆಳು ಆತ. ಬರಿಯ ಶ್ರಮ, ದೈಹಿಕ ಶಕ್ತಿಯ ಮೇಲೆ ಅವಲಂಬಿತನಾಗದೆ ತನ್ನ ಬುದ್ದಿ ಶಕ್ತಿಯನ್ನೂ ಬಳಸುತ್ತಿದ್ದ ಅಪರೂಪದ ವ್ಯಕ್ತಿ. ಆಫ್ರೋ ಅಮೆರಿಕನ್ ಜನರನ್ನ ಹೀನಾಯ ಗುಲಾಮಗಿರಿಯ ಸಂಕೋಲೆಗಳಿಂದ ಮುಕ್ತಗೊಳಿಸಿ, ಬಿಳಿಯರಿಗೆ ಸರಿಸಮಾನರಾಗಿ ನಿಲ್ಲುವ ಹಾಗೆ ಮಾಡಬೇಕೆಂಬ ಹಠ.
1919ರಲ್ಲಿ ಅರ್ಲ್ ಲೂಯಿಯನ್ನ ಮದುವೆಯಾದ. ನವ ದಂಪತಿಗಳು ಫಿಲಿಡೆಲ್ಫಿಯಾ ನಗರದಲ್ಲಿ ನೆಲೆಸಿದರು. 1919 ಅಮೇರಿಕಾದ ಕಪ್ಪುವರ್ಣದವರಿಗೆ ಅತ್ಯಂತ ಹತಾಶೆಯ ವರುಷ. ಎಲ್ಲ “ಯುದ್ಧಗಳಿಗೆ ಅಂತ್ಯವಾಡುವ ಯುದ್ಧ” ಎಂದೇ ಖ್ಯಾತಿ ಪಡೆದಿದ್ದ ಮೊದಲನೇ ಮಹಾ ಯುದ್ಧ ಅಂತ್ಯಗೊಂಡಿತ್ತು. ಆಫ್ರೋ ಅಮೇರಿಕನ್ನರು ಎಲ್ಲೆಡೆ ವೀರಾವೇಷದಿಂದ ಹೋರಾಡಿ ಶೌರ್ಯಕ್ಕೆ, ಸಾಹಸಕ್ಕೆ ಹೆಸರುವಾಸಿಯಾದರು. ಯುದ್ಧ ಭೂಮಿಯಲ್ಲಿ ಅವರು ತೋರಿದ ಪರಾಕ್ರಮಗಳನ್ನ ಯುರೋಪಿಯನ್ ದೇಶಗಳು ಗುರುತಿಸಿ ಪದಕ ಬಿರುದುಗಳನ್ನ ನೀಡಿ ಸನ್ಮಾನಿಸಿತು. ಆಫ್ರೋ ಅಮೆರಿಕನ್ನರು ವರ್ಣಭೇದ ಕೊನೆಗೊಳ್ಳುವುದೆಂಬಕನಸು ಕಾಣತೊಡಗಿದರು. ಆದರೆ ನಿರಾಶೆ ಕಾದಿತ್ತು. ಆಫ್ರೋ ಅಮೆರಿಕನ್/ಕಪ್ಪು ವರ್ಣದವರಿಗೆ ಸಿಗಬೇಕಿದ್ದ ಪ್ರಶಂಸೆ ಸಿಗಲೇ ಇಲ್ಲ. ಆಫ್ರೋ ಅಮೆರಿಕನ್ನರು ಕೂಡ ಅಮೆರಿಕಾದ ಪ್ರಜೆಗಳೇ ಎಂದು ಬಿಳಿಯರು ಸ್ವೀಕರಿಸಲೇ ಇಲ್ಲ. ಕಪ್ಪು ವರ್ಣದವರ ಜೀವನದಲ್ಲಿ ಯಾವ ರೀತಿಯ ಬದಲಾವಣೆಯು ಬರಲಿಲ್ಲ. ಬಿಳಿಯರಿಗಿದ್ದ ಹಕ್ಕುಗಳು ಕಪ್ಪು ವರ್ಣದವರಿಗೆ ಇರಲಿಲ್ಲ, ಕಪ್ಪು ವರ್ಣದವರು ಬಿಳಿಯರೊಡನೆ ಬೆರೆಯುವ ಹಾಗಿರಲಿಲ್ಲ, ರೈಲಿನ ಒಂದೇ ಬೋಗಿಯಲ್ಲಿ ಪ್ರಯಾಣ ಮಾಡುವಂತಿರಲಿಲ್ಲ, ಒಂದೇ ಪಾರ್ಕಿನಲ್ಲಿ ಆಡುವಂತಿರಲಿಲ್ಲ, ಒಂದೇ ಕೊಳವೆಯಿಂದ ನೀರುಕುಡಿಯುವ ಹಾಗಿರಲಿಲ್ಲ, ವಿಲಕ್ಷಣ ಜಿಮ್ ಕ್ರೌ ನೀತಿ ಎಲ್ಲೆಡೆ ಜಾರಿಯಲ್ಲಿತ್ತು. ಆಫ್ರೋ ಅಮೆರಿಕನ್ನರೂ ಸಮಾನರೇ ಆದರೆ ಅವರು ಪ್ರತ್ಯೇಕ. ವರ್ಣಭೇದ ಲೀಗಲ್ ಆಗಿದ್ದವು. ಯಾವುದೇ ಕಾನೂನು, ಸರ್ಕಾರಿ ಮೇಲಧಿಕಾರಿಗಳು, ವಕೀಲರು ಅವರ ಸಹಾಯಕ್ಕೆ ಬರುತ್ತಿರಲಿಲ್ಲ. ದೇಶಕ್ಕಾಗಿ ದುಡಿದರು, ಮಡಿದರು ಕಪ್ಪು ವರ್ಣದವರು ಅಮೇರಿಕಾದಲ್ಲಿ ಎರಡನೇ ದರ್ಜೆ ಪ್ರಜೆಗಳಾಗಿಯೇ ಉಳಿದುಬಿಟ್ಟರು. ಎಲ್ಲಕ್ಕಿಂತ ಹೆಚ್ಚಾಗಿ ಕಪ್ಪುವರ್ಣದವರನ್ನ ಬೆಚ್ಚಿ ಬೀಳಿಸುತ್ತಿದ್ದುದು ಬಿಳಿಯರು ಯಾವುದೇ ಅಳುಕಿಲ್ಲದೆ ಎಸೆಗುತ್ತಿದ್ದ ದೌರ್ಜನ್ಯಗಳು. ಕಪ್ಪುವರ್ಣದವರ ಮೇಲೆ ಇಲ್ಲ ಸಲ್ಲದ ಆರೋಪ ಹೊರೆಸಿ ಅವರನ್ನ ಅಮಾನುಷವಾಗಿ ಕೊಂದುಬಿಡುತ್ತಿದ್ದರು.
ಇಂತಹ ಕೃತ್ಯವೊಂದಕ್ಕೆ ಅರ್ಲ್ ಸಾಕ್ಷಿಯಾಗಿದ್ದ. ಓಹಾಮಾದ ಆಫ್ರೋ ಅಮೆರಿಕನ್ ವಿಲ್ ಬ್ರೌನ್ ಎಂಬುವವನ ಬಿಳಿಯ ಮಹಿಳೆಯೊಬ್ಬಳ ಮೇಲೆ ಹಲ್ಲೆ ಮಾಡಿದನೆಂದು ಆರೋಪ ಹೊರೆಸಲಾಯಿತು. ಪೊಲೀಸರು ಯಾವುದೇ ಪುರಾವೆಗಳಿಲ್ಲದೆ ಆತನನ್ನು ಬಂಧಿಸಿದರು. ಬಂಧನದಲ್ಲಿದ್ದ ಬ್ರೌನ್ ನನ್ನು ತಮಗೆ ಒಪ್ಪಿಸಬೇಕೆಂದು ಬಿಳಿಯರು ಜೈಲಿಗೆ ಮುತ್ತಿಗೆ ಹಾಕಿದರು. ಅವರಿಗೆ ಸಮಾಧಾನ ಹೇಳಲು ಬಂದ ಊರಿನ ಮೇಯರಿಗೆ ಗುಂಡು ಹಾರಿಸಿದರು. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದುದನ್ನು ಅರಿತ ಕಾರಾಗ್ರಹ ಅಧಿಕಾರಿಗಳು ವಿಲ್ ಬ್ರೌನ್ ನನ್ನು ಆಕ್ರೋಶ ಭರಿತ ಜನಸಮೂಹಕ್ಕೆ ಒಪ್ಪಿಸಿಬಿಟ್ಟರು. ಬ್ರೌನ್ ನನ್ನ ಲೈಟ್ಕಂಬಕ್ಕೆ ನೇತುಹಾಕಿ ಮನಸೋ ಇಚ್ಛೆ ಗುಂಡು ಹಾರಿಸಿಕೊಂದರು.
ಅರ್ಲ್ ನವ ದಂಪತಿಗಳು ತಮ್ಮ ವೈವಾಹಿಕ ಜೀವನ ಶುರು ಮಾಡಿದ್ದು ಇಂತಹ ಭಯದ ವಾತಾವರಣದಲ್ಲಿ. ಅರ್ಲ್ ಈ ಅಮಾನವೀಯ ಕಗ್ಗೊಲೆಗಳಿಂದ ಎದೆಗುಂದಲಿಲ್ಲ. ಆತ ಈ ಹೊತ್ತಿಗಾಗಲೇ ವೆಸ್ಟ್ ಇಂಡೀಸ್ ಕಪ್ಪು ಹೋರಾಟಗಾರ ಮಾರ್ಕಸ್ ಗಾರ್ವೆ ಪ್ರಭಾವಕ್ಕೆ ಒಳಗಾಗಿದ್ದ. “ಆರ್ಥಿಕವಾಗಿ ಹಿಂದುಳಿದಿದ್ದ ಕಪ್ಪುವರ್ಣದವರು ತಮ್ಮದೇ ವ್ಯಾಪಾರ ಶುರು ಮಾಡಿಕೊಳ್ಳಬೇಕು, ಅವರದೇ ಶಾಲೆಗಳನ್ನ ಆರಂಭಿಸಬೇಕು, ಉದ್ಯೋಗಾವಕಾಶಗಳನ್ನ ಸೃಷ್ಟಿಸಿಕೊಳ್ಳಬೇಕೆಂದು ಪ್ರತಿಪಾದಿಸಿದ. ನಮ್ಮ ಸ್ಪಿರಿಚುಯಾಲ್ ಆಸರೆ ಆಫ್ರಿಕಾ ಮಾತ್ರ. ಅದೇ ನಮ್ಮ ನಿಜವಾದ ಮನೆ” ಎಂದು ಗಾರ್ವೆ ಘರ್ಜಿಸಿದ್ದ. ಗಾರ್ವೆಯ ಮಾತುಗಳು ಅರ್ಲ್ ಹೃದಯದಲ್ಲಿ ವಿದ್ಯುತ್ಸಂಚಲನವನ್ನೇ ಮೂಡಿಸುತ್ತಿದ್ದವು. ಅರ್ಲ್ ತನ್ನ ಬದುಕು ನೆಡೆಸುವುದೇ ಒಂದು ದೊಡ್ಡ ಸವಾಲಾಗಿತ್ತು. ಕಪ್ಪು ವರ್ಣದವರಿಗೆ ದೊರೆಯುತ್ತಿದ್ದ ಕೆಲಸಗಳೆ ವಿರಳ. Hire & Fire ನೀತಿ ಅನುಸರಿಸುತ್ತಿದ್ದ ಬಿಳಿಯರ ದಬ್ಬಾಳಿಕೆ ಕಪ್ಪುವರ್ಣದವರು ನಲುಗಿ ಹೋಗಿದ್ದರು. ಪುರುಷರು ಕೆಲಸಕ್ಕಾಗಿ ಊರೂರು ಅಲೆಯುತ್ತಿದ್ದರು, ಹೆಣ್ಣು ಮಕ್ಕಳು ಮನೆಗೆಲಸ ಮಾಡಿ ಅಷ್ಟೋ ಇಷ್ಟೋ ದುಡಿಯುತ್ತಿದ್ದರು. ಇಂತಹ ಸಮಯದಲ್ಲಿ ಮಾರ್ಕಸ್ ಗಾರ್ವೆಯ ಮಾತುಗಳು ಅರ್ಲ್ ಮೇಲೆ ಬಹಳ ದೊಡ್ಡ ಪರಿಣಾಮವನ್ನೇ ಬೀರಿದ್ದವು. ಅತ್ಯುತ್ತಮ ವಾಗ್ಮಿಯಾಗಿದ್ದ ಅರ್ಲ್ ಗಾರ್ವೆ ಸೃಷ್ಟಿಸಿದ್ದ “ವಿಶ್ವ ನೀಗ್ರೋ ಸುಧಾರಣಾ ಸಮಿತಿಯ” (Universal Negro Improvement Association) ಸದಸ್ಯನಾದ. ಗಾರ್ವೆ ಪ್ರಕಟಿಸುತ್ತಿದ್ದ ” ನೀಗ್ರೋ ವರ್ಲ್ಡ್” ಪತ್ರಿಕೆಯನ್ನ ಚಾಚು ತಪ್ಪದೆ ಓದುತ್ತಿದ್ದ. ಚರ್ಚ್ ಗೆ ಹೋಗುತ್ತಿದ್ದ ಅರ್ಲ್, ಚರ್ಚ್ ಅನ್ನು ಬರಿಯ ಪೂಜ್ಯ ಸ್ಥಳವಾಗಿ ಕಾಣದೆ ಕಪ್ಪು ವರ್ಣದವರನ್ನು ಸಂಘಟಿಸುವ ಸ್ಥಳವಾಗಿ ಕಂಡ. ಮೋಕ್ಷ, ಭಕ್ತಿಯ ಕುರಿತು ಅರ್ಲ್ ಪ್ರವಚನ ನೀಡಿದರು ಆತನ ರಾಜಕೀಯದ ಮಾತುಗಳು, ಕಪ್ಪು ವರ್ಣದವರ ಹಕ್ಕುಗಳ ಭಾಷಣಗಳು ಜನರನ್ನ ಚರ್ಚ್ ಕಡೆಗೆ ಸೆಳೆದವು.
ಕಪ್ಪು ವರ್ಣದವರನ್ನ ಸಂಘಟಿಸುವ ಕೆಲಸವನ್ನ ಯಾರೇ ಮಾಡಿದರು ಅವರ ಮೇಲೆ ಸರ್ಕಾರ ಕಣ್ಣಿಡುತ್ತಿತ್ತು. ಅವರನ್ನ ದೇಶದ ಸುರಕ್ಷತೆಗೆ ಅಪಾಯವೆಂದು ಪರಿಗಣಿಸುತ್ತಿತ್ತು. “ಇದೆಲ್ಲಾ ನಿನಗ್ಯಾಕೊ, ಬಿಳಿಯರ ಕೆಂಗಣ್ಣಿಗೆ ಗುರಿಯಾಗುವೆ. KKK (klu Klux Klan- ಬಿಳಿಯರ ಪರಮಾಧಿಕಾರವನ್ನ ಪ್ರತಿಪಾದಿಸುವ ಗುಂಪು. ಕಪ್ಪುವರ್ಣದವರನ್ನಷ್ಟೇ ಅಲ್ಲದೆ ವಲಸಿಗರನ್ನ, ಮುಸ್ಲಿಂರನ್ನ, ಎಡಪಂಥೀಯರನ್ನ, ಸಲಿಂಗ ಪ್ರೇಮಿಗಳನ್ನ, ಅಮೆರಿಕಾದ ಮೂಲ ನಿವಾಸಿಗಳನ್ನ ಇಂದಿಗೂ ಕಾಡುವ ಭಯೋತ್ಪಾದಕರ ಗುಂಪಿದು) ಗ್ಯಾಂಗ್ ನಿಂದ ನಿನಗೆ ಮತ್ತು ನಿನ್ನ ಕುಟುಂಬಕ್ಕೆ ಹಾನಿ ತಪ್ಪಿದಲ್ಲ” ಎಂದು ಭಯಭೀತ ಕಪ್ಪುವರ್ಣದವರು ಅರ್ಲ್ ನನ್ನ ಪದೇ ಪದೇ ಎಚ್ಚರಿಸಿದರು. ಆತಂಕಕ್ಕೆ ಒಳಗಾಗುವ ಬದಲು ಅರ್ಲ್ ಇನ್ನಷ್ಟು ಸಕ್ರಿಯನಾದ. ಸಂಘಟಿಸುವ ಕೆಲಸಕ್ಕೆ ಹೆಂಡತಿ ಲೂಯಿ ಕೂಡ ಧುಮುಕಿದಳು. ಹೆಣ್ಣು ಮಕ್ಕಳಿಗೆ ಆಕೆ ಪ್ರೇರಣೆಯಾದಳು. ಹೀಗೆ ಚಳುವಳಿ ಜನಪ್ರಿಯವಾಗತ್ತಾ ಹೋದಂತೆಲ್ಲ ಹಣದ ವ್ಯವಹಾರಗಳಲ್ಲಿ ಅಷ್ಟೇನೂ ಚಾಣಾಕ್ಷನಲ್ಲದ ಗಾರ್ವೆಯನ್ನ ಜೈಲಿಗಟ್ಟಲಾಯಿತು. ಹುಸಿ ದೂರುಗಳನ್ನ ಆಧಾರದವಾಗಿಟ್ಟುಕೊಂಡು ಹಲವಾರು ಮೊಕದ್ದಮೆಗಳನ್ನ ಆತನ ವಿರುದ್ಧ ದಾಖಲಿಸಿಲಾಗಿತ್ತು. “ನಮ್ಮ ಬೇರುಗಳು ಆಫ್ರಿಕಾದಲ್ಲಿವೆ ನಾವು ಆ ಕಡೆ ಮುಖ ಮಾಡೋಣವೆಂಬ” ಅವನ ಮಾತುಗಳಿಗೆ ಕಪ್ಪುವರ್ಣದವರೇ ಬೆಂಬಲ ಸೂಚಿಸಲಿಲ್ಲ. ಅಮೆರಿಕಾದ ಗುಲಾಮಗಿರಿ ಅಷ್ಟು ರಕ್ತಗತವಾಗಿದ್ದ ಕಪ್ಪುವರ್ಣದವರಲ್ಲಿ ಸ್ವತಂತ್ರವಾಗಿ ನಿಲ್ಲಬಲ್ಲೆವು ಎಂಬ ನಂಬಿಕೆಯೇ ನಶಿಸಿಹೋಗಿತ್ತು. ಗಾರ್ವೆ ಬಿಡುಗಡೆಗೆ ಸಾಕಷ್ಟು ಪಾತ್ರಗಳನ್ನ ಸರ್ಕಾರಕ್ಕೆ ಅರ್ಲ್ ಬರೆದರೂ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.
ಅರ್ಲ್ ಮುಂದುವರೆದು ಮಿಚಿಗನ್ ನಗರದ ಸಮೀಪವೆ ಒಂದು ತೋಟ ಖರೀದಿಸಿದ. ಅಲ್ಲೇ ನೆಲೆಸುವ ಇರಾದೆ ಅವನದು. ಕಪ್ಪುವರ್ಣದವರು ತಮ್ಮ ನೆರಯವರನ್ನಾಗಿ ಇರಲು ಒಪ್ಪದ ಬಿಳಿಯರು ಅರ್ಲ್ ವಿರುದ್ಧ ದೂರುಗಳನ್ನ ದಾಖಲಿಸಿದರು. ತೋಟ ಅರ್ಲ್ ನಿಗೆ ಎಂದಿಗೂ ಸಿಗಬಾರದೆಂದು ಪಣತೊಟ್ಟರು. ಎದೆಗುಂದದ ಅರ್ಲ್ ಹೋರಾಟಕ್ಕೆ ಸಿದ್ದನಾದ. ನಡು ರಾತ್ರಿ ಅರ್ಲ್ ಕುಟುಂಬ ವಾಸಿಸುತ್ತಿದ್ದ ಮನೆಗೆ ಬೆಂಕಿ ಹಚ್ಚಲಾಯಿತು. ಅಗ್ನಿಶಾಮಕ ದಳ ಸ್ಥಳಕ್ಕೆ ಬರಲೇ ಇಲ್ಲ. ಅಂದು ಅರ್ಲ್, ಮಡದಿ ಲೂಯಿ ಜೊತೆಗೆ ಪುಟ್ಟ ಮಾಲ್ಕಮ್ ಇದ್ದರು. ಮಾಲ್ಕಮ್ ಪ್ರೀತಿಯ ತೋಟದ ಮನೆ ಉರಿದು ಬೂದಿ ಆಗುವುದನ್ನ ಕಂಡು ಭಯಭೀತನಾಗಿದ್ದ. ತಂದೆಯನ್ನ ತಬ್ಬಿ ಕಣ್ಣೀರಿಟ್ಟಿದ್ದ. ಅರ್ಲ್ ಕುಟುಂಬ ಇಡೀ ಇರುಳನ್ನ ಬಯಲಲ್ಲೇ ಕಳೆದಿತ್ತು. ಕಪ್ಪುವರ್ಣದವರಿಗೆ ಧಮಕಿ ಹಾಕುವುದು, ಅವರ ವಿರುದ್ಧ ಸುಳ್ಳು ದೂರು ದಾಖಲಿಸುವುದು, ತಾವಿರುವ ನೆರೆ ಹೊರೆಯಿಂದ ಕರಿಯರನ್ನ ಗುಳೆ ಎಬ್ಬಿಸುವುದು, ತೀವ್ರ ನಿಗಾ ಇಡುವುದು, ಮನೆಗಳಿಗೆ ಬೆಂಕಿಯಿಡುವುದು ಬಿಳಿಯರಿಗೆ ಸಿದ್ಧಿಸಿದ್ದ ತಂತ್ರಗಳು. ಇವೆಲ್ಲವೂ ಕಪ್ಪುವರ್ಣದವರನ್ನ ಬಗ್ಗು ಬಡಿಯುವ, ಭಯದ ವಾತಾವರಣದಲ್ಲೇ ಬದುಕುವಂತೆ ಮಾಡಿ ಅಮೆರಿಕಾದ ಎರಡನೇ ದರ್ಜೆ ಪ್ರಜೆಗಳಾಗಿಯೇ ಉಳಿಸುವ ವಿಧಾನಗಳಾಗಿದ್ದವು.
ಮಾಲ್ಕಮ್ಗೆ ಅಪ್ಪ ಎಂದರೆ ಅಭಿಮಾನ. ಕಪ್ಪುವರ್ಣದವರ ಬಗ್ಗೆ ಅಪ್ಪನಿಗಿದ್ದ ಕಾಳಜಿ, ಆತ ಆಯ್ಕೆ ಮಾಡಿಕೊಂಡ ಹಾದಿ, ಗುಲಾಮಗಿರಿಗೆ ಒಗ್ಗಿ ಹೋಗಿದ್ದವರನ್ನ ಬಡಿದೆಬ್ಬಿಸಿಸುತ್ತಿದ್ದ ಕಿಚ್ಚಿನ ಮಾತುಗಳೆಲ್ಲವನ್ನ ಅಚ್ಚರಿಯಿಂದ ನೋಡುತ್ತಿದ್ದುದು ಒಂದೆಡೆಯಾದರೆ, ಇನ್ನೊಂದೆಡೆ ಅಪ್ಪನಿಗೆ ಯಾರಾದರೂ ಹಾನಿ ಮಾಡಿಯಾರು ಎಂಬ ಆತಂಕ ಮಾಲ್ಕಮ್ಗೆ. ಅವನಿಗಿದ್ದ ಆತಂಕ ಒಂದು ದಿನ ನಿಜವಾಯಿತು. ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಲಾರಿಯೊಂದನ್ನು ಅರ್ಲ್ ಮೇಲೆ ಹರಿಯಬಿಡಲಾಯಿತು. ವೇಗವಾಗಿ ಸಾಗುತ್ತಿದ್ದ ಲಾರಿಯ ಮುಂದೆ ಹಾರಿ ಅರ್ಲ್ ಆತ್ಮಹತ್ಯೆ ಮಾಡಿಕೊಂಡ ಎಂದು ಕೇಸ್ ತಿರುಚಿ ಮುಚ್ಚಲಾಯಿತು. ಬಾಲ್ಯದಲ್ಲಿ ಕೇಳಿದ್ದ ಅಪ್ಪನ ಭಾಷಣಗಳು ಮಾಲ್ಕಮ್ ಕಿವಿಯಲ್ಲಿ ಗುಯ್ಗುಟ್ಟುತ್ತಿದ್ದವು, ಅಮ್ಮಳ ಆಕ್ರಂದನ ನಿರಂತರವಾಗಿ ಕಾಡಿದವು.
ಇದೇ ಮಾಲ್ಕಮ್ ಮುಂದೆ ಮಾಲ್ಕಮ್ X ಆಗಿ ಬದಲಾಗಿ ಅಮೇರಿಕಾದಲ್ಲಿ ಸಮಾನ ಹಕ್ಕಿಗಾಗಿ ಆಫ್ರೋ ಅಮೆರಿಕನ್ನರು ನೆಡೆಸಿದ್ದ ಹೋರಾಟದ ಹಾದಿಯನ್ನೇ ಬದಲಾಯಿಸಿದ. ಮಾರ್ಟಿನ್ ಲೂಥರ್ ಕಿಂಗ್ ನಷ್ಟು ಈತ ಸಾಕಷ್ಟು ಜನರಿಗೆ ಪರಿಚಯವಿಲ್ಲದಿದ್ದರು ನನಗೆ ಮಾಲ್ಕಮ್ X ಹೋರಾಟ, ತ್ಯಾಗ, ವಿಷನ್, ಚಳುವಳಿ, ಬದ್ಧತೆಗೆ ಪ್ರತೀಕ. ಅಪ್ರತಿಮ ಮಾನವ ಹಕ್ಕು ಕಾರ್ಯಕರ್ತ. ಮಾರ್ಟಿನ್ ಲೂಥರ್ ಕಿಂಗ್ ನೀಡಿದ ಭಾಷಣ ” I Have a Dream” ವಿಶ್ವದ ಶ್ರೇಷ್ಠ ಭಾಷಣಗಳಲ್ಲಿ ಅಗ್ರ ಸ್ಥಾನ ಪಡೆದರೆ ನನಗೆ ಮಾಲ್ಕಮ್ X ನೀಡಿದ ಕ್ರಾಂತಿಕಾರಿ “The Ballot or the Bullet” gives me goosebumps!
ಪತ್ರಕರ್ತನೊಬ್ಬ “ನಿಮ್ಮ ಹೆಸರಿನ ಮುಂದಿರುವ x ಅಕ್ಷರದ ಅರ್ಥವೇನು?” ಎಂದು ಹಿಯಾಳಿಸಿದ. “ಗಣಿತದಲ್ಲಿ X ಅನ್ನೋದು unknown ಸೂಚಕ. ಕರಿಯರು ತಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ, ನೆಲದೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ. ನನ್ನ ದೇಶ, ನೆಲ, ಸ್ವಾಭಿಮಾನ ಮತ್ತೆ ಗಳಿಸುವವರೆಗೆ X ನನ್ನ ಹೆಸರಿನ ಮುಂದೆ ಉಳಿಯಲಿದೆ” ಎಂಬ ದಿಟ್ಟ ಉತ್ತರ ನೀಡಿದ ಮಾಲ್ಕಮ್. ನಾವು ಬಿಎ, ಬಿಎಸ್, ಪಿಎಚ್ಡಿ ಏನೇ ಮಾಡಿದರು ನೀವು ನಮ್ಮನ್ನ ಗುಲಾಮ ನಿಗ್ಗರ್ ಎಂದೇ ಕರೆಯೋದು. ನಿಮ್ಮ ಹೀಯಾಳಿಕೆ, ಮೂದಲಿಕೆ ಎಂದಿಗೂ ನಿಲ್ಲೋದಿಲ್ಲ ಎಂದ.
ಇಂದಿಗೆ ಅನ್ವಯವಾಗುವ ವಿಷಯಗಳಲ್ಲಿ ಮಾಲ್ಕಮ್ X ಮಾಡಿದ ವರ್ಗೀಕರಣ ಸಮಂಜಸ ಅನ್ನಿಸುತ್ತೆ. ಮಾಲ್ಕಮ್ ಪ್ರಕಾರ ನೀಗ್ರೋಗಳಲ್ಲಿ ಎರಡು ಬಗೆ. ಮನೆಯ ನೀಗ್ರೋ ಮತ್ತು ಬಯಲ ನೀಗ್ರೋ. ಮನೆಯ ನೀಗ್ರೋ ಬಿಳಿಯ ಒಡೆಯನ ಅಟ್ಟದಲ್ಲೋ, ಆತನ ದನದ ಕೊಟ್ಟಿಗೆಯಲ್ಲೋ ಬದುಕಿಬಿಡುವವ. ಒಡೆಯ ತಿಂದು ಮಿಕ್ಕಿದ ಅಗಳು ತಿನ್ನುವವ. ಅವ ತೊಟ್ಟು ಬಿಟ್ಟ ಬಟ್ಟೆ ತೊಡುವವ. ಒಡೆಯನನ್ನ ಅತಿಯಾಗಿ ಪ್ರೀತಿಸುವವ. ಒಡೆಯನಿಗೆ ಪ್ರಾಣ ಒತ್ತೆಯಿಡಲು ತಯಾರಾದವ. ನಮ್ಮದು ಸೊಗಾಸಾದ ಮನೆ ಎಂದು ಒಡೆಯ ಹೇಳಿದರೆ, ಹೌದು ನನ್ ಒಡೆಯ ನಮ್ಮದು ಸೊಗಸಾದ ಮನೆ ಎಂದು ಒಪ್ಪಿಕೊಳ್ಳುವವ. ಆ ಮನೆಗೆ ಬೆಂಕಿ ಬಿದ್ದರೆ ಜೀವದ ಹಂಗು ತೊರೆದು ಅದನ್ನ ನಂದಿಸುವವ, ಒಡೆಯ ಖಾಯಿಲೆಯಿಂದ ಬಳಲಿದರೆ ಕಣ್ಣೀರಿಡುವವ. ಈ ಮನೆ ನೀಗ್ರೋಗೆ ಗುಲಾಮಗಿರಿ ರಕ್ತಗತವಾಗಿ ಹೋಗಿರತ್ತೆ. ಈ ಕ್ರೂರ ಒಡೆಯನಿಂದ ಒಮ್ಮೆ ದೂರ ನೆಡೆದು ಸ್ವಚ್ಛಂದವಾಗಿ ಬದುಕಿಬಿಡುವ ಎಂಬ ಆಸೆ ಅವನಲ್ಲಿ ಹುಟ್ಟುವುದೇ ಇಲ್ಲ. ನಾವೆಲ್ಲಾ ಮನೆ ನೀಗ್ರೋವಿನ ಮನಸ್ಥಿತಿಯಿಂದ ಹೊರಬಂದು ಬಯಲ ನೀಗ್ರೋ ಗಳಾಗಬೇಕೆಂದು ಕರೆಕೊಟ್ಟ ಮಾಲ್ಕಮ್.
ಜನರ ಮೇಲೆ ಪ್ರಾಬಲ್ಯ ಸಾಧಿಸಿ ಆಳಲು ವಸಾಹತುಶಾಹಿಗಳು ಧರ್ಮವನ್ನ ಹೇಗೆ ಬಳಸಿಕೊಂಡರು ಎಂಬ ಅರಿವು ಮಾಲ್ಕಮ್ಗಿತ್ತು. ಆತ ಕ್ರೈಸ್ತ ಧರ್ಮ ತೊರೆದು ಇಸ್ಲಾಂ ಅನ್ನು ಅಪ್ಪಿಕೊಂಡ. ಹಜ್ ಯಾತ್ರೆಯಲ್ಲಾದ ಅನುಭವವನ್ನ ಹೆಂಡತಿ ಬರೆದ ಪತ್ರ ಬರೆದು ತಿಳಿಸುತ್ತಾನೆ-
” ನಿನಗೆ ಈ ಮಾತುಗಳು ಆಶ್ಚರ್ಯವೆನಿಸಬಹುದು. ಆದರೆ ನಾನೇಳುವುದೆಲ್ಲಾ ಸತ್ಯ. ಈ ಪವಿತ್ರ ಜಾಗದಲ್ಲಿ ನಾವೆಲ್ಲಾ ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ. ಒಂದೇ ತಂಬಿಗೆಯಿಂದ ನೀರು ಕುಡಿದಿದ್ದೇವೆ, ಒಂದೇ ದೇವರಿಗೆ ಪ್ರಾರ್ಥಿಸಿದ್ದೇವೆ. ಇಲ್ಲಿ ನೀಲಿ ಕಂಗಳ, ಹೊನ್ನ ಕೂದಲಿನ ಅತಿ ಬಿಳಿಯ ಮತ್ತು ನಾನು ಒಂದೇ. ನಾವೆಲ್ಲಾ ಸಹೋದರರು. People of all colors and races believing in one God, in one humanity.” ((ಇಸ್ಲಾಂ ಧರ್ಮದ ಬಗ್ಗೆ ಇಷ್ಟೆಲ್ಲಾ ವಿಶ್ವಾಸ ಇಟ್ಟು ಕೊಂಡಿದ್ದ ಮಾಲ್ಕಮ್ ನನ್ನ “ನೇಶನ್ ಆಫ್ ಇಸ್ಲಾಂ” ಎಂಬ ಸಂಘಟನೆ ಹೇಗೆ ಮತ್ತು ಯಾಕೆ ಕೊಲ್ಲಿಸಿತು ಎಂಬುದನ್ನ ಮತ್ತೊಮ್ಮೆ ಬರೆಯುವೆ )
ಆಫ್ರಿಕಾ, ಲ್ಯಾಟಿನ್ ಅಮೇರಿಕಾ, ಏಷ್ಯಾದ ದೇಶಗಳಲ್ಲಿನ ವರ್ಣಬೇಧವನ್ನ ತೀವ್ರವಾಗಿ ಖಂಡಿಸುವ ವಿಶ್ವನಾಯಕರಿಗೆ, ವಿಶ್ವಸಂಸ್ಥೆಗೆ ಅಮೇರಿಕಾದೊಳಗಿನ ಆಫ್ರೋ ಅಮೇರಿಕನ್ನರು ಕಾಣುವುದೇ ಇಲ್ಲ. They denounce the racism practiced in South Africa but say absolutely nothing about the practice of racism here in American society. Hypocrites ಎಂದು ಗುಡುಗಿದ.”
ಇಷ್ಟು ಇಂಟೆನ್ಸ್ ಆಗಿ ಬದುಕಿದ, ಕಪ್ಪು ವರ್ಣದವರ ಹಕ್ಕಿಗಾಗಿ ಹೋರಾಟ ಮಾಡಿದ ಮಾಲ್ಕಮ್ X ಗೆ ಸಿಕ್ಕ ಬಹುಮಾನ ಎಪ್ಪತ್ತೊಂದು ಗನ್ ಶಾಟ್ಸ್. ಮಾಲ್ಕಮ್ ಸತ್ತಾಗ ಆತನಿಗೆ 39ವರುಷ. ಬಹುಶ ಆತ ಬದುಕ್ಕಿದ್ದಾರೆ ಅಮೆರಿಕಾದ ಭವಿಷ್ಯವಷ್ಟೇ ಅಲ್ಲ ಪ್ರಪಂಚದ ಭವಿಷ್ಯವೇ ಬದಲಾಗಿರುತಿತ್ತು. ಅಷ್ಟು ಕ್ಷಮತೆ, ನಿಖರತೆ ಆತನಿಗಿತ್ತು. ಕಪ್ಪುವರ್ಣದವರ ಬದುಕು ಎಷ್ಟು ದುಸ್ತರವಾಗಿದೆಯೆಂದು ಜಗತ್ತಿಗೆ ತಿಳಿಸಿದ ಆದರೆ ಇದನ್ನ ಮೀರಿ ಕಪ್ಪುವರ್ಣದವರು ಹೇಗೆ ಬದುಕನ್ನ ಕಟ್ಟಿಕೊಳ್ಳಬೇಕೆಂಬ ಸ್ಪಷ್ಟವಾದ ನಕ್ಷೆ ಅವನ ಬಳಿಯಿತ್ತು. His life was cut short.
ಕಪ್ಪು ಜನರ ಚಳುವಳಿ ಎಂದಾಗ ನನಗೆ ಸದಾ ನೆನಪಾಗೋದು ಮಾರ್ಟಿನ್ ಲೂಥರ್ ಕಿಂಗ್ ಮತ್ತು ಮಾಲ್ಕಮ್ X. ಮಾರ್ಟಿನನಲ್ಲಿ ನಾನು ಗಾಂಧಿಯನ್ನ ಕಂಡರೆ ಮಾಲ್ಕಮ್ X ನಲ್ಲಿ Radical ಅಂಬೇಡ್ಕರ್ ಅವರನ್ನ ಕಾಣುತ್ತೇನೆ. ಅಂಬೇಡ್ಕರ್ ಹಾಗು ಮಾಲ್ಕಮ್ ಹೋರಾಟದ ಜೀವನದಲ್ಲಿ ಸಾಕಷ್ಟು ಸಾಮ್ಯತೆಗಳಿವೆ ಕೂಡ. ಮಾಲ್ಕಮ್ ಕೊಲೆಯಾದ ದಿನ ಮಾರ್ಟಿನ್ ನೀಡಿದ ಹೇಳಿಕೆ – “We have degenerated to the point of expressing dissent through murder and we haven’t learned to disagree without being violently disagreeable.” ನಮ್ಮ ದೇಶಕ್ಕೂ ಅನ್ವಯವಾಗುವುದಿಲ್ಲವೇ???
- Harish Gangadhar