ಬೆಂಗಳೂರು: ಮನೆ ಮುಂದೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕದ್ದಿದ್ದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ನವೀದ್ ಪಾಷಾ (21) ಹಾಗೂ ಸೈಯದ್ ರೋಷನ್ ಅಲಿಯಾಸ್ ರಾಕೆಸ್ (21) ಬಂಧಿತರು. ಅವರಿಂದ ₹ 6.45 ಲಕ್ಷ ಮೌಲ್ಯದ 13 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ವಾಹನಗಳನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು. ಹ್ಯಾಂಡಲ್ ಲಾಕ್ ಮುರಿದು ವಾಹನ ಕದ್ದುಕೊಂಡು ಪರಾರಿಯಾಗುತ್ತಿದ್ದರು. ಕದ್ದ ವಾಹನಗಳನ್ನು ಮಾರಿ, ಅದರಿಂದ ಬಂದ ಹಣವನ್ನು ಹಂಚಿಕೊಳ್ಳುತ್ತಿದ್ದರು’ ಎಂದೂ ತಿಳಿಸಿದರು.
‘ಸುಬ್ರಹ್ಮಣ್ಯಪುರ, ಪುಟ್ಟೇನಹಳ್ಳಿ, ಕೋಣನಕುಂಟೆ, ಜೆ.ಪಿ. ನಗರ, ಬನಶಂಕರಿ, ಹನುಮಂತನಗರ, ಚನ್ನಮ್ಮನಕೆರೆ ಅಚ್ಚುಕಟ್ಟು ಹಾಗೂ ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿರುವ ಮಾಹಿತಿ ಸಿಕ್ಕಿದೆ’ ಎಂದೂ ವಿವರಿಸಿದರು.