ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗ ಸೇರಿದಂತೆ 14 ಜಿಲ್ಲೆಗಳಲ್ಲಿ ಇದೇ 30 ಮತ್ತು 31ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಇದೇ 30ರಿಂದ ಗುಡುಗು, ಸಿಡಿಲು ಹೆಚ್ಚಾಗಿ ಇರಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಮುಂದಿನ ಎರಡು ದಿನಗಳವರೆಗೆ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆ ಇರಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.
ಮಳೆ–ಎಲ್ಲಿ, ಎಷ್ಟು?: ಮೈಸೂರು ಜಿಲ್ಲೆಯ ಸರಗೂರಿನಲ್ಲಿ 9 ಸೆಂ.ಮೀ ಮಳೆಯಾಗಿದೆ. ವಿರಾಜಪೇಟೆ 3, ಮೈಸೂರು 2, ಟಿ.ನರಸೀಪುರದಲ್ಲಿ 1 ಸೆಂ.ಮೀ ಮಳೆಯಾಗಿದೆ. ಕಾರವಾರದಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಹಾಗೂ ಬೀದರ್‌ನಲ್ಲಿ 12 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
‘ಮುಂಗಾರು ಮಾರುತಗಳ ನಿರ್ಗಮನದಿಂದಾಗಿ ರಾಜ್ಯದಾದ್ಯಂತ ತಣ್ಣನೆಯ ಗಾಳಿ ಬೀಸುತ್ತಿದ್ದು, ತಂಪಾದ ವಾತಾವರಣ ಕಂಡು ಬರುತ್ತಿದೆ. ಮುಂಜಾನೆ ವೇಳೆ ದಟ್ಟವಾದ ಮಂಜು ಸಹ ಆವರಿಸುತ್ತಿದೆ. ಮಾರುತಗಳ ಚಲನವಲನಗಳಲ್ಲಿ ಬದಲಾವಣೆಯಾದಾಗ ಈ ರೀತಿ ಆಗುತ್ತದೆ. ವಾಡಿಕೆಯಂತೆ ನವೆಂಬರ್ ತಿಂಗಳಿನಲ್ಲಿ ಚಳಿ ಹೆಚ್ಚಾಗಲಿದೆ’ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.