ವಿಜಯಪುರ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಏಪ್ರಿಲ್ 14 ಕೊನೆಯ ಗಡುವು ನೀಡಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊನೆಯ ಗಡುವಿನೊಳಗೆ ಮೀಸಲಾತಿ ಘೋಷಣೆ ಮಾಡುವ ವಿಶ್ವಾಸವಿದ್ದು, ಈ ಸಂಬಂಧ ಏಪ್ರಿಲ್ 21ರಂದು ಕೂಡಲಸಂಗಮದಲ್ಲಿ ಮುಖ್ಯಮಂತ್ರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿ, ರೇಷ್ಮೆ ರುಮಾಲು ಸುತ್ತಿ, ಕರದಂಟು ತಿನ್ನಿಸುತ್ತೇವೆ. ಇಲ್ಲವಾದರೆ ಅಂದೇ ಮರು ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮೀಸಲಾತಿಗೆ ಆಗ್ರಹಿಸಿ ನೀಡಿರುವ ಕೊನೆಯ ಗಡುವನ್ನು ನೆನಪಿಸಲು ಹಾಗೂ ಮುಖ್ಯಮಂತ್ರಿ ಮೇಲೆ ಒತ್ತಡ ತರುವ ಉದ್ದೇಶದಿಂದ ಏಪ್ರಿಲ್ 10ರಂದು ವಿಜಯಪುರ ಜಿಲ್ಲೆ ಚಡಚಣದಲ್ಲಿ ಪಂಚಮಸಾಲಿಗಳ ಹಕ್ಕೊತ್ತಾಯ ಸಭೆ ನಡೆಯಲಿದೆ ಎಂದು ಹೇಳಿದರು.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ತಪ್ಪಿಸುವ ಹುನ್ನಾರ ನಡೆಸಿರುವವರಿಗೆ ಸಮಾಜವೇ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ವಿಷಯದಲ್ಲಿ ರಾಜ್ಯದಲ್ಲಿ ಬೇರಾವ ಸಮಾಜಗಳಿಂದಲೂ ವಿರೋಧವಿಲ್ಲ ಎಂದು ಹೇಳಿದರು.
ಬೆಲೆ ಏರಿಕೆ ನಿಯಂತ್ರಿಸಿ:
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಈಗಾಗಲೇ ಎರಡು ವರ್ಷಗಳಿಂದ ಕೋವಿಡ್‌ನಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶ್ರೀಸಾಮಾನ್ಯರಿಗೆ ಹೊರೆಯಾಗದಂತೆ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಕಾನೂನು ಗೌರವಿಸಿ:
ಹಿಜಾಬ್, ಹಲಾಲ್, ಆಜಾನ್ ವಿಷಯಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮಾಜದವರು ಕಾನೂನು ಗೌರವಿಸಿ, ಆ ಪ್ರಕಾರ ನಡೆದುಕೊಳ್ಳಬೇಕು ಎಂದು ಶ್ರೀಗಳು ತಿಳಿ ಹೇಳಿದರು.
ಧರ್ಮ ಭಾವನಾತ್ಮಕ ವಿಕಾಸಕ್ಕೆ, ಶಿಕ್ಷಣ ಬದುಕು ಕಟ್ಟಿಕೊಳ್ಳಲು ಎಂಬುದನ್ನು ಅರಿತು, ಮಕ್ಕಳ ಶಿಕ್ಷಣ ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.