ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 239 ಜನರಿಗೆ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಮೂವರು ಸೇರಿ ಒಟ್ಟು 5 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.
ಈವರೆಗೆ ಸೋಂಕಿಗೊಳಪಟ್ಟವರ ಸಂಖ್ಯೆ 29.88 ಲಕ್ಷಕ್ಕೆ ಏರಿದ್ದು, ಮೃತರ ಒಟ್ಟು ಸಂಖ್ಯೆ 38,089 ರಷ್ಟಿದೆ. ಕೋವಿಡ್ ದೃಢ ಪ್ರಮಾಣ ಹಾಗೂ ಮರಣ ಪ್ರಮಾಣ ದರವು ಕ್ರಮವಾಗಿ ಶೇ 0.39 ಮತ್ತು ಶೇ 2.09ರಷ್ಟು ವರದಿಯಾಗಿವೆ.
ಒಂದು ದಿನದಲ್ಲಿ 376 ಜನ ಗುಣಮುಖರಾಗಿದ್ದು ಈವರೆಗೆ ಒಟ್ಟು 29.42 ಲಕ್ಷ ಮಂದಿ ಚೇತರಿಸಿಕೊಂಡಂತಾಗಿದೆ. ಸಕ್ರಿಯ ಪ್ರಕರಣಗಳು ಇಳಿಕೆಯಾಗಿದ್ದು, ಪ್ರಸ್ತುತ 8,370 ಜನ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿನ 24 ಗಂಟೆಗಳಲ್ಲಿ 139 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ಖಾತರಿಯಾಗಿದೆ. ದಕ್ಷಿಣ ಕನ್ನಡ (18) ಮತ್ತು ಮೈಸೂರಿನಲ್ಲಿ (31) ಇದು ಎರಡಂಕಿಯಷ್ಟಿದೆ. ಬಾಗಲಕೋಟೆ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ವಿಜಯಪುರ ಹಾಗೂ ಯಾದಗಿರಿಯಲ್ಲಿ ಹೊಸ ಪ್ರಕರಣಗಳು ದಾಖಲಾಗಿಲ್ಲ. 12 ಜಿಲ್ಲೆಗಳಲ್ಲಿ ಇದು ಒಂದಂಕಿಗೆ ಇಳಿದಿದೆ.
ತುಮಕೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. 27 ಜಿಲ್ಲೆಗಳಲ್ಲಿ ಹೊಸ ಮರಣ ಪ್ರಕರಣಗಳು ವರದಿಯಾಗಿಲ್ಲ. ಬೆಂಗಳೂರಿನಲ್ಲಿ 34 ವರ್ಷದ ಮಹಿಳೆಯೊಬ್ಬರು ಕೆಮ್ಮು, ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಸಾವಿಗೀಡಾಗಿದ್ದಾರೆ. ಉಳಿದ ನಾಲ್ವರು 70 ವರ್ಷ ಮೇಲ್ಪಟ್ಟವರಾಗಿದ್ದಾರೆ.
ಕೋವಿಡ್ ಪರೀಕ್ಷೆಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ. ಮಂಗಳವಾರ 60,711 ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ.