Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿ3ನೇ, 4ನೇ ಪೀಠದ ಅಗತ್ಯವಿಲ್ಲ: ವೀಣಾ ಕಾಶಪ್ಪನವರ

3ನೇ, 4ನೇ ಪೀಠದ ಅಗತ್ಯವಿಲ್ಲ: ವೀಣಾ ಕಾಶಪ್ಪನವರ

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 3ನೇ, 4ನೇ ಪೀಠದ ಅವಶ್ಯವಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಾಗಿ ಹಿಂದುಳಿದ ವರ್ಗ 2ಎ ಮೀಸಲಾತಿ ಬೇಕಾಗಿದೆ. ಅದನ್ನು ಪಡೆಯುವ ಬಗ್ಗೆ ಎಲ್ಲರೂ ಗಮನಹರಿಸಬೇಕು’ ಎಂದು ಸಮಾಜದ ನಾಯಕಿ, ರಾಣಿ ಚನ್ನಮ್ಮ ಬಳಗ ರಾಜ್ಯ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ವಿಧಾನಸೌಧದಲ್ಲಿ ಇರುವವರು ಸಮಾಜಕ್ಕಾಗಿ ರಾಜಕೀಯವಾಗಿ ಹೋರಾಡಲಿ. ನಾವು ಹೊರಗಿನಿಂದ ಅವರಿಗೆ ಬೆಂಬಲ ಕೊಡುತ್ತೇವೆ’ ಎಂದು ತಿಳಿಸಿದರು.

‘ಬಡ ಮಕ್ಕಳಿಗೆ ಶಿಕ್ಷಣ, ಉದ್ಯೋಗಕ್ಕಾಗಿ ನಾವು ಮೀಸಲಾತಿ ಕೇಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಸತ್ಯಾಗ್ರಹ ಮುಂದುವರಿಸುವ ಬಗ್ಗೆ ಚಿಂತಿಸಬೇಕು. ಜನರಿಗೋಸ್ಕರ ಹೋರಾಟ ಮಾಡುತ್ತಿರುವವರು ಯಾರು ಎನ್ನುವುದು ಎಲ್ಲರಿಗೂ ತಿಳಿದಿದೆ. ಬೆಂಗಳೂರುವರೆಗೆ ಪಾದಯಾತ್ರೆ ಮಾಡಿದವರು ಯಾರು? ಬಿಸಿಲಿನಲ್ಲಿ ತಿಂಗಳವರೆಗೆ ಸತ್ಯಾಗ್ರಹ ನಡೆಸಿದ್ದು ಯಾರು ಎನ್ನುವುದು ಎಲ್ಲರಿಗೂ ತಿಳಿದಿದೆ’ ಎಂದು ಪ್ರತಿಕ್ರಿಯಿಸಿದರು.

‘ನಮ್ಮ ಘಟಕದಿಂದ ಓನಕೆ, ಖಡ್ಗ ಪ್ರದರ್ಶಿಸಿದ್ದೆವು. ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಿದ್ದೆವು. ಮೀಸಲಾತಿಗಾಗಿ ಗ್ರಾಮ ಗ್ರಾಮಗಳಲ್ಲೂ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದರು.

ಪಂಚಮಸಾಲಿ ಸಮಾಜದ ಮಹಿಳಾ ಪೀಠ ಸ್ಥಾಪಿಸಲು ಚಿಂತನೆ ನಡೆದಿದೆ ಎಂಬ ಕಿಶೋರಿ ಎನ್ನುವವರ ಹೇಳಿಕೆಗೆ ಪ್ರತಿಕ್ರಿಯಿಸಿದ ವೀಣಾ, ‘ಅದನ್ನು ವಿರೋಧಿಸುತ್ತೇವೆ. ನಮ್ಮದು ಒಂದೇ ಪೀಠ. ಅದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಇರುವ ಕೂಡಲಸಂಗಮ ಪೀಠ. ಇತರ ಪೀಠದ ಅಗತ್ಯವಿಲ್ಲ. ನನ್ನ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಫೋಟೊ ಬಳಸಿಕೊಂಡು ಪ್ರಚಾರ ಮಾಡಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಅದಕ್ಕೆ ಸಮಾಜದವರು ಕಿವಿ ಕೊಡಬಾರದು’ ಎಂದು ಕೋರಿದರು.

‘ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಪಕ್ಷದ ಸೂಚನೆಯಂತೆ ನಡೆದುಕೊಳ್ಳುತ್ತೇನೆ’ ಎಂದು ಪ್ರತಿಕ್ರಿಯಿಸಿದರು.