ಯುದ್ಧಗ್ರಸ್ತ ಉಕ್ರೇನಿನಲ್ಲಿ ವಿಧ್ಯಾರ್ಥಿಗಳು ಮತ್ತು ವಿದೇಶಾಂಗ ಮಂತ್ರಾಲಯ ಹಾಗೂ ಪೋಲ್ಯಾಂಡ್ ನಲ್ಲಿರುವ ಭಾರತೀಯ ಕಾರ್ಯನಿರತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತತ್ಪರಿಣಾಮವಾಗಿ ಶೀಘ್ರವಾಗಿ ಭಾರತಕ್ಕೆ ಕಳುಹಿಸಲು ಹಸಿರು ನಿಶಾನೆ ಪಡೆದ ವಿದ್ಯಾರ್ಥಿಗಳ ಬ್ಯಾಚೊಂದು,ಪೊಲ್ಯಾಂಡ್ ನಿಂದ ನಿನ್ನೆ ರಾತ್ರಿ (ಅಲ್ಲಿಯ ಕಾಲಮಾನ 10.30 ಕ್ಕೆ) ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿ, ಇಂದು ಬೆಳಿಗ್ಗೆ ಸುಮಾರು 8 (IST) ಗಂಟೆಗೆ ದೆಹಲಿಗೆ ತಲುಪಿದೆ. ಪ್ರಸ್ತುತ ವಿಮಾನದಲ್ಲಿ 225 ಪ್ರಯಾಣಿಕರಿದ್ದು, ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ.
ಆಕಿಫ್ ಸೇಟ್, ರೋಹಿತ್ ಕ್ರೃಷ್ಣನ್ ಹಾಗೂ ಇತರ ವಿದ್ಯಾರ್ಥಿಗಳ ಪ್ರಕಾರ, ‘ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ನಾವು ಬಂಕರ್‌ಗಳು ಮತ್ತು ಇತರ ಯುದ್ಧ-ವಿರೋಧಿ ಸೌಲಭ್ಯಗಳಲ್ಲಿ ಭಯಭೀತರಾಗಿದ್ದಾಗ ನಮ್ಮ ಕೂಗಿಗೆ ಪ್ರತಿಕ್ರಿಯಿಸಲು ವಿಫಲರಾಗಿದ್ದರು; ಆದರೆ, ಅವರು ಪೋಲ್ಯಾಂಡ್‌ನಲ್ಲಿ ಆಹೋರಾತ್ರಿ ಉತ್ತಮರೀತಿಯಲ್ಲಿ ಸತತ ಕೆಲಸ ಮಾಡುತ್ತಿದ್ದಾರೆ ಮತ್ತು ಭಾರತೀಯರನ್ನು ವಿಶೇಷತ: ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕಳುಹಿಸುವ ಎಲ್ಲಾ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸುತ್ತಿದ್ದಾರೆ’. ಹಾಗೆಯೇ, ಸ್ಲೋವಾಕ್, ರೊಮೇನಿಯಾ, ಹಂಗೇರಿಯಿಂದಲೂ ಈ ಬಗ್ಗೆ ವ್ಯವಸ್ಥೆಮಾಡಲಾಗುತ್ತಿವೆ.
ರಷ್ಯಾದ ಆಕ್ರಮಣದಿಂದಾಗಿ ಉಕ್ರೇನಿಯನ್ನರು ಸೇರಿದಂತೆ ತಮ್ಮ ದೇಶದಿಂದ ಪಲಾಯನ ಮಾಡುವ ಜನರ ದೊಡ್ಡ ಗುಂಪು ನೆರೆಹೊರೆಯ ರಾಷ್ಟ್ರಗಳಲ್ಲಿ ಜಮಾವಣೆಗೊಂಡಿದೆ.
ಇಂದು ದೆಹಲಿಗೆ ತಲುಪಿದ ವಿಮಾನದಲ್ಲಿ ಕನ್ನಡಿಗರೂ ಸೇರಿದ್ದಾರೆ, ಹೆಚ್ಚಾಗಿ ಕೇರಳೀಯರು ಮತ್ತು ಭಾರತದ ಇತರ ಭಾಗಗಳ ವಿದ್ಯಾರ್ಥಿಗಳು. ಅಲ್ಲದೆ, ಸೌದಿ ಅರೇಬಿಯಾ ಸೇರಿದಂತೆ ವಿವಿಧ ಗಲ್ಫ್ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಮಕ್ಕಳೂ ಈ ಪ್ರಯಾಣಿಕರಲ್ಲಿ ಸೇರಿದ್ದಾರೆ.
ಮೂಲಗಳ ಪ್ರಕಾರ, ಸುಮಾರು 200ಕ್ಕೂ ಮಿಕ್ಕಿದ ಸೌದಿ ಅರೇಬಿಯಾದ ವಿವಿಧ ಪ್ರಾಂತ್ಯಗಳಲ್ಲಿ ಉದ್ಯೋಗಗಳಲ್ಲಿರುವ ಅನಿವಾಸಿ ಭಾರತೀಯರ ಮಕ್ಕಳು ಉಕ್ರೇನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಇಂದು ಬೆಳಿಗ್ಗೆ ಭಾರತಕ್ಕೆ ತಲುಪಿದ ವಿದ್ಯಾರ್ಥಿಗಳು ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರಲ್ಲದೆ, ತಮ್ಮ ಅತೀವವಾದ ಸಂತೋಷ ಮತ್ತು ಕ್ರತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಇವರ ಪ್ರಕಾರ, ಇನ್ನೂ ಹಲವಾರು ಭಾರತೀಯರು ಅದರಲ್ಲೂ ಅಧಿಕಸಂಖ್ಯೆಯಲ್ಲಿ ವಿದ್ಯಾರ್ಥಿ ಸಮೂಹ ಪೋಲ್ಯಾಂಡ್‌ನಲ್ಲಿ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ; ಅದೇರೀತಿ, ರೊಮೇನಿಯಾ, ಸ್ಲೊವ್ಯಾಕ್, ಹಂಗೇರಿಯಲ್ಲಿ ಕೂಡ ಅಧಿಕಸಂಖ್ಯೆಯಲ್ಲಿದ್ದಾರೆ. ಅದೂಅಲ್ಲದೆ, ಕೆಲವು ಮಂದಿ ಈಗಲೂ ಯುದ್ಧಜರ್ಜಿತ ಉಕ್ರೇನ್ ರಾಜಧಾನಿ ಕಿವ್ಯೂ, ಖಾರ್ಕೈವ್ ಹಾಗೂ ಇತರ ಪ್ರದೇಶಗಳಲ್ಲಿದ್ದಾರೆ. ಅವರನ್ನು ಹೊರತರುವ ಪ್ರಯತ್ನ ರಾಯಭಾರ ಕಚೇರಿಯಿಂದ ನಡೆಯುತ್ತಿದೆ.
ನಾನು MEA ನಿಯಂತ್ರಣ ಕೊಠಡಿ ಮತ್ತು ರಾಯಭಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು,ಅವರು 24×7 ರಲ್ಲಿ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ.
ಒಂದು ಮಾಹಿಯ ಪ್ರಕಾರ, ಮೊನ್ನೆಯಿಂದ (03/03/2022) ವಾಯುಪಡೆಯ ವಿಮಾನಗಳು ಸೇರಿದಂತೆ ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡುವ ಮೂಲಕ ಸುಮಾರು 5 ಸಾವಿರ ಮಂದಿಯನ್ನು “ಆಪರೇಶನ್ ಗಂಗಾ” ಮೂಲಕ ಭಾರತಕ್ಕೆ ಕಳುಹಿಸುವ ಏರ್ಪಾಡು ಮಾಡಲಾಗಿದೆ.
ನಾನು ಅಂದಾಜಿಸುವಂತೆ, ಈ ಪ್ರಕ್ರಿಯೆ ಸುಗಮವಾಗಿ ನಡೆದರೆ ಒಂದು ವಾರದೊಳಗೆ ತೆರವು ಪ್ರಕ್ರಿಯೆ ಪೂರ್ಣಗೊಂಡು, ಉಕ್ರೇನ್ ನಲ್ಲಿರುವ ಭಾರತೀಯರ ಸಂಖ್ಯೆ ಶೂನ್ಯವಾಗುತ್ತದೆ.
ಯುದ್ಧಗ್ರಸ್ತ ಉಕ್ರೇನ್‌ನ ನೆರೆಯ ರಾಷ್ಟ್ರಗಳನ್ನು ತಲುಪಿದ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರರನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಕೈಗೊಂಡ ಭಾರತದ ಪ್ರಯತ್ನಕ್ಕೆ ನಾವು ಬೆಂಬಲ ಮತ್ತು ಸಹಕಾರ ನೀಡೋಣ. ಅದೇರೀತಿ, ಸುರಕ್ಷಿತವಾಗಿ ಭಾರತವನ್ನು ತಲುಪಿದ ವಿದ್ಯಾರ್ಥಿಗಳು ಮತ್ತು ಇತರರನ್ನು ಹ್ರತ್ಪೂರ್ವಕವಾಗಿ ಸ್ವಾಗತಿಸಿ ಹಾರೈಸೋಣ…
ವರದಿ:
ಪಿ.ಎ.ಹಮೀದ್ ಪಡುಬಿದ್ರಿ, ವಕೀಲರು ಮತ್ತು ಸಮಾಜ ಸೇವಕ, ರಿಯಾದ್-ಸೌದಿಅರೇಬಿಯಾ