Saturday, December 14, 2024
Homeಸಮಾಚಾರ ನೋಟನಾಳೆ ಸಿಗುವ ಚೆಂದದ ನವಿಲಿಗಿಂತ ಇಂದು ಸಿಗುವ ಸಾಧಾರಣ ಪಾರಿವಾಳವೇ ಲೇಸು (ಕಾಮ vs ಆದರ್ಶ,...

ನಾಳೆ ಸಿಗುವ ಚೆಂದದ ನವಿಲಿಗಿಂತ ಇಂದು ಸಿಗುವ ಸಾಧಾರಣ ಪಾರಿವಾಳವೇ ಲೇಸು (ಕಾಮ vs ಆದರ್ಶ, ವೀರ್ಯ vs ಓಜಸ್)

ಭಾರತದಲ್ಲಿ ಮೊದಲಿನಿಂದಲೂ ತಪಸ್ಸು, ಶ್ರದ್ದೆ, ಇಂದ್ರಿಯ ನಿಗ್ರಹಗಳಿಗೆ ಆದ್ಯತೆ ನೀಡಿದ ಸಂತ ಮಾರ್ಗಗಳನ್ನ ಅನುಮಾದಿಂದಲೇ ನೋಡಿದ ಹಲವು ಪಂಥಗಳಿವೆ. ಹಿಂದಿನ ಯುಗಗಳನ್ನ ಒಮ್ಮೆ ಅವಲೋಕಿಸಿ ನೋಡಿದರೆ ಒಂದಂತು ಖಾತ್ರಿಯಾಗುತ್ತೆ ಅದೇನೆಂದರೆ ಆಗಿನ ಜನ ಸಾವು, ಮೋಕ್ಷ, ಮರುಜನ್ಮ, ಜೀವನದಲ್ಲಿ ಸದಾ ಕಾಡುವ ದುಗುಡ, ಆಧ್ಯಾತ್ಮ ಕುರಿತಾಗಿ ಗಾಢವಾಗಿ ಆಲೋಚಿಸಿದರೂ, ನಿರಂತರ ತರ್ಕಬದ್ದ ಚರ್ಚೆ, ಜಿಜ್ಞಾಸೆಗಳ ನಡೆಸಿದರೂ ಇಂದ್ರಿಯ ಸುಖಗಳಿಗೆ, ಕಾಮಕ್ಕೆ ಮತ್ತು ಅದರಿಂದ ಸಿಗುವ ಉತ್ಕಟ ಸುಖಕ್ಕೆ ಎಂದೂ ವಿಮುಖರಾಗಿರಲಿಲ್ಲ. ವಾತ್ಸಾಯನ ಹೇಳುವಂತೆ “ನಾಳೆ ಸಿಗುವ ಚೆಂದದ ನವಿಲಿಗಿಂತ ಇಂದು ಸಿಗುವ ಸಾಧಾರಣ ಪಾರಿವಾಳವೇ ಲೇಸು” ಎಂದು ನಂಬಿದ್ದರು.
ಕಾಮಲೋಲುಪ, ಭೋಗಾಸಕ್ತಿ ಮತ್ತು ಆಧ್ಯಾತ್ಮಿಕತೆಯ ಮಿಲನದ ನಿದರ್ಶನಗಳಾಗಿ ಖುಜರಹೋ ಮತ್ತು ದೇವಾಲಯಗಳಂತಹ ನೂರಾರು ದೇವಾಲಯಗಳು ಭಾರತದಲ್ಲಿವೆ. ದೇವಾಲಯದ ಶಿಲ್ಪಿಕಲೆಗಳಲ್ಲಿ ಕಾಮದಾಟದಲ್ಲಿರುವ ಕೋಮಲತೆ ಮತ್ತು ವಿನೋದಮಯ ಆಕ್ರಮಣಶೀಲತೆಯ ಸರಿಯಾದ ಮಿಶ್ರಣವಿದೆ. ದೇವಾಲಯದ ಶಿಲ್ಪಕಲೆಗಳು ಮಾನವ ಮೂಲಭೂತವಾಗಿ ಪ್ರಣಯಸಕ್ತನೆಂಬುದನ್ನು ಸಾರುತ್ತವೆ. ಪಾವಿತ್ರ್ಯತೆ, ಮೋಕ್ಷಗಳೆಲ್ಲಾ ಬದುಕಿನಾಚೆಯಿಲ್ಲದೆ ಈ ಬದುಕಿನ ಪರಿಮಿತಿಯಲ್ಲೇ ಇವೆ ಎಂದು ಮತ್ತೆ ಮತ್ತೆ ನೆನಪಿಸುತ್ತವೆ.
ಹನ್ನೆರಡನೇ ಶತಮಾನದಲ್ಲಿ ಶುರುವಾಗಿ ದೇಶವ್ಯಾಪಿ ಹರಡಿದ ಭಕ್ತಿ ಪಂಥದ ಪ್ರಧಾನ ಲಹರಿ ಮಿಲನದ್ದೇ ಆಗಿದೆ. ಇಲ್ಲಿ ಧರ್ಮ ಕಾಮದ ವಿರೋಧಿಯಾಗದೆ ಅದರ ಬೆಂಬಲಕ್ಕೆ ನಿಲ್ಲುತ್ತದೆ. ಹುಲುಮಾನವರಂತೆ ದೇವಾನುದೇವತೆಗಳು ಕೂಡ ಕಾಮದಾಟದ ಹಲವು ಬಣ್ಣಗಳಲ್ಲಿ ಮುಳುಗಿ ಹೋಗಿದ್ದವರೇ ಎಂದು ಹತ್ತು ಹಲವು ಸಾಹಿತ್ಯ ಕೃತಿಗಳು ನಮಗೆ ತೋರಿಸುತ್ತವೆ. ಹನ್ನೆರಡನೆ ಶತಮಾನದ ಜಯದೇವನ ಗೀತ ಗೋವಿಂದದ ಈ ಸಾಲುಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ರಾಧ ಮತ್ತು ಕೃಷ್ಣರ ಕಾಮದಾಟ ಉತ್ತುಂಗ ತಲುಪಿ ಎಲ್ಲವು ಶಮನಗೊಳ್ಳುವ ಕ್ಷಣಗಳಲ್ಲಿ ರಾಧ ಬಿಚ್ಚಿಟ್ಟ ತನ್ನ ವಸ್ತ್ರ ಹಾಗು ಆಭರಣಗಳನ್ನ ತೊಡಿಸಲು, ಕೆದರಿದ ಕೇಶ ರಾಶಿಯನ್ನ ಸರಿಪಡಿಸಲು ಕೃಷ್ಣನಿಗೆ ಹೀಗೆ ಹೇಳುತ್ತಾಳೆ:

Paint a leaf on my breast
ನನ್ನೆದೆಯ ಮೇಲೆ ಚೆಂದದ ಚಿತ್ತಾರ ಬಿಡಿಸು
lay a gridle on my hips
ನನ್ನ ನಿತಂಬಗಳ ಮೇಲೆ ಜಾಲರಿಯ ಹರಡಿಸು
twine my heavy braid with flowers,
ಹೆಣೆದ ಭಾರದ ಜಡೆಗೆ ಹೂ ಮುಡಿಸು
fix rows of bangles on my hands
ಕೈಗೆ ಸಾಲು ಸಾಲು ಬಳೆಗಳ ತೋಡಿಸು
and jewelled anklets on my feet
ಕಾಲಿಗೆ ರತ್ನಾಭರಣದ ಕಾಲ್ಗೆಜ್ಜೆಯ ತೊಡಿಸೆಂದಳು ರಾಧ
Her yellow-robbed lover
ಹಳದಿ ಉಡುಕೆಯ ಪ್ರಿಯತಮ ಹಾಗೆ ಮಾಡಿದ.
did what Radha said.

ಪುರುಷೋತ್ತಮನಾದ ಕೃಷ್ಣನಿಂದ ರಾಧಾಳ ಪಾದ ಸ್ಪರ್ಶ ಮಾಡಿಸುವುದಾದರು ಹೇಗೆ? ಅದು ಮಹಾಪಾಪವಾದಿತೆಂದು ಕವಿತೆಯ ಕೊನೆಯ ಸಾಲುಗಳನ್ನ ಬರೆಯದೆ ಹಾಗೆ ಉಳಿಸಿ ಸ್ನಾನಕ್ಕೆಂದು ಜಯದೇವ ಹೋದನಂತೆ. ಅವನ ಮರಳಿ ಬರುವ ಹೊತ್ತಿಗೆ ಆ ಸಾಲುಗಳನ್ನ ಕೃಷ್ಣನೇ ಪೂರ್ಣಗೊಳಿಸಿದ್ದನಂತೆ. ನಮ್ಮ ಪ್ರಾಚೀನ ಭಾರತದಲ್ಲಿ ಕಾಮದಾಟಕ್ಕೆ, ವಿನೋದಕ್ಕೆ ಎಂದಿಗೂ ನಿಷೇಧ ಹೇರಿರಲಿಲ್ಲ , ಇಲ್ಲಿ ಲಿಂಗ ಪಾತ್ರಗಳಿಗೂ (gender roles) ಯಾವ ಪ್ರಾಧಾನ್ಯತೆ ಇರಲಿಲ್ಲ ಎಂದು ಅರ್ಥಮಾಡಿಕೊಳ್ಳಲು ದೇವಾಲಯಗಳು ಮತ್ತು ಸಾಹಿತ್ಯ ಸಾಕಲ್ಲವೇ?

ಇರಲಿ, ವರಾಹಮೀರ ಬರೆದ ಬ್ರಿಹತ್ ಸಂಹಿತದಲ್ಲಿ ಹೀಗೆ ಬರೆಯುತ್ತಾನೆ

“ಇಡಿಯ ಜಗತ್ತೇ, ಬ್ರಹ್ಮನ್ ನಿಂದ ಹಿಡಿದು ಸಣ್ಣ ಹುಳುವಿನವರೆಗೂ, ಗಂಡು ಹೆಣ್ಣಿನ ಮಿಲನದಲ್ಲೇ ನಿಂತಿದೆ. ಸುಂದರ ಕನ್ಯೆಯಾರನ್ನ ಸದಾ ನೋಡಲು ಸೃಷ್ಟಿಕರ್ತ ಬ್ರಹ್ಮನೂ ಚತುರ್ಮುಖಿಯಾದ. ಅಂತದರಲ್ಲಿ ನಾವು ಏಕೆ ಕಾಮದಿಂದ ವಿಮುಖರಾಗಬೇಕು? ಅದರಲ್ಲಿ ಅಸಹ್ಯ ಪಡುವುದೇನಿದೆ?”

ಇಷ್ಟೆಲ್ಲಾ sexually liberal ಆಗಿದ್ದ ಭಾರತ, ಹಿಂದೂ ಸಮಾಜ ಈಗ ಸಂಕುಚಿತವಾಗಿದ್ದು ಹೇಗೆ? ಈಗಿನ sexually dark ageಗೆ ನಾವು ಕಾಲಿಟ್ಟಿದ್ದು ಹೇಗೆ? ಕೆಲವರು ಈ ಬದಲಾವಣೆಗೆ ಮೊಘಲ್ ಮತ್ತು ಮುಸ್ಲಿಂ ಆಳ್ವಿಕೆಯನ್ನ ದೂರಿದರೆ, ಇನ್ನು ಕೆಲವರು ವಿಕ್ಟೋರಿಯನ್ ಮೊರಾಲಿಟಿ ಮತ್ತು ಕ್ರೈಸ್ತ ಧರ್ಮಕ್ಕೂ, ಕಾಮಕ್ಕೂ ಇದ್ದ uneasy ಸಂಬಂಧವನ್ನು ದೂಷಿಸುತ್ತಾರೆ. ಆದರೆ ಬದಲಾದ ನಮ್ಮ ಹಿಂದೂ ಸಂಸ್ಕೃತಿಯಲ್ಲೇ ಮೇಲಿನ ಪ್ರಶ್ನೆಗಳಿಗೆ ಉತ್ತರವಿದೆ.

ಮೊದಲನೆಯದಾಗಿ ಕಳೆದ ಇನ್ನೂರು ವರುಷಗಳಲ್ಲಿ ಸಂತ ಮಾರ್ಗಕ್ಕೆ, ಅವರ ಆದರ್ಶಗಳಿಗೆ, ಬ್ರಹ್ಮಚರ್ಯಕ್ಕೆ ಅತಿಯಾದ ಆದ್ಯತೆ ನೀಡಿಲಾಗಿದೆ. ಆಧ್ಯಾತ್ಮ-ಬ್ರಹ್ಮಚರ್ಯವನ್ನು ಒಂದಾಗಿಸಿದ್ದೇವೆ. ದೈಹಿಕ ದೌರ್ಬಲ್ಯ ಹಾಗು ಅಧ್ಯಾಮಿಕ ಅವನತಿಗೆ ವೀರ್ಯ ನಾಶವೇ ಕಾರಣವೆಂಬ ಸಾವಿರಾರು ನಂಬಿಕೆಗಳನ್ನೂ, ಕಟ್ಟುಕತೆಗಳನ್ನು ತೇಲಿಬಿಟ್ಟಿದ್ದೇವೆ. ಕಾಮದ ಶಕ್ತಿ ಸಂಕೇತವಾದ ವೀರ್ಯವನ್ನ ಹಾಳುಮಾಡಿಕೊಳ್ಳದೆ ಹಾಗೆ ಉಳಿಸಿಕೊಂಡರೆ ಅದು ಬೆನ್ನುಮೂಳೆಯ ಮೂಲಕ ಮೇಲ್ಮುಖವಾಗಿ ಚಲಿಸಿ ಮೆದುಳಿನಲ್ಲಿ ಓಜಸ್ ಆಗುತ್ತೆ. ವ್ಯಕ್ತಿ ಖ್ಯಾತನಾಗಲು, ತೇಜಸ್/ ಸಂಪತ್ಭರಿತನಾಗಲು, ಆಧ್ಯಾತ್ಮಿಕವಾಗಿ ಯಶ ಕಾಣಲು ಓಜಸ್ ಮುಖ್ಯವೆಂದು ಪ್ರತಿಪಾದಿಸಲಾಗಿದೆ. ಆಯುರ್ವೇದದ ಪಿತಾಮಹ ಶುಶ್ರುತ ವೀರ್ಯ ಆತ್ಮದ ಘನರೂಪವೆಂದೇ ನಂಬಿದ್ದ. ಇದರ ಜೊತೆಗೆ ಪ್ರತಿಯೊಂದು ಹನಿ ವೀರ್ಯವು ನಲವತ್ತು ಹನಿ ರಕ್ತಕ್ಕೆ ಸಮವೆಂದು, ಮೈಥುನ, ಸಂಭೋಗವೊಂದು 24 ಘಂಟೆಯ ಬೌದ್ದಿಕ ಕ್ರಿಯೆಗೆ ಅಥವಾ 72ಘಂಟೆಗಳ ದೈಹಿಕ ಶ್ರಮಕ್ಕೆ ಸಮವೆಂಬ ಕತೆಗಳು ಆಯುರ್ವೇದದಲ್ಲಿ ಎದ್ದು ಕಾಣತೊಡಗಿದವು. ಅಷ್ಟರಲ್ಲಿ ಗಾಂಧಿ ಸಂತ ಮಾರ್ಗ, ಆದರ್ಶ, ಬ್ರಹ್ಮಚರ್ಯವನ್ನ ಪ್ರತಿಪಾದಿಸಿ ಕಾರ್ಯರೂಪಕ್ಕೆ ತಂದರು ಕೂಡ. ವಿಶ್ವಾಮಿತ್ರ, ಗೌತಮ ಮುನಿಗಳು ಮೇನಕ ರಂಭರ ಮೋಹಕ್ಕೆ ಒಳಗಾಗಿ ವೀರ್ಯ ಸ್ಖಲನದಿಂದ ತಮ್ಮ ತೇಜಸ್ಸು ಯಶಸ್ಸು ಕಳೆದುಕೊಂಡ ಕತೆಗಳು ಚಲಾವಣೆಗೆ ಬಂದವು. ಹೆಣ್ಣು ಮಾಯೆ ಅವಳನ್ನ ದೂರವಿಟ್ಟರೆ ಯಶ ಖಂಡಿತ ಎಂಬುವಂತಾಯಿತು.

ಬ್ರಹ್ಮಚರ್ಯದ ಅಥವಾ ಹಲವು ಆದರ್ಶಗಳನ್ನ ಸಂಪೂರ್ಣವಾಗಿ ನಿರಾಕರಿಸಲು ನಾನು ಹೇಳುತ್ತಿಲ್ಲ. ಥಾಮಸ್ ಮನ್ ಹೇಳಿದ “efforts to sustain a renunciation of sexual love are worthy of respect, for they deal with the spiritual and thus with the pre-eminently human” ಎಂಬ ಮಾತುಗಳನ್ನ ಒಪ್ಪುತ್ತಲೇ ಮೂರನೆ ಶತಮಾನದಿಂದ ಸುಮಾರು 17ನೆಯ ಶತಮಾನದವರೆಗೂ ಇದ್ದು ಕಾಮದ ಬಗೆಗಿನ ಒಂದು ಆರ್ಗಾನಿಕ್ ಅರ್ಥೈಸುವಿಕೆ ಕ್ರಮೇಣ ನಶಿಸಿದೆ ಎಂದು ಹೇಳಬಯಸುತ್ತೇನೆ,

ಈ ಕತೆಗಳ, ಆದರ್ಶಗಳ ಮೂಲಕ ಹುಟ್ಟಿಕೊಂಡ ಕಾಮದ ಬಗೆಗಿನ ಭಯಾನಕ ಪ್ರತಿಮೆಗಳು ಇಂದು ಹಲವರಲ್ಲಿ ಆತಂಕ ಹುಟ್ಟಿಸಿದೆ. ಸಮಾಜ ಸಾಂಸ್ಕೃತಿಕ ರೋಗವೊಂದಕ್ಕೆ ತುತ್ತಾಗಿದೆ. ಯುವಕರು ಈಗ ಆಲಸ್ಯ, ತಲೆನೋವು, ತಮ್ಮ ದೇಹದ ಮೇಲೆ ಅಸಹ್ಯ ಪಡುವುದು, ಸ್ವಪ್ನಸ್ಖಲನ, ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಪ್ರಾಚೀನ ಕಾಲಕ್ಕೆ ಹೋಲಿಸಿದರೆ ಇದೊಂದು ದುರಂತಮಯ ಸವಕಳಿ, ಕ್ಷೋಭೆ ಅಂತಲೇ ಹೇಳಬಹುದು.

ಇಂದು ಈ ಕತೆಗಳು, ಆದರ್ಶಗಳು ಎಷ್ಟು ಆಳವಾಗಿ ಬೇರೂರಿ, ನಮ್ಮ ಸೂಪರ್ ಇಗೋಯಾಗಿದೆಯೆಂದರೆ ಯಾರು ಕೂಡ ಪಾಪ ಪ್ರಜ್ಞೆಯಿಲ್ಲದೆ, ಇರುಸುಮುರುಸಿಲ್ಲದೆ ಕಾಮದಲ್ಲಿ ತೊಡಗಿಕೊಳ್ಳಲಾರದ ಸ್ಥಿತಿ ತಲುಪಿದ್ದೇವೆ. ಸದಾ ಸುಡುವ ಪಾಪ ಪ್ರಜ್ಞೆಯಿಂದ, ನಂಬಿದ ಟೊಳ್ಳು ಆದರ್ಶಗಳನ್ನ ಪಾಲಿಸಲಾಗದೆ, ವಾಸ್ತವದಲ್ಲಿ ಕಾಮ ವಿನೋದಗಳಲ್ಲಿ ತೊಡಗಿಕೊಳ್ಳಲಾಗದೆ ವರ್ಚುಯಲ್ ಮಾಧ್ಯಮ, ಸೆಕ್ಸ್ ಚಾಟ್, ಪೋರ್ನ್ ವೀಕ್ಷಣೆಗಳೆಲ್ಲೇ ನಮ್ಮ ಭವ್ಯ ಭಾರತ ಮುಳುಗಿ ಹೋಗಿದೆ ಅನ್ನಿಸುತ್ತೆ.
ನಾವೇಕೆ ಖುಜರಾಹೋ, ಕೊನಾರ್ಕ್, ಜಯದೇವನ, ವರಾಹಮೀರನ ಕಾಲಕ್ಕೆ ಹೋಗಬಾರದು. ಈ ಕಾಲದ ಆರ್ಗಾನಿಕ್ ಭವ್ಯ ಭಾರತ ಈಗಿನ ಸಂಪ್ರದಾಯವಾದಿ, ಮಡಿವಂತ ಧರ್ಮವಾದಿಗಳಿಗೆ ಎಷ್ಟು ಒಪ್ಪಿತವಾಗಬಹುದು?

(ಸಾಕಷ್ಟು ವಿಷಯಗಳನ್ನ ಸುಧೀರ್ ಕಾಕರ್ ರವರ ಪುಸ್ತಕಗಳಿಂದ ತೆಗೆದುಕೊಂಡಿದ್ದೇನೆ)

  • ಹರೀಶ್‌ ಗಂಗಾಧರ್‌