Saturday, December 14, 2024
Homeಸುದ್ದಿರಾಜ್ಯ5 ಸಾವಿರ ಶಿಕ್ಷಕರ ನೇಮಕ

5 ಸಾವಿರ ಶಿಕ್ಷಕರ ನೇಮಕ

ಬೆಂಗಳೂರು: ‘ಸರ್ಕಾರಿ ಶಾಲೆಗಳಲ್ಲಿ ಸುಮಾರು 20 ಸಾವಿರ ಶಿಕ್ಷಕರ ಕೊರತೆ ಇದೆ. ಇದನ್ನು ನೀಗಿಸಲು ಶೀಘ್ರವೇ 5 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದರು.

ನಗರದ ಜೆ.ಪಿ.ನಗರ 1ನೇ ಹಂತದಲ್ಲಿ ನಿರ್ಮಿಸಲಾಗಿರುವ ಸಾರಕ್ಕಿ ಅಬ್ಬಯ್ಯ ರೆಡ್ಡಿ ಸ್ಮಾರಕ ಸರ್ಕಾರಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಶಿಕ್ಷಕರ ಹುದ್ದೆಗೆ ಹೊಸದಾಗಿ ನೇಮಕಾತಿ ನಡೆಸಲು ಆಗಿರಲಿಲ್ಲ. ಈ ಹಿಂದೆ 10 ಸಾವಿರ ಶಿಕ್ಷಕರ ಹುದ್ದೆಗೆ ನೇಮಕಾತಿ ಆದೇಶ ಹೊರಡಿಸಲಾಗಿತ್ತು. ಆಗ 3,800 ಮಂದಿಯಷ್ಟೇ ಅರ್ಹತೆ ಗಳಿಸಿದ್ದರು. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇಲ್ಲ. 6 ರಿಂದ 8ನೇ ತರಗತಿಗೆ ಶಿಕ್ಷಕರ ಕೊರತೆ ಕಾಡುತ್ತಿದೆ. ‍ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಬಡ್ತಿ ನೀಡಿ ಈ ಸಮಸ್ಯೆ ಬಗೆಹರಿಸಲು ಚಿಂತನೆ ನಡೆಸಲಾಗಿದೆ’ ಎಂದರು.

‘ಕೋವಿಡ್‌ನಿಂದ ಶಿಕ್ಷಣ ಕ್ಷೇತ್ರಕ್ಕೂ ಸಂಕಷ್ಟ ಎದುರಾಗಿದೆ. ಅದರಿಂದ ಹೊರಬರಲು ‘ನಮ್ಮ ಶಾಲೆ ನಮ್ಮ ಕೊಡುಗೆ’ ಎಂಬ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲು ಮುಂದಾಗಿದ್ದೇವೆ. ಇದಕ್ಕಾಗಿ ಹೊಸ ಆ್ಯಪ್‌ ಕೂಡ ಪರಿಚಯಿಸಲಿದ್ದೇವೆ’ ಎಂದು ಹೇಳಿದರು.

‘ಶಿಕ್ಷಣವು ಕೇವಲ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಲ್ಲ. ಇದರಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯೂ ಬಹಳ ಮುಖ್ಯ. ಸರ್ಕಾರದ ಜೊತೆ ಅವರೂ ಕೈಜೋಡಿಸಿದರೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಸಾಧ್ಯ. ಕೆಲ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ಹಾಗೂ ಐಟಿ ಉದ್ಯೋಗಿಗಳು ಸರ್ಕಾರಿ ಶಾಲೆಗಳ ಏಳಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದು ತಿಳಿಸಿದರು.

‘ಕೋವಿಡ್‌ ಬಳಿಕ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚುತ್ತಿದೆ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನೂ ನೀಡಲಾಗುತ್ತಿದೆ. ನಾವು ಮಾಡುತ್ತಿರುವ ಕಾರ್ಯವನ್ನು ಬಿಂಬಿಸಿಕೊಳ್ಳುವಲ್ಲಿ ನಾವು ಹಿಂದೆ ಬೀಳುತ್ತಿದ್ದೇವೆ. ಸರ್ಕಾರಿ ಶಾಲೆಗಳಲ್ಲಿ ಕಲಿತವರು ಯುಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ತೋರುತ್ತಿದ್ದಾರೆ. ‘ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸುವ ಯೋಚನೆಯೂ ಇದೆ. 1 ರಿಂದ 5ನೇ ತರಗತಿಗಳ ಯಶಸ್ಸನ್ನು ಆಧರಿಸಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದರು.