Saturday, December 14, 2024
Homeಕರಾವಳಿ ಕರ್ನಾಟಕಉತ್ತರ ಕನ್ನಡ5 ಕೋಟಿ ರೂಪಾಯಿ ಮೌಲ್ಯದ ತಿಮಿಂಗಿಲದ ವಾಂತಿ ವಶಕ್ಕೆ

5 ಕೋಟಿ ರೂಪಾಯಿ ಮೌಲ್ಯದ ತಿಮಿಂಗಿಲದ ವಾಂತಿ ವಶಕ್ಕೆ

ಶಿರಸಿ: ನಿಷೇಧಿತ ಆಂಬರ್ ಗ್ರೀಸ್ (ತಿಮಿಂಗಿಲದ ವಾಂತಿ) ಮಾರಾಟಕ್ಕೆ ಯತ್ನಿಸಿದ್ದ ಇಬ್ಬರನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಅಂದಾಜು ₹5 ಕೋಟಿ ಮೌಲ್ಯದ 5.50 ಕೆ.ಜಿ.ತೂಕದ ಆಂಬರ್ ಗ್ರೀಸ್ ವಶಕ್ಕೆ ಪಡೆಯಲಾಗಿದ್ದು, ಸಾಗಾಟಕ್ಕೆ ಬಳಸಿದ್ದ ಮಹಾರಾಷ್ಟ್ರ ನೊಂದಣಿಯ ಕಾರನ್ನು ಜಫ್ತು ಮಾಡಲಾಗಿದೆ.

ಅಂಕೋಲಾ ತಾಲ್ಲೂಕು ಅವರ್ಸಾ ಮೂಲದ, ಸದ್ಯ ಬೆಳಗಾವಿಯಲ್ಲಿರುವ ಸಂತೋಷ ಬಾಲಚಂದ್ರ ಕಾಮತ್ (43), ಶಿರಸಿಯ ಮರಾಠಿಕೊಪ್ಪದ ರಾಜೇಶ ಮಂಜುನಾಥ ನಾಯ್ಕ (32) ಬಂಧಿತರು.

‘ಇಲ್ಲಿನ ಮರಾಠಿಕೊಪ್ಪ 10ನೇ ಕ್ರಾಸ್ ನಲ್ಲಿ ಆರೋಪಿಗಳು ಆಂಬರ್ ಗ್ರೀಸ್ ಮಾರಾಟಕ್ಕಾಗಿ ಪ್ರಯತ್ನಿಸಿದ್ದರು. ವಿಚಾರಣೆ ನಡೆಸಲಾಗುತ್ತಿದ್ದು ಎಲ್ಲಿಂದ ಆಂಬರ್ ಗ್ರೀಸ್ ತಂದಿದ್ದಾರೆ ಮತ್ತು ಎಲ್ಲಿಗೆ ಸಾಗಿಸುತ್ತಿದ್ದರು ಎಂಬುದು ಆ ಬಳಿಕವೇ ಸ್ಪಷ್ಟವಾಗಲಿದೆ’ ಎಂದು ಡಿಎಸ್ಪಿ ರವಿ ನಾಯ್ಕ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.