ರಿಯಾದ್: ಸುದೀರ್ಘ ಕಾನೂನು ಹೋರಾಟದನಂತರ, ಉಪ್ಪಳ ಮೂಲದ ಅನಿವಾಸಿ ಭಾರತೀಯ ಸುರಕ್ಷಿತವಾಗಿ ತಮ್ಮ ಹುಟ್ಟೂರಿಗೆ ಮರಳಿದ್ದಾರೆ.
ಸೌದಿ ಅರೇಬಿಯಾದ ರಿಯಾದ್ ನಲ್ಲಿರುವ ಉಡುಪಿ ಮೂಲದ ವಕೀಲ ಮತ್ತು ಸಮಾಜ ಸೇವಕ Adv. ಪಿ. ಎ. ಹಮೀದ್ ಪಡುಬಿದ್ರಿಯವರ ಅವಿರತ ಪ್ರಯತ್ನ ಮತ್ತು ಸಹಾಯದಿಂದ, ಇವರು ಕಳೆದ ಒಂದು ವಾರದ ಹಿಂದೆ ಸೌದಿಅರೇಬಿಯಾದ ಜಿದ್ದಾದಿಂದ ಕೋಝಿಕೋಡ್ ಮೂಲಕ 6 ವರ್ಷಗಳನಂತರ ತಾಯ್ನಾನಾಡಿಗೆ ಮರಳಿ ತಮ್ಮ ಕುಟುಂಬವನ್ನು ಸೇರಿಕೊಂಡಿರುತ್ತಾರೆ. ಅವರನ್ನು ಸ್ವಾಗತಿಸಲು ಅವರ ಇಡೀ ಕುಟುಂಬದವರು ಕೋಝಿಕೋಡ್ ವಿಮಾನ ನಿಲ್ದಾಣಕ್ಕೆ ತೆರಳಿದ್ದು,ಅವರನ್ನು ಹ್ರದಯಂಗಮವಾಗಿ ಬರಮಾಡಿಕೊಳ್ಳಲಾಯಿತು.
ಮುಹಮ್ಮದ್ ಸಲೀಂ ಮೊಹಿದ್ದೀನ್ ಸಾಹೇಬ್, ಸುಮಾರು 54 ವರ್ಷ ಪ್ರಾಯ, ಸೌದಿ ಅರೇಬಿಯಾದ ಪಶ್ಚಿಮ ಪ್ರಾಂತ್ಯದ ಜಿದ್ದಾದ ಅಲ್-ವಹಾ ಹೋಟೆಲ್ ನಲ್ಲಿ ಉದ್ಯೋಗಿಯಾಗಿದ್ದರು.
ಪ್ರಕರಣದ ಹಿನ್ನೆಲೆ:
ಮುಹಮ್ಮದ್ ಸಲೀಂರವರು 32 ವರ್ಷಗಳಿಂದ ಜಿದ್ದಾದ ಅಲ್-ವಹಾ ಇಂಟರ್ನ್ಯಾಷನಲ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಅವರು 2015 ರಲ್ಲಿ ರಜೆಯ ನಿಮಿತ್ತ ಊರಿಗೆ ಹೋಗಿದ್ದು, ಸೌದಿಗೆ ಮರಳಿ ಬಂದನಂತರ ಅವರಿಗೆ ರಜೆಯಲ್ಲಿ ಹೋಗಲು ಅಸಾಧ್ಯವಾಗಿತ್ತು.
ಸುಮಾರು 3 ವರ್ಷಗಳ ಹಿಂದಿನವರೆಗೂ ಅವರು ಉದ್ಯೋಗದಲ್ಲಿದ್ದ ಹೋಟೆಲ್ ಬಹಳ ಉತ್ತಮವಾಗಿ ಮತ್ತು ಸುಗಮವಾಗಿ ನಡೆಯುತ್ತಿತ್ತು. ಹೋಟೆಲ್ ಮಾಲಕ ಅಬ್ದುಲ್ಲಾ ಬಕರ್ ಅಲ್-ಖತಾಮಿಯ
ಮರಣದ ನಂತರ ಸಲೀಂರವರ ಸಮಸ್ಯೆಯ ಸರಣಿ ಪ್ರಾರಂಭವಾಗುತ್ತದೆ. ಸುಗಮ ಜೀವನ ದುಸ್ತರವಾಗುತ್ತದೆ.
ಮಾಲಕರ ಮರಣದ ನಂತರ, ಹೋಟೆಲ್ ಕ್ರಮೇಣ ಸ್ಥಗಿತಗೊಂಡಿತು ಮತ್ತು ಮುಚ್ಚಲ್ಪಟ್ಟಿತು. ಸಲೀಂ ಮತ್ತು ಅವರ ಇತರ ಸಹೋದ್ಯೋಗಿಗಳಿಗೆ ಹೋಟೆಲ್ ನ ಮುಚ್ಚುವಿಕೆಯ ಕಾರಣದಿಂದ ಲಭ್ಯವಾಗಬೇಕಾದ ಪರಿಹಾರ ಮತ್ತು ಸೇವಾ ಪ್ರಯೋಜನಗಳು (ESB) ಲಭಿಸದ ಕಾರಣ ತೀವ್ರ ಸಮಸ್ಯೆಗೆ ಸಿಲುಕಿದರು.ಈ ಬಗ್ಗೆ ಹೋಟೆಲ್ ನ ಆಡಳಿತ ಮಂಡಳಿಯೊಂದಿಗೆ ಸಮಸ್ಯೆಯ ಅಗಾಧತೆಯನ್ನು ತಿಳಿಸಲಾಗಿ,ಅವರನ್ನು ಮನವೊಲಿಸಿದರೂ, ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಅಲ್ಲದೆ, ಈ ಬಗ್ಗೆ ಅವರು ನಡೆಸಿದ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು. ಏತನ್ಮಧ್ಯೆ, ಅವರ ಇಕಾಮಾ ಕೂಡ ನವೀಕರಿಸಲಾಗದೆ ಸುಮಾರು ಎರಡು ವರ್ಷಗಳ ಹಿಂದೆ ಅಮಾನ್ಯವಾಗಿತ್ತು.
ಈ ಹಿನ್ನೆಲೆಯಲ್ಲಿ, ಅವರು ಸುಮಾರು ಮೂರು ವರ್ಷಗಳ ಹಿಂದೆ ತಮ್ಮ ಇಎಸ್ಬಿ
ಹಾಗೂ ಇತರ ಹಕ್ಕುಗಳಿಗಾಗಿ ಜಿದ್ದಾದ ಕಾರ್ಮಿಕ ನ್ಯಾಯಾಲಯದಲ್ಲಿ ಹೋಟೆಲ್ ವಿರುದ್ಧ ಮೊಕದ್ದಮೆ ಹೂಡಿದರು. ಹಲವಾರು ವಿಚಾರಣೆಗಳು ಮತ್ತು ನಡಾವಳಿಗಳ ನಂತರ ನ್ಯಾಯಾಲಯ, ಅವರ ಹಕ್ಕುಗಳನ್ನು ನೀಡುವಂತೆಯೂ ಮತ್ತು ಅಂತಿಮ ನಿರ್ಗಮನ (Final Exit) ಕ್ಕೆ ಅನುವು ಮಾಡಿಕೊಡುವಂತೆಯೂ ಹೋಟೆಲ್ ಮೆನೇಜ್ಮೆಂಟ್ ಗೆ ಮತ್ತು ನಿರ್ಗಮನಕ್ಕೆ ಸಂಬಂಧಪಟ್ಟ ಪ್ರಕ್ರಿಯೆಯನ್ನು ಜಿದ್ದಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ಗೆ ಹೆಚ್ಚಿನ ನಿರ್ವಹಣೆಗಾಗಿ ಸೂಚನೆನೀಡಿ ತೀರ್ಪು ನೀಡಿತು.
ಈ ನಡುವೆ, ಸಲೀಂರವರು, ರಿಯಾದ್ ನಲ್ಲಿರುವ ಸಾಮಾಜಿಕ ಕಾರ್ಯಕರ್ತರೂ ಮತ್ತು ವಕೀಲರೂಆದ Adv.ಪಿ.ಎ.ಹಮೀದ್ ಪಡುಬಿದ್ರಿಯವರ ಕಾನೂನು ಸಹಾಯ ಮತ್ತು ಸಹಕಾರವನ್ನು ಕೋರಿದ್ದರು.
ತಕ್ಷಣ ಪ್ರತಿಕ್ರಿಯೆ ನೀಡಿದ Adv.ಪಿ. ಎ. ಹಮೀದ್ ರವರು, ತಮ್ಮ ಕಾನೂನು ನೆರವು ಹಾಗೂ ಸಹಕಾರದಿಂದ ಮತ್ತು
ಜಿದ್ದಾದಲ್ಲಿರುವ ಭಾರತೀಯ ಕಾನ್ಸುಲರ್ ಜನರಲ್ (ಸಿಜಿಇ) ಮಾನ್ಯ ಶಾಹಿದ್ ಆಲಂ, IFS ರವರನ್ನು ಈ ಬಗ್ಗೆ ಸಂಪರ್ಕಿಸಲಾದ ನಂತರ,ಇದಕ್ಕೆ ತಕ್ಷಣ ಸ್ಪಂದಿಸಿದ ಸಿಜಿಇಯವರು ತಮ್ಮ ಸೂಚನೆಯ ಮೇರೆಗೆ ,ಎರಡು ವಾರಗಳ ಮಾನ್ಯತೆ ಇರುವ ಅಂತಿಮ ನಿರ್ಗಮನ ವೀಸಾವನ್ನು ಪ್ರಸ್ತುತ ಸೌದಿ ಪಾಸ್ ಪೋರ್ಟ್ ಮೂಲಕ ಸಲೀಂರವರಿಗೆ ನೀಡಲಾಯಿತು. ಈ ಮೂಲಕ ಸಲೀಂರವರ ಪ್ರಕರಣವು ಸುಖಾಂತ್ಯ ಕಂಡು,ಅವರು ಒಂದು ದೊಡ್ಡ ನಿಟ್ಟುಸಿರು ಬಿಡುವಂತಾಯಿತು.
ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸಲೀಂರಿಗೆ ESB ಗಳ ಪಾವತಿಯನ್ನು ನೀಡಿದ್ದರೂ, ಕೆಲವು ಬಾಕಿ ಇರುವ ಔಪಚಾರಿಕತೆಗಳಿಂದಾಗಿ
ವಿಳಂಬವಾಗಿದೆ; ಅದರಂತೆ, ಸಲೀಂರವರು ತಮ್ಮ ಸಂಬಂಧಿ ಶೇಖ್ ಮೊಹಮ್ಮದ್ ಫಾರೂಕ್ ಅವರ ಪರವಾಗಿ ಜಿದ್ದಾದಲ್ಲಿ ಇಎಸ್ಬಿಗಳ ಮೊತ್ತವನ್ನು ಚೆಕ್ ಅಥವಾ ನಗದು ಮೂಲಕ ಸಂಗ್ರಹಿಸುವುದಕ್ಕಾಗಿ ಪವರ್ ಆಫ್ ಅಟಾರ್ನಿಯನ್ನು ಜಾರಿಗೊಳಿಸಿದರು.
ತಾಯ್ನಾಡಿಗೆ ತಲುಪಿದ ನಂತರ, ಸಲೀಂ ಮತ್ತು ಅವರ ಕುಟುಂಬವು Adv. ಪಿ. ಎ. ಹಮೀದ್ ಪಡುಬಿದ್ರಿರವರಿಗೆ ಅಪಾರ ಧನ್ಯವಾದಗಳನ್ನು ಅರ್ಪಿಸಿತು. ಸಲೀಂರವರನ್ನು ಭಾರತಕ್ಕೆ ಕರೆತರುವಲ್ಲಿ ಪಿ.ಎ ಹಮೀದ್ ರವರು ಮಾಡಿದ ಸಾಮಾಜಿಕ-ಮಾನವೀಯ ಸೇವಾಕಾರ್ಯಕ್ಕಾಗಿ ಹಾಗೂ ಪಿ.ಎ.ಹಮೀದ್ ರವರ ಮನವಿಗೆ ತಕ್ಷಣಸ್ಪಂದಿಸಿದ ಮಾನ್ಯ ಸಿಜಿಐ, ಶಾಹಿದ್ ಆಲಂ ಐಎಫ್ಎಸ್ ಮತ್ತ ಅವರ ಸಿಬ್ಬಂದಿಗಳಿಗೆ ಅಪಾರ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.