Saturday, December 14, 2024
Homeರಾಜ್ಯಬೆಂಗಳೂರು ವಿಭಾಗ70ನೇ ವಸಂತಕ್ಕೆ ಕಾಲಿಟ್ಟ ಮು.ಚಂದ್ರು: ಎಎಪಿ ಮುಖಂಡರ ಜೊತೆ ಸರಳ ಆಚರಣೆ

70ನೇ ವಸಂತಕ್ಕೆ ಕಾಲಿಟ್ಟ ಮು.ಚಂದ್ರು: ಎಎಪಿ ಮುಖಂಡರ ಜೊತೆ ಸರಳ ಆಚರಣೆ

ಬೆಂಗಳೂರು: ಆಮ್ ಆದ್ಮಿ ಪಕ್ಷ ಕರ್ನಾಟಕದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು 70ನೇ ಜನ್ಮದಿನವನ್ನು ಪಕ್ಷದ ಕಚೇರಿಯಲ್ಲಿ ಮುಖಂಡರ ಜೊತೆ ಸರಳವಾಗಿ ಆಚರಿಸಿಕೊಂಡರು. ಈ ಸಂದರ್ಭ ಮಾತನಾಡಿದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಅವರು, 70ನೇ ವಯಸ್ಸಿನಲ್ಲೂ ನಮ್ಮ ರಾಜ್ಯದ ಜನತೆಯ, ಭಾಷೆಯ, ಜಲದ ಪರವಾಗಿ ಹೋರಾಟ ಮಾಡುತ್ತಿರುವುದು ಎಲ್ಲರಿಗೂ ಸ್ಪೂರ್ತಿಯಾಗಿದೆ. ತಮಗಿರುವ ಜನಪ್ರಿಯತೆಯ ಮೂಲಕ ಪಕ್ಷವನ್ನು ಕಟ್ಟುವಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರ ಮುಂದಾಳತ್ವದಲ್ಲಿ, ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಗೊಳ್ಳುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ ಎಂದು ಶ್ಲಾಘಿಸಿದರು. ರಾಜಕೀಯ ವಲಯದಲ್ಲಿ 3 ದಶಕಗಳಿಂದ ಸಕ್ರಿಯರಾಗಿರುವ ಚಂದ್ರು ಅವರು ರಾಜ್ಯವನ್ನು ಮತ್ತೊಂದು ಮಜಲಿನತ್ತ ಕೊಂಡೊಯ್ಯುತ್ತಿದ್ದಾರೆ. ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಪರ, ಶಿಕ್ಷಣ ಮತ್ತು ಆರೋಗ್ಯ ಸೇವೆ ಹಾಗೂ ಪ್ರಾದೇಶಿಕತೆಗೆ ಒತ್ತು ನೀಡುವುದೇ ರಾಜಕಾರಣ ಎಂಬ ಹಾದಿಯಲ್ಲಿ ಯಶಸ್ಸು ಕಂಡಿರುವ ದೆಹಲಿ ಮತ್ತು ಪಂಜಾಬ್‌ನಲ್ಲಿ ಇರುವಂತಹ ಸರ್ಕಾರವನ್ನು ರಾಜ್ಯದಲ್ಲಿ ತರಬೇಕು ಎಂದು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು. ಮುಖ್ಯಮಂತ್ರಿ ಚಂದ್ರು ಅವರು ರಾಜಕೀಯವಾಗಿ ದೊಡ್ಡ ಮಟ್ಟದ ಬದಲಾವಣೆಯನ್ನು ಬಯಸುತ್ತಿರುವ ರಾಜಕಾರಣಿ. ನಮ್ಮ ಪಕ್ಷದ ಕಳಸವಿದ್ದಂತೆ. ಮುಂಬರುವ ಎಲ್ಲ ಚುನಾವಣೆಗಳಲ್ಲಿ ಚಂದ್ರು ಅವರ ನೇತೃತ್ವದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಬಲಿಷ್ಠ ಪಕ್ಷವಾಗಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಈ ಶುಭದಿನದಂದು ನಾವೆಲ್ಲರು ಶಪತ ಮಾಡುತ್ತಿದ್ದೇವೆ ಎಂದು ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಹೇಳಿದರು. ಪಕ್ಷದ ಮುಖಂಡರ ಸಮ್ಮುಖದಲ್ಲಿ ಮು.ಚಂದ್ರು ಅವರು ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದರು.