ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 77 ಕಳವು ಪ್ರಕರಣಗಳನ್ನು ಭೇದಿಸಿ ಆರೋಪಿಗಳಿಂದ ವಶಪಡಿಸಿಕೊಂಡ
ನಗ, ನಗದು, ವಾಹನ, ವಸ್ತುಗಳನ್ನು ( ₹ 89 ಲಕ್ಷ ಮೌಲ್ಯ) ವಾರಸುದಾರರಿಗೆ ನೀಡಲಾಯಿತು.
ನಗರದ ಡಿಎಆರ್ ಮೈದಾನದಲ್ಲಿ ಮಂಗಳವಾರ ನಡೆದ ‘ಪ್ರಾಪರ್ಟಿ ರಿಟರ್ನ್ ಪರೇಡ್’ (ವಶಪಡಿಸಿಕೊಂಡ ಸ್ವತ್ತು ವಾರಸುದಾರರಿಗೆ ಮರಳಿ ನೀಡುವುದು) ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಮತ್ತು ಇತರ ಪೊಲೀಸ್ ಅಧಿಕಾರಿಗಳು ನಗ, ನಗದು, ವಸ್ತುಗಳನ್ನು ವಾರಸುದಾರರಿಗೆ ಒಪ್ಪಿಸಿದರು.
42 ದ್ವಿಚಕ್ರ ವಾಹನ, ಎರಡು ತ್ರಿಚಕ್ರ ವಾಹನ, ಒಂದು ನಾಲ್ಕು ಚಕ್ರವಾಹನ, 900 ಗ್ರಾಂ ಚಿನ್ನಾಭರಣ, ಬೆಳ್ಳಿ ಆಭರಣ– 12 ಕೆ.ಜಿ, ಏಳು ಕ್ವಿಂಟಲ್ ಅಡಿಕೆ, ಎರಡು ಮೊಬೈಲ್ ಫೋನ್, ಎರಡು ಲ್ಯಾಪ್‌ಟಾಪ್, ಒಂದು ಕಂಪ್ಯೂಟರ್, ಒಂದು ಟ್ಯಾಬ್ಲೆಟ್, ಎರಡು ಕಲ್ಟಿವೇಟರ್, ಎರಡು ಜನರೇಟರ್, ಒಂದು ಚಕ್ಕಡಿ, 16 ಪ್ರಾಣಿಗಳು, ₹ 7.17 ಲಕ್ಷ ನಗದನ್ನು ವಾರಸುದಾರರಿಗೆ ನೀಡಲಾಯಿತು.
ಠಾಣೆವಾರು ಚಿಕ್ಕಮಗಳೂರು ನಗರ– 16, ಬಸವನಹಳ್ಳಿ ಮತ್ತು ಗ್ರಾಮಾಂತರ ತಲಾ ಎರಡು, ಅಜ್ಜಂಪುರ, ಬೀರೂರು ತಲಾ ಒಂಬತ್ತು, ಕಡೂರು ಏಳು, ತರೀಕೆರೆ ಆರು, ಯಗಟಿ ಐದು, ಲಕ್ಕವಳ್ಳಿ, ಲಿಂಗದಗಹಳ್ಳಿ ತಲಾ ನಾಲ್ಕು, ಮೂಡಿಗೆರೆ, ಬಾಳೆಹೊನ್ನೂರು, ಎನ್.ಆರ್.ಪುರ ತಲಾ ಎರಡು , ಆಲ್ದೂರು, ಮಲ್ಲಂದೂರು, ಬಾಳೂರು, ಬಣಕಲ್, ಗೋಣಿಬೀಡು, ಪಂಚನಹಳ್ಳಿ ಹಾಗೂ ಕೊಪ್ಪ ಠಾಣೆ ವ್ಯಾಪ್ತಿಯ ತಲಾ ಒಂದು ಒಟ್ಟು 77 ಪ್ರಕರಣಗಳನ್ನು ಪೊಲೀಸರು ಭೇದಿಸಿ ಆರೋಪಿಗಳಿಂದ ಮಾಲು ವಶಪಡಿಸಿಕೊಂಡಿದ್ದರು.
ನಗ, ನಗದು, ವಸ್ತುಗಳು ವಾಪಸ್ ಸಿಕ್ಕಿದ್ದಕ್ಕೆ ವಾರಸುದಾರರು ಸಂತಸ ವ್ಯಕ್ತಪಡಿಸಿದರು. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.