ಬೆಂಗಳೂರು: ಸಿನಿಮಾ ಅಂದರೆ ತಳುಕುಬಳುಕಿನ ಲೋಕ ಎಂಬ ತಿಳಿವಳಿಕೆ ಸಿನಿಮಾರಂಗದಿಂದ ಹೊರಗಿರುವವರಿಗಿದೆ. ಆದರೆ ಅಲ್ಲಿಯೂ ಮಾನವೀಯ ಹೃದಯಗಳು ಇವೆ ಎಂಬುದಕ್ಕೆ ಆಗಾಗ ಸಾಕ್ಷಿಗಳು ದೊರೆಯುತ್ತಿರುತ್ತದೆ.
ಪುನೀತ್ ರಾಜ್‌ಕುಮಾರ್ ಸದ್ದಿಲ್ಲದೇ ಹಲವು ಶಾಲೆಗಳಿಗೆ ನೆರವು ನೀಡುತ್ತಿದ್ದರು. ಶಕ್ತಿಧಾಮದಲ್ಲಿ ಹೆಣ್ಣುಮಕ್ಕಳಿಗೆ ನೆರವಾಗುತ್ತಿದ್ದರು. 1500 ಹೆಣ್ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ನೋಡಿಕೊಳ್ಳುತ್ತಿದ್ದರು. ಇದ್ಯಾವುದನ್ನೂ ಪ್ರಚಾರ ಪಡಿಸದೇ ಬಲಗೈಯಿಂದ ಕೊಟ್ಟಿರೋದು ಎಡಗೈಗೆ ಗೊತ್ತಾಗದಂತೆ ಇದ್ದರು. ಅವರ ಅಕಾಲಿಕ ಮರಣವು ಇಂಥವರನ್ನೆಲ್ಲ ಅನಾಥರನ್ನಾಗಿ ಮಾಡಿತ್ತು.
ಇದೀಗ ಪುನೀತ್ ರಾಜ್‌ಕುಮಾರ್ ಅವರ ಸೇವೆಯನ್ನು ಮುಂದುವರಿಸಲು ಮತ್ತೊಬ್ಬ ಹೃದಯವಂತ ನಟ ಮುಂದೆ ಬಂದಿದ್ದಾರೆ. ತಮಿಳು ನಟ ವಿಶಾಲ್ ಇಂಥ ಹೃದಯವಂತ ನಟ.
‘ಸಹೋದರ ಪುನೀತ್‌ರಾಜ್‌ಕುಮಾರ್ ಅವರು ನೋಡಿಕೊಳ್ಳುತ್ತಿದ್ದ 1500 ಹೆಣ್ಣುಮಕ್ಕಳ ಖರ್ಚನ್ನು ಇನ್ನು ಮುಂದೆ ನಾನು ನೋಡಿಕೊಳ್ಳುತ್ತೇನೆ’ ಎಂದು ವಿಶಾಲ್ ಟ್ವೀಟ್ ಮಾಡಿದ್ದಾರೆ. ಪುನೀತ್‌ರನ್ನು ಕಳೆದುಕೊಂಡ ದುಃಖದ ನಡುವೆ ಇವೆಲ್ಲ ಹೃದಯಕ್ಕೆ ತಟ್ಟುವ ವಿಚಾರಗಳಾಗಿವೆ.