Saturday, December 14, 2024
Homeಸುದ್ದಿರಾಜ್ಯಹಾನಗಲ್‌ನಲ್ಲಿ ‘ಕೈ’ ಹಿಡಿದ ಮತದಾರ, ಸಿಂದಗಿಯಲ್ಲಿ ಅರಳಿದ ‘ಕಮಲ’

ಹಾನಗಲ್‌ನಲ್ಲಿ ‘ಕೈ’ ಹಿಡಿದ ಮತದಾರ, ಸಿಂದಗಿಯಲ್ಲಿ ಅರಳಿದ ‘ಕಮಲ’

ಬೆಂಗಳೂರು: ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಬಿಜೆಪಿ ಮುಖಭಂಗ ಅನುಭವಿಸಿದರೆ, ಜೆಡಿಎಸ್‌ ಠೇವಣಿ ಕಳೆದುಕೊಂಡಿದೆ.

ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು 87,490 ಮತಗಳನ್ನು ಪಡೆದು, ತಮ್ಮ ಸಮೀಪ ಸ್ಪರ್ಧಿ ಬಿಜೆಪಿಯ ಶಿವರಾಜ ಸಜ್ಜನರ ಅವರನ್ನು 7,373 ಮತಗಳ ಅಂತರದಿಂದ ಸೋಲಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ನಿಯಾಜ್‌ ಶೇಖ್‌ ಮತ್ತು ಕೆಆರ್‌ಎಸ್‌ ಪಕ್ಷದ ಉಡಚಪ್ಪ ಉದ್ದನಕಾಲ ಅವರು ನಾಲ್ಕಂಕಿ ಮುಟ್ಟುವಲ್ಲೂ ವಿಫಲರಾದರು.

ಕೊರೊನಾ ಸಂಕಷ್ಟದಲ್ಲಿ ಸಹಾಯಹಸ್ತ ಚಾಚಿ ‘ಆಪತ್ಬಾಂಧವ’ ಎನಿಸಿದ್ದ ಶ್ರೀನಿವಾಸ ಮಾನೆ ಅವರ ‘ಕೈ’ಗೆ ಮತದಾರರು ಗೆಲುವಿನ ಹೂ ನೀಡಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ 6,514 ಮತಗಳ ಅಂತರದಿಂದ ಸಿ.ಎಂ. ಉದಾಸಿ ವಿರುದ್ಧ ಸೋತಿದ್ದ ಮಾನೆ ಅವರು, ಈ ಬಾರಿ ಕ್ಷೇತ್ರವನ್ನು ‘ಕೈ’ ವಶ ಮಾಡಿಕೊಂಡಿದ್ದಾರೆ.

ಹಾನಗಲ್‌ ಕ್ಷೇತ್ರದ 2,04,481 ಮತದಾರರ ಪೈಕಿ, 1,71,264 ಮಂದಿ ಮತ ಚಲಾಯಿಸಿದ್ದರು. ಅಂದರೆ ಶೇ 83.76 ದಾಖಲೆಯ ಮತದಾನವಾಗಿತ್ತು. ಆರಂಭಿಕ ಸುತ್ತಿನಿಂದ 19ನೇ ಸುತ್ತಿನವರೆಗೂ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡ ಶ್ರೀನಿವಾಸ ಮಾನೆ ಅವರು ಅಂತಿಮವಾಗಿ ಗೆಲುವಿನ ಕಹಳೆ ಊದಿದರು.

ಸಿಂದಗಿಯಲ್ಲಿ ಜಾತಿ ಸಮೀಕರಣ: ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31,088 ಮತಗಳ ಭಾರೀ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಸಿಂದಗಿ ಕ್ಷೇತ್ರಕ್ಕೆ ಇದುವರೆಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳ ಸೋಲು– ಗೆಲುವು ಅಂತರ ಕೇವಲ ಏಳೆಂಟು ಸಾವಿರಕ್ಕೆ ಸೀಮಿತವಾಗಿತ್ತು. ಸಿಂದಗಿ ಕ್ಷೇತ್ರದ ಚುನಾವಣೆಯಲ್ಲಿ ಮೂರನೇ ಬಾರಿ ಶಾಸಕರಾದ ಏಕೈಕ ವ್ಯಕ್ತಿ ಭೂಸನೂರ ಆಗಿದ್ದಾರೆ.

ಇಲ್ಲಿಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಿಂದಗಿ ಪಟ್ಟಣದ ಜವಾಬ್ದಾರಿಯನ್ನು ನಿರ್ವಹಿಸಿದರು. ಕ್ಷೇತ್ರದಲ್ಲಿ ಜಾತಿ ಸಮೀಕರಣ ಮತ್ತು ಬಿಜೆಪಿ ಸ್ಥಳೀಯ ಹಾಗೂ ಸಚಿವರೊಂದಿಗೆ ಕಾರ್ಯ ನಿರ್ವಹಿಸಿದರು. ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಸಿ.ಸಿ.ಪಾಟೀಲ, ಶಶಿಕಲಾ ಜೊಲ್ಲೆ ಅವರಿಗೆ ಸಿಂದಗಿ ವಿಧಾನಸಭಾ ವ್ಯಾಪ್ತಿಯಲ್ಲಿರುವ ಏಳು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಉಸ್ತುವಾರಿಯನ್ನು ವಹಿಸಿ, ಒಂದು ತಿಂಗಳು ಕ್ಷೇತ್ರದ ಹಳ್ಳಿ, ಹಳ್ಳಿಯನ್ನು ಸುತ್ತಿ ಎಲ್ಲ ಸಮುದಾಯದ ಮುಖಂಡರು, ಮತದಾರರ ಬೇಕು, ಬೇಡಗಳನ್ನು ಆಲಿಸಿ, ಬೇಡಿಕೆ ಈಡೇರಿಸಿದರು.

ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿರುವ ತಳವಾರ ಸಮುದಾಯಕ್ಕೆ ಎಸ್.ಟಿ.ಮೀಸಲಾತಿ ನೀಡುವುದಾಗಿ ಹೇಳಿ ಆ ಸಮುದಾಯದ ಮತಗಳನ್ನು ಸೆಳೆದು ಗೆಲುವನ್ನು ಸುಲಭವಾಗಿಸಿದರು.

2018ರಲ್ಲಿ ಸಿಂದಗಿಯಲ್ಲಿ ಜೆಡಿಎಸ್ ವಿಜಯ ಪತಾಕೆ ಹಾರಿಸಿತ್ತು. ಈಗ ಕ್ಷೇತ್ರವನ್ನು ಕಳೆದುಕೊ‌ಂಡಿದೆ. ಜೆಡಿಎಸ್‌ ಎರಡು ಭಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೂ ಎಂ.ಸಿ ಮನಗೂಳಿ ಅವರ ವರ್ಚಸ್ಸಿನಿಂದ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ.

ಮಾಜಿ ಶಾಸಕ ರವಿಕಾಂತ ಪಾಟೀಲ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಗೊಲ್ಲಾಳಪ್ಪ ಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗುರುರಾಜಗೌಡ ಪಾಟೀಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದರೂ, ರಾಜಕೀಯದ ಗಂಧಗಾಳಿ ಗೊತ್ತಿಲ್ಲದ ನಾಜಿಯಾ ಅಂಗಡಿ ಅವರನ್ನು ಕಣಕ್ಕಿಳಿಸಿ ಆರಂಭದಲ್ಲೇ ಎಡವಿದರು.

‘ಜೆಡಿಎಸ್‌ಗೆ ಈ ಕ್ಷೇತ್ರದಲ್ಲಿ ಗೆಲ್ಲುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ ಸೋಲಿಸಬೇಕು ಎಂಬುದೇ ಒಂದಂಶದ ಕಾರ್ಯಕ್ರಮವಾಗಿತ್ತು’ ಎಂಬ ಕಾಂಗ್ರೆಸ್‌ ಮುಖಂಡರ ಮಾತಿಗೆ ಮುಸ್ಲಿಂ ಮತದಾರರು ಓಗೊಟ್ಟ ಪರಿಣಾಮ ಜೆಡಿಎಸ್‌ ಹೀನಾಯ ಸೋಲು ಅನುಭವಿಸಬೇಕಾಯಿತು.