ಮೈಸೂರು: ಮೈಸೂರಿನಲ್ಲಿ ಮತ್ಸ್ಯಪ್ರಿಯರನ್ನು ಕಿಯೊಸ್ಕ್‌ಗಳು ಸೆಳೆಯುತ್ತಿವೆ. ಕೆರೆ ಮೀನುಗಳ ಜತೆಗೆ, ಸಮುದ್ರದ ಮೀನು ಮಾರಾಟ ಮಾಡುವ ಮಳಿಗೆಗಳು ವಿವಿಧ ಬಗೆಯ ಮತ್ಸ್ಯಗಳನ್ನು ಪೂರೈಸುತ್ತಿವೆ.
ಆರೋಗ್ಯ ವರ್ಧಕ: ಸಮುದ್ರದಲ್ಲಿ ದೊರೆಯುವ ಬೂತಾಯಿ (ಮತ್ತಿ) ಮೀನಿನಲ್ಲಿ ‘ಒಮೆಗಾ-3’ ಫ್ಯಾಟ್ ಆ್ಯಸಿಡ್ ಇದೆ. ಇದು ಹೃದ್ರೋಗ ನಿವಾರಣೆಗೆ ಸಹಕಾರಿ. ಅಲ್ಲದೆ, ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಬಂಗುಡೆ ಮೀನು ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಸ್ನಾಯು ಸೆಳೆತವನ್ನು ದೂರ ಮಾಡುತ್ತದೆ.
ಪ್ರಾನ್ಸ್ ಅಥವಾ ಸಿಗಡಿಯಲ್ಲಿರುವ ಸೆಲೆನಿಯಂ ಕ್ಯಾನ್ಸರ್ ಕಾರಕಗಳ ವಿರುದ್ಧ ಹೋರಾಡುತ್ತದೆ. ಇದರಲ್ಲಿ ವಿಟಮಿನ್ ‘ಇ’ ಅತ್ಯಧಿಕವಾಗಿರುವುದರಿಂದ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ಇರುವವರಿಗೆ ಬಿಳಿ ಪಾಂಪ್ರೆಟ್ ಮೀನು ಅನುಕೂಲಕರವಾದುದು ಎಂದು ವಿವಿಧ ಅಧ್ಯಯನಗಳು ಸಾಬೀತುಪಡಿಸಿವೆ.
ಮಕ್ಕಳಿಗೆ ಮಾಂಸಾಹಾರವನ್ನು ಕೊಡುವ ವಿಷಯಕ್ಕೆ ಬಂದಾಗ ಬಹಳಷ್ಟು ಪೋಷಕರು ಗೊಂದಲಕ್ಕೊಳಗಾಗುತ್ತಾರೆ. ಪುಟ್ಟ ಮಕ್ಕಳಿಗೆ ಏನು ಕೊಡಬೇಕು? ಅವರಿಗೆ ಮೀನು ತಿನ್ನಿಸಿದರೆ ಉತ್ತಮವೇ ಎಂದು ಯೋಚನೆ ಮಾಡುತ್ತಾರೆ. ಬೆಳೆಯುವ ಮಕ್ಕಳಿಗೆ ಮೀನು ಒಂದು ಪರಿಪೂರ್ಣ ಆಹಾರವಾಗಿದೆ. ಇದರಲ್ಲಿ ಪ್ರೋಟಿನ್ ಅತ್ಯಧಿಕವಾಗಿದ್ದು, ವಿಟಮಿನ್ ಮತ್ತು ಖನಿಜಾಂಶಗಳ ಪ್ರಮಾಣವೂ ಅಧಿಕವಾಗಿದೆ. ಮಿದುಳಿನ ಅಂಗಾಂಶಗಳು ಬೆಳೆಯಲು ಸಹಕಾರಿಯಾಗಿದ್ದು, ಕಣ್ಣಿನ ರೆಟಿನಾದ ಆರೋಗ್ಯಕ್ಕೂ ಅನುಕೂಲ. ಈ ಮೂಲಕ ಅದು ದೃಷ್ಟಿಯನ್ನೂ ಚುರುಕುಗೊಳಿಸುತ್ತದೆ. ಇದಲ್ಲದೆ ಮೀನಿನ ಸೇವನೆಯಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ ಎನ್ನುತ್ತಾರೆ ವೈದ್ಯ ಕೆ.ವಿ.ಮೂರ್ತಿ.
ಸಮುದ್ರದ ಮೀನು ಉತ್ತಮ: ಸಮುದ್ರದ ಮೀನು ಆರೋಗ್ಯದ ದೃಷ್ಟಿಯಿಂದ ಬಲು ಉತ್ತಮ ಎನ್ನುವುದು ಹಲವರ ಅಭಿಪ್ರಾಯ. ಎಲ್ಲ ಕಡೆಯೂ ಸಮುದ್ರದ ಮೀನು ಸಿಗುವುದು ಕಷ್ಟ. ಅದಕ್ಕಾಗಿ ಸ್ಥಳೀಯವಾಗಿ ಸಿಗುವ ಕೆರೆಯ ಮೀನುಗಳನ್ನೇ ಜನ ಖರೀದಿಸುತ್ತಾರೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ಮಳಿಗೆಯ ಇಮ್ತಿಯಾಜ್.
ಕೆಆರ್‌ಎಸ್ ಸೇರಿದಂತೆ ಮೈಸೂರಿನ ಸುತ್ತಮುತ್ತಲ ಪ್ರದೇಶಗಳಿಂದ ಮೈಸೂರು ಮಾರುಕಟ್ಟೆಗೆ ಕೆರೆ ಮೀನು ಪೂರೈಕೆಯಾಗುತ್ತದೆ. ಉಳಿದಂತೆ ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಮೀನು ಮೈಸೂರು ಮಾರುಕಟ್ಟೆ ಪ್ರವೇಶಿಸುತ್ತದೆ.