ಹುಬ್ಬಳ್ಳಿ: ಉತ್ತರ ಕರ್ನಾಟಕದ ಮೊದಲ ಕಾರ್ಗೊ ಸೇವೆಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬುಧವಾರ ಚಾಲನೆ ದೊರಕಿದೆ. ಇಂಡಿಗೊ ಏರ್ಲೈನ್ಸ್ ಕಾರ್ಯಾರಂಭಿಸಿದೆ.
ವಿಮಾನ ನಿಲ್ದಾಣದ ಹಳೇ ಟರ್ಮಿನಲ್ನಲ್ಲಿ ಅಂದಾಜು ₹45 ಲಕ್ಷ ವೆಚ್ಚದಲ್ಲಿ ಈ ವಿಭಾಗ ನಿರ್ಮಾಣಗೊಂಡಿದೆ. 1,000 ಚದರ ಮೀಟರ್ ಅಳತೆ ಇರುವ ಕಾರ್ಗೊ ಟರ್ಮಿನಲ್ ಒಂದೇ ಬಾರಿಗೆ 100 ಮೆಟ್ರಿಕ್ ಟನ್ ಸಾಮಗ್ರಿ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.
‘ಹುಬ್ಬಳ್ಳಿ ಕಾರ್ಗೊ ಸೌಲಭ್ಯ ಹೊಂದಿರುವ ಉತ್ತರ ಕರ್ನಾಟಕದ ಮೊದಲ ವಿಮಾನ ನಿಲ್ದಾಣ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ವೇಗವಾಗಿ ಸರಕು ಸಾಗಣೆ ಮತ್ತು ಇಲ್ಲಿನ ಉದ್ಯಮಿಗಳ ಪ್ರಗತಿಯ ವೇಗ ಹೆಚ್ಚಾಗಲು ಈ ಸೌಲಭ್ಯ ನೆರವಾಗಲಿದೆ’ ಎಂದು ಇಲ್ಲಿನ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕ್ರೆ ತಿಳಿಸಿದರು.
ಕಳೆದ ತಿಂಗಳು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಹಾಗೂ ಎಎಐ ಕಾರ್ಗೊ ಲಾಜಿಸ್ಟಿಕ್ ಅಂಡ್ ಅಲೈಡ್ ಸರ್ವಿಸಸ್ ಕಂಪನಿ ಲಿಮಿಟೆಡ್ ಸಹಯೋಗದಲ್ಲಿ ಕಾರ್ಗೊ ಸೇವೆ ಆರಂಭಕ್ಕೆ ನಾಗರಿಕ ವಿಮಾನಯಾನ ಭದ್ರತೆ ಬ್ಯುರೊದಿಂದ (ಬಿಸಿಎಎಸ್) ಹಸಿರು ನಿಶಾನೆ ಸಿಕ್ಕಿತ್ತು.