Saturday, December 14, 2024
Homeಕ್ರೀಡೆಕಬಡ್ಡಿಡಿಸೆಂಬರ್‌ನಲ್ಲಿ ಹುಚ್ಚೆಬ್ಬಿಸಲಿರುವ ಪ್ರೊಕಬಡ್ಡಿ

ಡಿಸೆಂಬರ್‌ನಲ್ಲಿ ಹುಚ್ಚೆಬ್ಬಿಸಲಿರುವ ಪ್ರೊಕಬಡ್ಡಿ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) ಎಂಟನೇ ಆವೃತ್ತಿಯ ಟೂರ್ನಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಡಿಸೆಂಬರ್‌ 22ರಿಂದ ಪಂದ್ಯಗಳು ನಡೆಯಲಿದ್ದು, ಕೋವಿಡ್‌ ಪಿಡುಗಿನ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಿಲ್ಲ ಎಂದು ಲೀಗ್‌ನ ಆಯೋಜಕರು ತಿಳಿಸಿದ್ದಾರೆ

ಟೂರ್ನಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಆಗಸ್ಟ್‌ 29ರಿಂದ 31ರವರೆಗೆ ಮುಂಬೈನಲ್ಲಿ ನಡೆದಿತ್ತು. ಆಟಗಾರರು ಮತ್ತು ಎಲ್ಲಾ ಭಾಗೀದಾರರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಈ ವರ್ಷ ಲೀಗ್ ಅನ್ನು ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಮಾತ್ರ ಆಯೋಜಿಸಲಾಗುತ್ತದೆ‘ ಎಂದು ಈ ಕ್ರೀಡಾಕೂಟ ಆಯೋಜಕ ಸಂಸ್ಥೆ ಮಶಾಲ್ ಸ್ಪೋರ್ಟ್ಸ್ ತಿಳಿಸಿದೆ.
‘ಮಹತ್ವದ ಟೂರ್ನಿಗಳನ್ನು ಆಯೋಜಿಸಲು ಬೇಕಾದ ಎಲ್ಲ ಸೌಲಭ್ಯಗಳು, ಸುರಕ್ಷಾ ವ್ಯವಸ್ಥೆಗಳು ಬೆಂಗಳೂರಿನಲ್ಲಿವೆ. ಪಿಕೆಎಲ್ ಆಯೋಜಿಸಲು ನಾವು ಕಾತರರಾಗಿದ್ದೇವೆ‘ ಎಂದು ಮಶಾಲ್‌ ಸ್ಪೋರ್ಟ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಪಮ್ ಗೋಸ್ವಾಮಿ ತಿಳಿಸಿದ್ದಾರೆ.

‘ಕಬಡ್ಡಿ ಭಾರತದ ದೇಶೀಯ ಕ್ರೀಡೆಯಾಗಿದೆ. ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿದೆ. ನಮ್ಮ ರಾಜ್ಯದಲ್ಲಿ ಮುಂಬರುವ ಪ್ರೊ ಕಬಡ್ಡಿ ಆವೃತ್ತಿಯ ಆಯೋಜನೆಯನ್ನು ನಾವು ಸ್ವಾಗತಿಸುತ್ತೇವೆ‘ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸರ್ಕಾರದ ಕೋವಿಡ್‌ ತಡೆ ನಿಯಮಾವಳಿಗಳು ಅನುಸರಿಸಲು ಲೀಗ್ ಆಯೋಜಕರು, ಮಾರ್ಗಸೂಚಿಗಳನ್ನು ರಚಿಸಲಿದ್ದಾರೆ. ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳ ಜಾರಿ ಮತ್ತು ಬಯೋಬಬಲ್ ರಚಿಸಲು ವಿಶೇಷ ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.