Saturday, December 14, 2024
Homeಸಮಾಚಾರ ನೋಟಸಂಪಾದಕೀಯನಿಮ್ಮೆಲ್ಲರ ಪ್ರೋತ್ಸಾಹ ಲೋಕಸಮಾಚಾರಡಾಟ್‌ಕಾಮ್‌ಗೆ ಇರಲಿ

ನಿಮ್ಮೆಲ್ಲರ ಪ್ರೋತ್ಸಾಹ ಲೋಕಸಮಾಚಾರಡಾಟ್‌ಕಾಮ್‌ಗೆ ಇರಲಿ

ವಿಜ್ಞಾನ ಮತ್ತು ತಂತ್ರಜ್ಞಾನದ ಅಪರಿಮಿತ ಬೆಳವಣಿಗೆಯಿಂದ ಎಲ್ಲ ಕ್ಷೇತ್ರಗಳಲ್ಲಿ ವಿಪರೀತ ಬದಲಾವಣೆಗಳಾಗುತ್ತಿವೆ. ಮಾಧ್ಯಮಲೋಕ ಕೂಡ ಇದಕ್ಕೆ ಹೊರತಾಗಿಲ್ಲ. ಕೈಯಲ್ಲಿರುವ ಮೊಬೈಲ್‌ನಲ್ಲಿಯೇ ಎಲ್ಲವೂ ಜಗತ್ತಿನ ಮೂಲೆ ಮೂಲೆಯ ಸುದ್ದಿಗಳು ಸಿಗುತ್ತಿವೆ. ಅನಿವಾರ್ಯವಾಗಿ ರೆಡಿಯೊ, ಟಿ.ವಿ. ಚಾನೆಲ್‌, ಪತ್ರಿಕೆಗಳು ಕೂಡಾ ಆನ್‌ಲೈನ್‌ನ ಮೊರೆ ಹೋಗಿವೆ. ರೆಡಿಯೊ ವಾರ್ತೆ ತರಹ ಈಗ ಪಾಡ್‌ಕಾಸ್ಟ್‌ಗಳು ಬರುತ್ತಿವೆ. ಟಿ.ವಿ. ಚಾನೆಲ್‌ಗಳು ಸುದ್ದಿಗಳನ್ನು ನೀಡುವುದರ ಜತೆಗೆ ಆಸಕ್ತಿಕರ ವರದಿಗಳನ್ನು ತಮ್ಮದೇ ಚಾನಲ್‌ನ ಹೆಸರಲ್ಲಿ ವೆಬ್‌ಸೈಟ್‌ಗಳ ಮೂಲಕ ನೀಡುತ್ತಿವೆ. ಜತೆಗೆ ಚಾನಲ್‌ಗಳೂ ಈ ಟ್ಯೂಬ್‌ ಮೂಲಕ ಸಿಗುವಂತೆ ಮಾಡಿವೆ. ಇನ್ನು ಪತ್ರಿಕೆಗಳೂ ಇದರಿಂದ ದೂರ ಉಳಿದಿಲ್ಲ. ರಾಜ್ಯಮಟ್ಟದ ಬಹುತೇಕ ಎಲ್ಲ ಪತ್ರಿಕೆಗಳು ವೆಬ್‌ಸೈಟ್‌ಗಳನ್ನು ಹೊಂದಿವೆ. ಹಲವು ಬಾರಿ ಪತ್ರಿಕೆಯಲ್ಲಿ ಪ್ರಕಟವಾಗುವ ಮೊದಲೇ ಸುದ್ದಿಗಳನ್ನು ವೆಬ್‌ಸೈಟ್‌ಗಳ ಮೂಲಕ ನೀಡುತ್ತಿರುತ್ತಿವೆ. ಇದರ ನಡುವೆ ನೂರಾರು ಮಂದಿ ಸ್ವಂತ ವೆಬ್‌ಸೈಟ್‌ ಮಾಡಿಕೊಂಡು ಬಂದಿದ್ದಾರೆ. ಇವು ಸಾಲದು ಎಂಬಂತೆ ನ್ಯೂಸ್‌ ಆ್ಯಪ್‌ಗಳು ಬಂದಿವೆ.

ಇಷ್ಟೆಲ್ಲ ಇರುವಾಗ, ಅವು ಗೊತ್ತಿರುವಾಗ ಮತ್ತೊಂದು ವೆಬ್‌ಸೈಟ್‌ ಅಗತ್ಯ ಇದೆಯೇ ಎಂಬ ಪ್ರಶ್ನೆ ಬರಬಹುದು. ಕ್ಷಣ ಕ್ಷಣದ ಸುದ್ದಿಗಳು ಬರುತ್ತವೆ. ಆದರೆ ಎಷ್ಟು ವೆಬ್‌ಸೈಟ್‌ಗಳಲ್ಲಿ ಅದರ ವಿಶ್ಲೇಷಣೆ ಬರುತ್ತದೆ ಎಂದು ನೋಡಿದಾಗ ಇನ್ನೂ ಖಾಲಿ ಸ್ಪೇಷ್‌ ಇದೆ ಎನ್ನುವುದು ಗೋಚರವಾಗುತ್ತದೆ. ಆ ಖಾಲಿ ಸ್ಪೇಷ್‌ ಅನ್ನು ತುಂಬಲು ಸಾಧ್ಯವಾದಷ್ಟು ಪ್ರಯತ್ನ ಮಾಡುವುದೇ ನಮ್ಮ ವೆಬ್‌ಸೈಟ್‌ನ ಗುರಿ.

ಬರೀ ವಿಶ್ಲೇಷಣೆಗಳನ್ನು ಯಾರೂ ಓದುವುದಿಲ್ಲ ಎಂಬ ಸತ್ಯದ ಅರಿವೂ ಇದೆ. ಅದಕ್ಕಾಗಿ ಸುದ್ದಿಗಳಿಗೆ ಆದ್ಯತೆ ನೀಡಿ, ಆಗುಹೋಗುಗಳನ್ನು ವಿಶ್ಲೇಷಣೆ ಮಾಡಲಿದ್ದೇವೆ. ಜತೆಗೆ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸಹಿತ ಎಲ್ಲ ಕ್ಷೇತ್ರಗಳಿಗೂ ಇಲ್ಲಿ ಅವಕಾಶ ನೀಡಬೇಕು ಎಂಬ ಉದ್ದೇಶ ನಮ್ಮದಾಗಿದೆ.

ಬರೀ ವೆಬ್‌ಸೈಟ್‌ಗೆ ಸೀಮಿತವಾಗದೇ ಯೂಟ್ಯೂಬ್‌ ಚಾನೆಲ್‌ ಸಹಿತ ಅವಕಾಶ ಇರುವ ಎಲ್ಲವನ್ನೂ ಬಳಕೆ ಮಾಡಿಕೊಳ್ಳಲಿದ್ದೇವೆ.

lokasamachara.com ಈಗ ಪುಟ್ಟ ಹೆಜ್ಜೆ ಇಡಲು ಆರಂಭಿಸಿದೆ. ನೀವು ನೋಡುವ ಮೂಲಕ, ಓದುವ ಮೂಲಕ ಪ್ರೋತ್ಸಾಹ ನೀಡಿದರೆ ಈ ಪುಟ್ಟ ಹೆಜ್ಜೆಗಳೇ ಮುಂದೆ ಮಾಧ್ಯಮಲೋಕದ ಹೆಗ್ಗುರುತು ಆಗಲಿದೆ. ನಿಮ್ಮ ಸಹಕಾರ ಎಂದಿಗೂ ಇರಲಿ.

ಪ್ರಧಾನ ಸಂಪಾದಕರು