ಬೆಂಗಳೂರು: ನಗರ ಸಶಸ್ತ್ರ ಪಡೆಯ (ಸಿಎಆರ್) ಪಶ್ಚಿಮ ವಿಭಾಗದ ಹೆಡ್ ಕಾನ್ಸ್ಟೆಬಲ್ ಕುಮಾರ್ (38) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಬಾಸಿಪಾಳ್ಯ ನಿವಾಸಿ ಕುಮಾರ್, ಉಳ್ಳಾಲದಲ್ಲಿರುವ ಸಿಎಆರ್ ಕಚೇರಿ ಕೊಠಡಿಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.
ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದ ಕುಮಾರ್, ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಮಾರ್ ಬರೆದಿದ್ದಾರೆ ಎನ್ನಲಾದ ಮರಣಪತ್ರ ಸ್ಥಳದಲ್ಲಿ ಸಿಕ್ಕಿದೆ ಎಂದು ತಿಳಿಸಿದರು.
ಜೀವನ ನಿರ್ವಹಣೆ ಹಾಗೂ ಇತರೆ ಕೆಲಸಕ್ಕಾಗಿ ಸಾಲ ಮಾಡಿಕೊಂಡಿದ್ದ ಕುಮಾರ್, ಅದನ್ನು ವಾಪಸು ತೀರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು ಎಂಬುದಾಗಿ ಗೊತ್ತಾಗಿದೆ. ಸಾಲದ ವಿಷಯವನ್ನೇ ಅವರು ಮರಣಪತ್ರದಲ್ಲಿ ಬರೆದಿದ್ದಾರೆ. ಆತ್ಮಹತ್ಯೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದರು.