ಬೆಂಗಳೂರು: ಮಾದಕ ವಸ್ತು ಸೇವಿಸಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಬಂಧಿಸಲಾಗಿರುವ ವಿಷ್ಣು ಭಟ್ ಎಂಬಾತನಿಗೆ, ಆಫ್ರಿಕಾ ಪ್ರಜೆಯೊಬ್ಬ ಡ್ರಗ್ಸ್ ಪೂರೈಸುತ್ತಿದ್ದ ಸಂಗತಿ ತನಿಖೆಯಿಂದ ಹೊರಬಿದ್ದಿದೆ.
ಜೀವನ್ಭಿಮಾ ನಗರ ಠಾಣೆ ವ್ಯಾಪ್ತಿಯ ಹೋಟೆಲೊಂದರಲ್ಲಿ ಇತ್ತೀಚೆಗೆ ನಡೆದಿದ್ದ ಘಟನೆ ಸಂಬಂಧ ವ್ಯವಸ್ಥಾಪಕ ದೂರು ನೀಡಿದ್ದರು. ಆರೋಪಿಗಳಾದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಹಾಗೂ ಚಿನ್ನಾಭರಣ ಉದ್ಯಮಿ ಮಗ ವಿಷ್ಣು ಭಟ್ನನ್ನು ಪೊಲೀಸರು ಬಂಧಿಸಿದ್ದರು. ಶ್ರೀಕಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ವಿಷ್ಣುನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು.
‘ವಿಷ್ಣುನನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಲಾಗುತ್ತಿದೆ. ಆಫ್ರಿಕಾ ಪ್ರಜೆಯೊಬ್ಬನ ಜೊತೆ ಆತ ಒಡನಾಟವಿಟ್ಟುಕೊಂಡಿದ್ದ. ವಿಷ್ಣುವಿಗೆ ಬೇಕಿದ್ದ ಮಾದಕ ವಸ್ತುವನ್ನು ಆ ಪ್ರಜೆ ತಂದುಕೊಡುತ್ತಿದ್ದ. ತಲೆಮರೆಸಿಕೊಂಡಿರುವ ಆಫ್ರಿಕಾ ಪ್ರಜೆಯನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಪಾರ್ಟಿ ಮಾಡಲು ಬಂದಿದ್ದ: ‘ಸಂಬಂಧಿಯೊಬ್ಬರ ಮೂಲಕ ವಿಷ್ಣುನಿಗೆ ಶ್ರೀಕೃಷ್ಣನ ಪರಿಚಯವಾಗಿತ್ತು. ಅವರಿಬ್ಬರು ಆಗಾಗ ಒಂದೆಡೆ ಸೇರಿ ಪಾರ್ಟಿ ಮಾಡುತ್ತಿದ್ದರು. ಡ್ರಗ್ಸ್ ಸಹ ಸೇವಿಸುತ್ತಿದ್ದರು’ ಎಂದೂ ಅಧಿಕಾರಿ ತಿಳಿಸಿದರು.
‘ಹೋಟೆಲ್ ಕೊಠಡಿಯಲ್ಲಿ ಶ್ರೀಕೃಷ್ಣ ಮಾತ್ರ ವಾಸವಿದ್ದ. ಆತನೇ ಬಾಡಿಗೆ ಸಹ ಪಾವತಿಸುತ್ತಿದ್ದ. ಆತನ ಜೊತೆ ಪಾರ್ಟಿ ಮಾಡಲೆಂದು ವಿಷ್ಣು, ಹೋಟೆಲ್ಗೆ ಬಂದಿದ್ದ. ಪಾನಮತ್ತನಾಗಿ ಬಂದಿದ್ದ ವಿಷ್ಣುನನ್ನು ತಡೆದಿದ್ದ ಸಿಬ್ಬಂದಿ, ಹೋಟೆಲ್ ಒಳಗೆ ಬಿಡುವುದಿಲ್ಲವೆಂದು ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ. ಪ್ರಶ್ನಿಸಿದ್ದ ವ್ಯವಸ್ಥಾಪಕನಿಗೂ ಹೊಡೆದಿದ್ದ.’
‘ಗಲಾಟೆ ಕೇಳಿ ಕೊಠಡಿಯಿಂದ ಹೊರಬಂದಿದ್ದ ಶ್ರೀಕೃಷ್ಣ, ವಿಷ್ಣು ಪರವಾಗಿ ಮಾತನಾಡಿದ್ದ. ಸಿಬ್ಬಂದಿ ಹಾಗೂ ವ್ಯವಸ್ಥಾಪಕನ ಮೇಲೂ ಹಲ್ಲೆಗೆ ಯತ್ನಿಸಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಅಧಿಕಾರಿ ವಿವರಿಸಿದರು.
ಶ್ರೀಕೃಷ್ಣನ ಲ್ಯಾಪ್ಟಾಪ್ ಜಪ್ತಿ: ‘ಹೋಟೆಲ್ ಕೊಠಡಿಯಲ್ಲಿ ಶ್ರೀಕೃಷ್ಣ ಬಳಸುತ್ತಿದ್ದ ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ. ಹೆಚ್ಚಿನ ಪರಿಶೀಲನೆಗಾಗಿ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.