ಗಂಗಾವತಿ: ‘ಬಿಟ್ ಕಾಯಿನ್ ಹಗರಣದ ಕುರಿತು ಕಾಂಗ್ರೆಸ್ ನಾಯಕರ ಬಿಜೆಪಿ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಅವರ ಬಳಿ ದಾಖಲೆಗಳಿದ್ದರೆ, ಸಾಬೀತು ಪಡಿಸಲಿ‘ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಈಶ್ವರಪ್ಪ ಸವಾಲು ಹಾಕಿದರು.
ತಾಲ್ಲೂಕಿನ ಆನೆಗೊಂದಿ ಸಮೀಪ ಅಂಜನಾದ್ರಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಟ್ ಕಾಯಿನ್‘ ಹಗರಣ ಮುಖ್ಯಮಂತ್ರಿ ಬೊಮ್ಮಾಯಿ ಸ್ಥಾನಕ್ಕೆ ಕುತ್ತು ತರಲಿದೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ನಿಜವಾಗಿ ಕುತ್ತು ಬರುವುದಾದಾರೆ, ಸತ್ಯಾಂಶ ಬಹಿರಂಗಪಡಿಸಲಿ. ರಾಜ್ಯದ ಜನರು ಸತ್ಯಾಂಶ ತಿಳಿಯಲಿ’ ಎಂದರು.
‘ಕಾಂಗ್ರೆಸ್ನವರು ಬರೀ ಸುಳ್ಳು ಹೇಳುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ. ಸುಮ್ಮನೆ ದಾಖಲೆ ಇದೆ ಎಂಬುದನ್ನು ಹೇಳುವುದು ಬಿಟ್ಟು ಬಿಜೆಪಿಯ ಒಬ್ಬ ನಾಯಕನ ಹೆಸರನ್ನು ಬಹಿರಂಗಪಡಿಸಲಿ, ನಾನು ಶಹಬ್ಬಾಸ್ ಎನ್ನುತ್ತೇನೆ‘ ಎಂದರು.
‘ಬಿಟ್ ಕಾಯಿನ್ ಹಗರಣ ವಿಚಾರದಲ್ಲಿ ದಾಖಲೆಯಿದೆ ಎಂದು ಹೇಳಿಕೊಂಡು ಕಾಂಗ್ರೆಸ್ ಪಕ್ಷದವರು ಅಧಿಕಾರಿಗಳನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಬಳಿ ದಾಖಲೆಯಿದ್ದರೆ, ಬಿಡುಗಡೆ ಮಾಡಲಿ’ ಎಂದರು.