Saturday, December 14, 2024
Homeರಾಜ್ಯಬೆಂಗಳೂರು ವಿಭಾಗಪಟಾಕಿ ವಿವಾದ: ಮಾರಕಾಸ್ತ್ರದಿಂದ ಹಲ್ಲೆ, ಐವರ ಬಂಧನ

ಪಟಾಕಿ ವಿವಾದ: ಮಾರಕಾಸ್ತ್ರದಿಂದ ಹಲ್ಲೆ, ಐವರ ಬಂಧನ

ಬೆಂಗಳೂರು: ಪಟಾಕಿ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ಐವರು ಆರೋಪಿಗಳನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.

‘ಪಟಾಕಿ ಮಾರಾಟ ಮಳಿಗೆಗೆ ನುಗ್ಗಿದ್ದ ಆರೋಪಿಗಳು, ಉಚಿತವಾಗಿ ಪಟಾಕಿ ಕೇಳಿದ್ದರು. ಕೊಡದಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿ ಮಾಲೀಕ ಮಧು ಪೊಲೀಸರಿಗೆ ದೂರು ನೀಡಿದ್ದಾರೆ.

ಗಲಾಟೆ ಸಂಬಂಧ ಪ್ರತ್ಯೇಕ ದೂರು ನೀಡಿರುವ ಗೌತಮ್‌ ಎಂಬುವರು, ‘ಸಾರ್ವಜನಿಕರ ಗುಂಪು ನನ್ನ ಮೇಲೆ ಹಲ್ಲೆ ಮಾಡಿದೆ’ ಎಂದು ಆರೋಪಿಸಿದ್ದಾರೆ. ಎರಡೂ ದೂರಿನಡಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ಉಚಿತ ಪಟಾಕಿ ನೀಡದಿದ್ದಕ್ಕೆ ಗಲಾಟೆ: ‘ಬಸವನಗುಡಿಯಲ್ಲಿರುವ ಮಳಿಗೆ ಮಾಲೀಕ ನೀಡಿದ್ದ ದೂರು ಆಧರಿಸಿ ಆರೋಪಿಗಳಾದ ವಿಕ್ರಮ್, ಅಜಿತ್, ವೀರಮಣಿ, ಅಪ್ಪು ಹಾಗೂ ವಿಜಯ್ ಎಂಬುವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕುಡಿದ ಮತ್ತಿನಲ್ಲಿದ್ದ ಆರೋಪಿಗಳು, ನ. 3ರ ರಾತ್ರಿ ಮಳಿಗೆಗೆ ನುಗ್ಗಿದ್ದರು. ಉಚಿತವಾಗಿ ಪಟಾಕಿ ನೀಡುವಂತೆ ಒತ್ತಾಯಿಸಿದ್ದರು. ಅದಕ್ಕೆ ಮಾಲೀಕ ಒಪ್ಪದಿದ್ದಾಗ ಜಗಳ ತೆಗೆದಿದ್ದರು. ಮಾರಕಾಸ್ತ್ರಗಳಿಂದ ಮಾಲೀಕನ ಮೇಲೆ ಹಲ್ಲೆ ಮಾಡಿದ್ದರೆಂದು ಗೊತ್ತಾಗಿದೆ.’

‘ಗಲಾಟೆ ಕಂಡ ಸ್ಥಳೀಯರು, ಸ್ಥಳಕ್ಕೆ ಬಂದು ವಿಚಾರಿಸಿದ್ದರು. ಅವರ ಮೇಲೆಯೂ ಆರೋಪಿಗಳು ಹರಿಹಾಯ್ದಿದ್ದರು. ಸಿಟ್ಟಾದ ಸಾರ್ವಜನಿಕರು, ಆರೋಪಿಗಳನ್ನು ಹಿಡಿದುಕೊಳ್ಳಲು ಮುಂದಾಗಿದ್ದರು. ಎಲ್ಲರೂ ಓಡಿ ಹೋಗಿದ್ದರು. ಗೌತಮ್ ಮಾತ್ರ ಸಿಕ್ಕಿಬಿದ್ದಿದ್ದರು. ಅವರನ್ನೇ ಸಾರ್ವಜನಿಕರು ಥಳಿಸಿದ್ದರು. ಗಾಯಗೊಂಡಿರುವ ಗೌತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.