Saturday, December 14, 2024
Homeಮೈಸೂರು ವಿಭಾಗಮಂಡ್ಯಮೇಲುಕೋಟೆಯಲ್ಲಿ ವೈಭವದ ರಾಜಮುಡಿ ಉತ್ಸವ

ಮೇಲುಕೋಟೆಯಲ್ಲಿ ವೈಭವದ ರಾಜಮುಡಿ ಉತ್ಸವ

ಮಂಡ್ಯ: ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ಮೈಸೂರು ರಾಜ ಒಡೆಯರ್ ಸಮರ್ಪಿಸಿದ ವಜ್ರಖಚಿತ ರಾಜಮುಡಿ ಕಿರೀಟ ಅಳವಡಿಸಿ ಶುಕ್ರವಾರ ರಾತ್ರಿ ಉತ್ಸವ ನೆರವೇರಿಸಲಾಯಿತು.

ಶ್ರೀದೇವಿ- ಭೂದೇವಿ ಸಮೇತನಾದ ಸ್ವಾಮಿಗೆ ಅಲಂಕಾರಮಾಡಿ ಶಂಖ, ಚಕ್ರ, ಗಧಾ, ಪದ್ಮ, ಶಿರಚಕ್ರ, ಮೈಸೂರು ಲಾಂಛನದ ಗಂಡಭೇರುಂಡ ಪದಕ ಸೇರಿ 14 ಬಗೆಯ ವಜ್ರಖಚಿತ ಆಭರಣಗಳನ್ನು ತೊಡಿಸಿ ಮಹಾ ಮಂಗಳಾರತಿ ಮಾಡಲಾಯಿತು.

ಉತ್ಸವವನ್ನು ದೇವಾಲಯದ ಒಳಭಾಗಕ್ಕೆ ಸೀಮಿತವಾಗಿಸುವಂತೆ ಜಿಲ್ಲಾಧಿಕಾರಿ ಮೊದಲು ಆದೇಶಿಸಿದ್ದರು. ನಂತರ, ಧಾರ್ಮಿಕ ದತ್ತಿ ಆಯುಕ್ತರು ನೀಡಿದ ನಿರ್ದೇಶನದಂತೆ ಪರಿಷ್ಕೃತ ಆದೇಶ ಹೊರಡಿಸಿ ರಾಜಮುಡಿ ಉತ್ಸವವನ್ನು ದೇವಾಲಯದ ಹೊರಪ್ರಾಕಾರದಲ್ಲಿ ದಿವ್ಯಪ್ರಬಂಧ ಪಾರಾಯಣದೊಂದಿಗೆ ನಡೆಸಲಾಯಿತು.

ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ನೇತೃತ್ವದಲ್ಲಿ ಮಂಡ್ಯ ಜಿಲ್ಲಾ ಖಜಾನೆಯಿಂದ ರಾಜಮುಡಿ ತಿರುವಾಭರಣ ಪೆಟ್ಟಿಗೆ ತಂದು ಪರಿಶೀಲಿಸಿ ಸ್ಥಾನಿಕರು, ಅರ್ಚಕ, ಪರಿಚಾರಕ ಕಾವಲುಗಾರರ ವಶಕ್ಕೆ ನೀಡಲಾಯಿತು.

ದೇವಾಲಯದ ಹೊರ ಪ್ರಾಕಾರದಲ್ಲಿ ನಡೆದ ರಾಜಮುಡಿ ಉತ್ಸವದಲ್ಲಿ ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ, ಎಸ್‌ಐ ಗಣೇಶ್, ಭಕ್ತರು ದೇವರ ದರ್ಶನ ಮಾಡಿದರು.

ನ.14ರಂದು ಅಷ್ಟತೀರ್ಥೋತ್ಸವ ನಡೆಯಲಿದ್ದು, ಎಲ್ಲ ಉತ್ಸವಗಳೂ ಸಂಪ್ರದಾಯ ಬದ್ಧವಾಗಿ ಹೊರಭಾಗದಲ್ಲೇ ಬೆಳಗ್ಗೆ 5.30ಕ್ಕೆ ಆರಂಭವಾಗಲಿದೆ. ಬೆಳಿಗ್ಗೆ 7ಕ್ಕೆ ದೇಶಿಕರ ಸನ್ನಿಧಿಗೆ ಸ್ವಾಮಿಯ ಪಾದುಕೆ ಉತ್ಸವ ನಡೆಯಲಿದೆ. ಬೆಳಿಗ್ಗೆ 8ಕ್ಕೆ ರಾಜಮುಡಿ ಕಿರೀಟ ಧಾರಣೆಯೊಂದಿಗೆ ಸ್ವಾಮಿಯ ಉತ್ಸವ ಕಲ್ಯಾಣಿಗೆ ನಡೆದು ಅಲ್ಲಿ ವೇದಮಂತ್ರದೊಂದಿಗೆ ಅಭಿಷೇಕ ನಡೆಯಲಿದೆ.

ಬೆಳಿಗ್ಗೆ 10ರಿಂದ ಅಷ್ಟತೀರ್ಥೋತ್ಸವ ಆರಂಭವಾಗಿ 8ತೀರ್ಥಗಳಲ್ಲಿ ಅಭಿಷೇಕ ನಡೆದ ನಂತರ ಸಂಜೆ 5ಕ್ಕೆ ವೈಕುಂಠಗಂಗೆಯಲ್ಲಿ ಕೊನೆಯ ಅಭಿಷೇಕ ನಡೆಯಲಿದೆ. ಯೋಗಾನರಸಿಂಹಸ್ವಾಮಿಯ ಗಿರಿಪ್ರದಕ್ಷಿಣೆಯೊಂದಿಗೆ ರಾತ್ರಿ 8 ಗಂಟೆಗೆ ಉತ್ಸವ ಮುಕ್ತಾಯವಾಗಲಿದೆ. ಪುತ್ರ ಭಾಗ್ಯ ಅಪೇಕ್ಷಿಸಿ ಹರಕೆಯೊಂದಿಗೆ 8ಗಂಟೆಗೆ ಕಲ್ಯಾಣಿಯಲ್ಲಿ ಭಾಗವಹಿಸಬಹುದು ಎಂದು ದೇವಾಲಯದ ಮೂಲಗಳು ತಿಳಿಸಿದೆ.