Saturday, December 14, 2024
Homeಸುದ್ದಿರಾಜ್ಯಪೇಜಾವರ ಶ್ರೀ ಕೋಳಿ ತಿನ್ನುತ್ತಾರಾ?: ವಿವಾದವೆಬ್ಬಿಸಿದ ಹಂಸಲೇಖ ಹಚ್ಚಿದ ಕಿಡಿ

ಪೇಜಾವರ ಶ್ರೀ ಕೋಳಿ ತಿನ್ನುತ್ತಾರಾ?: ವಿವಾದವೆಬ್ಬಿಸಿದ ಹಂಸಲೇಖ ಹಚ್ಚಿದ ಕಿಡಿ


ಮೈಸೂರು: ಇಲ್ಲಿನ ನೆಲೆ ಹಿನ್ನೆಲೆ ಸಂಸ್ಥೆಯು ನ.12ರಂದು ಆಯೋಜಿಸಿದ್ದ ‘ಮುಳ್ಳೂರು ರಾಜು ಕಾವ್ಯ ಪ್ರಶಸ್ತಿ’ ಮತ್ತು ರಾಜಶೇಖರ ಕೋಟಿ ನುಡಿನಮನ ಕಾರ್ಯಕ್ರಮದಲ್ಲಿ ಹಂಸಲೇಖ ಆಡಿದ ಮಾತುಗಳು ವಿವಾದವಾಗಿ ಮಾರ್ಪಟ್ಟಿವೆ. ಪರ ವಿರೋಧದ ಧ್ರನಿಗಳು ಜೋರಾಗಿವೆ.

‘ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್‌ ಬಂದಿತ್ತು. ನಿಜಾನಾ?!. ದಲಿತರ ಮನೆಗೆ ಹೋಗಿ ಕೂತಿದ್ದರಂತೆ. ಕುಳಿತುಕೊಳ್ಳೊದಕ್ ಆಗುತ್ತಷ್ಟೇ. ಅವರು ಕೋಳಿ ಕೊಟ್ಟರೆ ತಿನ್ನಕ್‌ ಆಗುತ್ತಾ?. ಕೋಳಿ ಬೇಡ ಕುರಿ ರಕ್ತ ಫ್ರೈ ಮಾಡಿಕೊಟ್ರರೆ ತಿಂತಾರಾ?. ಲಿವರ್‌ ತಿಂತಾರಾ? ಆಗಲ್ಲ. ಅಂದರೆ ದಲಿತರ ಮನೆಗೆ ಬಲಿತರು ಹೋಗಿ ಬರುವುದೇನು ದೊಡ್ಡ ವಿಷ್ಯಾ ಅಂತ ನನಗನ್ನಿಸಿತು’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದರು.

‘ಈಗ ಇವರು ಶುರು ಮಾಡಿಕೊಂಡು ಬಿಟ್ಟಿದ್ದಾರೆ. ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿ ದೊಡ್ಡ ಗೀಳಾಯ್ತು. ಅಶ್ವತ್ಥನಾರಾಯಣ ಅವರೂ ಗ್ರಾಮ ವಾಸ್ತವ್ಯ. ಯಾರು ನೋಡಿದರೂ ಗ್ರಾಮ ವಾಸ್ತವ್ಯ! ಈಗ ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಆ ಹೆಣ್ಣಿನ ಜೊತೆ ರಮಿಸ್ತಾನೆ ಅಂದ್ರೆ ಅದರಲ್ಲೇನ್‌ ದೊಡ್ಡ ವಿಷ್ಯ ಇದೆ. ಅವನು ಆ ಸೋಲಿಗರ ಹೆಣ್ಣನ್ನ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ದೇವರ ಗುಡಿಯಲ್ಲಿ ಕೂರಿಸಿ ಅಲ್ಲಿ ಅವಳನ್ನ ರಮಿಸದ್ರೆ ಅದು ಬಿಳಿಗಿರಿಗೊಂದು ಹೆಸರಾಗುತ್ತಿತ್ತು. ಬೆಳಗಿನ ಜಾವಾದಲ್ಲಿ ಸೂರ್ಯ ಇನ್ನು ಹುಟ್ಟಿದನಂತೆ ಬಿಳಿಗಿರಿರಂಗ ಕೆಳಗಿಳಿದು ಬಂದು ಸೋಲಿಗರ ಮನೆಗೆ ಹೋಗಿ ಸಂಸಾರ ಮಾಡಿ ತಿರಗಾ ಹೋಗಿ ಕಲ್ಲಾಗಿಬಿಡುತ್ತಾನಂತೆ. ಅದೊಂದು ನಾಟಕ, ಬೂಟಾಟಿಕೆ’ ಎಂದು ಚುಚ್ಚಿದ್ದರು.

‘ಗಾಂಧಿ ಹೇಳಿದಂತೆ ದಲಿತರ ಮನೆಗೆ ಬಲಿತರು ಬರಬೇಕು. ತಮ್ಮ ಜೊತೆಗೆ ಅವರ ಮನೆಗೆ ಕರೆದುಕೊಂಡು ಹೋಗಬೇಕು. ನಿಮ್ಮನೇಲಲ್ಲ ಊಟ ನಮ್ಮನೇಲಿ ಊಟ, ನಮ್ಮನೆ ಲೋಟ ನೀನು ಮುಟ್ಟು. ನೀ ಕುಡಿದದನ್ನ ನಾವು ತೊಳಿತೋವಿ ಅಂತ ಅವರು ಹೇಳಬೇಕು. ಅದು ನಿಜವಾದ ಕ್ಷಣ. ಈಗ ಭಾರತದಲ್ಲಿ ದೊಡ್ಡ ಬೂಟಾಟಿಕೆ ನಡೀತಾ ಇದೆ. ಅಂಬೇಡ್ಕರ್‌ ಅವರನ್ನ ಎತ್ತರದ ಸ್ಥಾನದಲ್ಲಿ ಕೊಂಡಾಡೊದಕ್ಕೂ ಪರ್ಮಿಷನ್‌ ಕೊಟ್ಟಿದ್ದಾರೆ. ಮಹಾನಾಯಕ ಎಂಬ ಸೀರಿಯಲ್ ಭಾರತದಾದ್ಯಂತ ಕೆಲಸ ಮಾಡುತ್ತಿದೆ. ಸೀರಿಯಲ್‌ನಿಂದ ಪರಿಣಾಮ ಏನಂದ್ರೆ ನನ್ನ ಹೆಂಡತಿ ಎಷ್ಟೊಂದು ಚಾನಲ್‌ಗಳಿದ್ದಾವೆ. ಎಷ್ಟೊಂದು ಸಿರೀಯಲ್‌ಗಳಿದ್ದಾವೆ. ಯಾವ ಸೀರಿಯಲ್‌ ನೋಡದೆ ಒಂದು ಸರಿಗಮಪ, ಮಹಾನಾಯಕ ನೋಡುತ್ತಿದ್ದಾಳೆ. ಅವಳು ಅಂಬೇಡ್ಕರ್ ಅವರನ್ನು. ಅವರೊಂದು ಅವತಾರರೀ. ದೇವರ‍್ರೀ. ನೋಡಿಲ್ವಲ್‌ರೀ, ನಾವ್‌ ಅರ್ಥ ಮಾಡಿಕೊಳ್ಳಲಿಲ್ವಲ್ರೀ ಅಂತ ಮೂರ್ನಾಲ್ಕು ತಿಂಗಳಿಂದ ಅಳೋದು. ಇದೊಂತರ ಅಂಬೇಡ್ಕರ್‌ ಫೋಬಿಯಾ ರೀ ಅವಳದು’ ಎಂದು ವಿವರಿಸಿದ್ದರು.

ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ದೈತ ಬ್ರಾಹ್ಮಣರು ಎದ್ದು ಟೀಕಿಸಲು ಆರಂಭಿಸಿದ್ದಾರೆ. ಅನೇಕ ಶೂದ್ರರೂ ಈ ಟೀಕೆಗೆ ದನಿಗೂಡಿಸಿದ್ದಾರೆ. ಹಂಸಲೇಖ ಹೇಳಿರುವುದು ಸರಿ ಎಂದು ಸಮರ್ಥನೆ ಮಾಡುವವರೂ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ.

ಪೇಜಾವರ ಸ್ವಾಮೀಜಿ ಮಾಂಸ ತಿನ್ನುತ್ತಾರಾ ಎಂದು ಕೇಳುವುದು ತಪ್ಪಾದರೆ, ಮಾಂಸ ತಿನ್ನಬಾರದು ಎಂದು ಪೇಜಾವರ ಸ್ವಾಮೀಜಿ ಹೇಳುತ್ತಿದ್ದುದು ಸರಿಯೇ ಎಂದು ಹಲವರು ಪ್ರಶ್ನಿಸಿದ್ದಾರೆ.

ವಿಶ್ವೇಶ ತೀರ್ಥ ಶ್ರೀಗಳ ವಿರುದ್ಧ ಹಂಸಲೇಖ ಅಪಸ್ವರ ಎತ್ತಿರುವುದು ಸರಿಯಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಆಹಾರ ಪದ್ಧತಿ ಮೂಲಕ ಸಮಾನತೆ ತರಬಹುದು ಎನಿಸಿದರೆ ನಿಮ್ಮ (ಹಂಸಲೇಖ) ಮನೆಗೆ ಮುಸ್ಲಿಂ ಸ್ನೇಹಿತರನ್ನು ಕರೆದು ಹಂದಿ ಮಾಂಸದ ಊಟ ಬಡಿಸಿ. ಆಗ ಏನು ಮಾಡುತ್ತಾರೆ ಎಂಬುದು ನಿಮಗೆ ಗೊತ್ತಾಗಲಿದೆ’ ಎಂದು ಸಂಸದ ಪ್ರತಾಪಸಿಂಹ ವಾಗ್ದಾಳಿ ನಡೆಸಿದ್ದಾರೆ.

ದಲಿತರ ಮನೆಗೆ ಹೋದಾಗ ಅವರ ಆಹಾರ ಸಂಸ್ಕೃತಿ ಪ್ರಕಾರ ಮಾಂಸಾಹಾರ ಸೇವನೆ ಅದು ಬಿಟ್ಟು ನಾಟಕ ಮಾಡಲು ಯಾಕೆ ಹೋಗಬೇಕು ಎಂದು ನವೀನ್‌ ಸೂರಿಂಜೆ, ಹರ್ಷ ಕುಗ್ವೆ, ನಾಗೇಗೌಡ ಕೀಲಾರ, ಸುರಭಿ ಸಹಿತ ನೂರಾರು ಮಂದಿ ಕೇಳಿದ್ದಾರೆ. ದಲಿತ ಸಂಘರ್ಷ ಸಮಿತಿಯ ನಾಯಕರು ಹಂಸಲೇಖ ಅವರ ಮಾತುಗಳನ್ನು ಬೆಂಬಲಿಸಿದ್ದಾರೆ.

ಸಿದ್ದರಾಮಯ್ಯ ಸಹಿತ ಹಲವು ರಾಜಕಾರಣಿಗಳು ಬೆಂಬಲಿಸಿದ್ದರೆ, ಸುರೇಶ್‌ ಕುಮಾರ್‌ ಸಹಿತ ಹಲವರು ಟೀಕಿಸಿದ್ದಾರೆ.

ಮಾಂಸಾಹಾರ ಕನಿಷ್ಠ ಎಂಬ ಕೀಳರಿಮೆಯಿಂದ ಮೊದಲು ಎಲ್ಲರೂ ಹೊರಗೆ ಬರಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಕೊನೆಗೆ ಹಂಸಲೇಖ ಕ್ಷಮೆ ಯಾಚಿಸಿದ್ದಾರೆ. ಒಟ್ಟಿನಲ್ಲಿ ಸಸ್ಯಾಹಾರ ಶ್ರೇಷ್ಠ ಎಂಬ ತಥಾಕಥಿತ ಕಲ್ಪನೆಗೆ, ಜಾತಿ ಮೇಲು ಕೀಳು ಎಂಬ ಮನಸ್ಥಿತಿ ಹೊಂದಿರುವವರಿಗೆ ಹಂಸಲೇಖ ಅವರ ಹೇಳಿಕೆ ಸರಿಯಾಗಿ ಏಟು ನೀಡಿದೆ.