ಕೊಪ್ಪಳ: ಕಳೆದ ಎರಡು ದಿನಗಳಿಂದ ಜಿಲ್ಲೆ ಸೇರಿದಂತೆ ತುಂಗಭದ್ರಾ ನದಿಪಾತ್ರಗಳಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನಡುಗಡ್ಡೆಗಳಿಗೆ ಸಂಪರ್ಕ ಕಡಿತಗೊಂಡು ಜನಜಾನುವಾರುಗಳು ಸಿಲುಕಿವೆ.
ಮಳೆಯಿಂದ ಮುನಿರಾಬಾದಿನ ಜಲಾಶಯ ಭರ್ತಿಯಾಗಿದ್ದು, 10 ಕ್ರೆಸ್ಟ್ ತೆಗೆದು ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತದೆ.ನಡುಗಡ್ಡೆಗಳಲ್ಲಿ ತಾತ್ಕಾಲಿಕ ವಸತಿ ಮಾಡಿಕೊಂಡಿರುವ 10ಕ್ಕೂ ಹೆಚ್ಚು ದನಗಾಹಿಗಳು, 400 ಜಾನುವಾರುಗಳು ಸಿಲುಕಿಕೊಂಡಿವೆ.
ಇದರ ಪರಿಣಾಮ ಶಿವಪುರ, ಮಾರ್ಕೆಂಡೇಯ ನಡುಗಡ್ಡೆಗಳು ಸಂಪರ್ಕ ಕಡಿತಗೊಂಡಿವೆ.
ನಿತ್ಯ ಅಗತ್ಯ ವಸ್ತುಗಳ ಖರೀದಿಗೆ ಶಿವಪುರ, ಅಗಳಕೇರಾಕ್ಕೆ ಬರುತ್ತಿದ್ದ ದನಗಾಹಿಗಳು ಜಲಾವೃತವಾಗಿರುವುದರಿಂದ ಅಲ್ಲಿಯೇ ಉಳಿದುಕೊಂಡಿದ್ದಾರೆ. ಮಳೆ ನಿಂತರೆ ಮತ್ತು ನದಿಯ ನೀರಿನ ಹರಿವು ಕಡಿಮೆಯಾಗಲು ಎರಡು ದಿನಗಳು ಬೇಕಾಗುತ್ತಿವೆ.
ದನಗಾಹಿಗಳ ಕುಟುಂಬದವರು ಪೊಲೀಸರಿಗೆ ಕರೆ ಮಾಡಿ ರಕ್ಷಣೆಗೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಮುನಿರಾಬಾದ್ ಪಿಎಸ್ಐ ಸುಪ್ರೀತ್ ಪಾಟೀಲ್ ದೂರವಾಣಿ ಮೂಲಕ ದನಗಾಹಿಗಳ ಸಂಪರ್ಕದಲ್ಲಿದ್ದು, ನೀರಿನ ಹರಿವು ಶೀಘ್ರ ಕಡಿಮೆಯಾಗಲಿದ್ದು, ಯಾವುದೇ ಆತಂಕವಿಲ್ಲ ಎಂದು ತಿಳಿಸಿದ್ದಾರೆ.