ಬೆಂಗಳೂರು: ರಾಜ್ಯದಲ್ಲಿ ಎಸಿಬಿ ದಾಳಿ ಭಾರೀ ಸದ್ದು ಮಾಡುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳ 15 ಅಧಿಕಾರಿಗಳಿಗೆ ಸಂಬಂಧಿಸಿದ 68 ಕಡೆಗಳಲ್ಲಿ ಎಸಿಬಿ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು 408 ಎಸಿಬಿ ಅಧಿಕಾರಿಗಳು ಅಕ್ರಮ ಸಂಪತ್ತಿನ ಬೆನ್ನ ಹತ್ತಿ ಹೊರಟಿದ್ದಾರೆ. ಕೋಟ್ಯಂತರ ಮೌಲ್ಯದ ನಗ-ನಾಣ್ಯ, ಸಂಪತ್ತು ಪತ್ತೆ ಮಾಡಿದೆ.
ಎಸಿಬಿ ದಾಳಿ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಅಧಿಕಾರಿಗಳ ಮನೆಯಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದ್ದು ಸತತ ಮೂರು ಗಂಟೆಗಳಿಂದ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ದಾಳಿ ವೇಳೆ ಸರ್ಕಾರದ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ಸಂಬಂಧಪಟ್ಟ ಅಪಾರ ಪ್ರಮಾಣದ ಅಕ್ರಮ ಆಸ್ತಿಪಾಸ್ತಿಗಳನ್ನು ಶೋಧ ಮಾಡಲಾಗುತ್ತಿದೆ ಎನ್ನುವುದು ವಿಶೇಷ.
ಇಂದು ಬೆಳಗ್ಗೆಯೇ ದಾಳಿ ಆರಂಭವಾಗಿದ್ದು ಗದಗ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ ಎಸ್ ರುದ್ರೇಶಪ್ಪ ಅವರ ಮನೆಯಲ್ಲಿ ಮನೆಯಲ್ಲಿ 7 ಕೆಜಿಯಷ್ಟು ಚಿನ್ನ, 15 ಲಕ್ಷ ರೂಪಾಯಿ ನಗದು ಸಿಕ್ಕಿದೆ.
8 ಎಸ್ಪಿಗಳು, 100 ಅಧಿಕಾರಿಗಳು ಮತ್ತು 300 ಸಿಬ್ಬಂದಿಗಳ ತಂಡ 15 ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 60 ಸ್ಥಳಗಳಲ್ಲಿ ಎಸಿಬಿ ಶೋಧ ನಡೆಸಿದೆ.
ಎಲ್ಲೆಲ್ಲಿ ದಾಳಿ?: ಬೆಂಗಳೂರಿನಲ್ಲಿ ಸಕಾಲ ಕೆಎಎಸ್ ಅಧಿಕಾರಿ ನಾಗರಾಜ್, ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಜಿಯೋಥೆರಪಿಸ್ಟ್ ರಾಜಶೇಖರ, ಬಿಬಿಎಂಪಿ ಸಿಬ್ಬಂದಿ ಮಾಯಣ್ಣ, ಬಿಬಿಎಂಪಿ ಡಿ ಗ್ರೂಪ್ ನೌಕರ ಬಾಗಲಗುಂಟೆಯ ಗಿರಿ ಅವರಿಗೆ ಸೇರಿದ ಮನೆಗಳಲ್ಲಿ ಎಸಿಬಿ ತಂಡ ಪರಿಶೀಲನೆ ನಡೆಸಿದೆ.
ಮಂಗಳೂರು ಸ್ಮಾರ್ಟ್ ಸಿಟಿ ಇಇ ಕೆ.ಎಸ್.ಲಿಂಗೇಗೌಡ, ಮಂಡ್ಯ ಹೆಚ್‌ಎಲ್‌ಬಿಸಿ ಇಇ ಕೆ.ಶ್ರೀನಿವಾಸ್, ದೊಡ್ಡಬಳ್ಳಾಪುರದ ಕಂದಾಯ ನಿರೀಕ್ಷಕ ಲಕ್ಷ್ಮೀನರಸಿಂಹಯ್ಯ, ಮಾಜಿ ಪ್ರಾಜೆಕ್ಟ್ ಮ್ಯಾನೇಜರ್ ವಾಸುದೇವ್, ಬೆಂಗಳೂರು ನಿರ್ಮಿತಿ ಕೇಂದ್ರದ ಮಾಜಿ ಪ್ರಾಜೆಕ್ಟ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಬಿ.ಕೃಷ್ಣಾರೆಡ್ಡಿ, ಬೆಂಗಳೂರು ನಂದಿನಿ ಡೇರಿಯ ಜನರಲ್ ಮ್ಯಾನೇಜರ್, ಗದಗ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಕೆ. ಮಸ್ತಿ ಅವರಿಗೆ ಸೇರಿದ ಮನೆಗಳಲ್ಲಿ ಎಸಿಬಿ ತಂಡ ಪರಿಶೀಲನೆ ನಡೆಸಿದೆ.
ಜೇವರ್ಗಿ ಲೋಕೋಪಯೋಗಿ ಇಲಾಖೆಯ ಜೆಇ ಶಾಂತಗೌಡ ಬಿರಾದಾರ್ ಗೆ ಸೇರಿದ, ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಪತ್ತೆಯಾಗಿದೆ. ಮನೆಯ ನೀರಿನ ಪೈಪ್ ನಲ್ಲಿ, ಬಾತ್ ರೂಮ್ ನಲ್ಲಿ ಹಣ ಬಚ್ಚಿಟ್ಟಿರುವುದು ಗೊತ್ತಾಗಿದೆ.