ದಾವಣಗೆರೆ: ಜೈನ್ ಸಮುದಾಯದ ಆಚರಣೆಯಂತೆ ಆವರಗೆರೆಯಲ್ಲಿರುವ ನಾಗೇಶ್ವರ ಪಾರ್ಶ್ವ ಭೈರವ ಜೈನ ದೇವಸ್ಥಾನದ ಆವರಣದಲ್ಲಿ 45 ದಿನಗಳಿಂದ ನಡೆಯುತ್ತಿದ್ದ ಉಪಧ್ಯಾನ್ ತಪ ಗುರುವಾರ ಮುಕ್ತಾಯಗೊಂಡಿತು. ಈ ವ್ರತ ಆಚರಣೆ ಮಾಡಿದವರಿಗೆ ಶುಕ್ರವಾರ ಮೋಕ್ಷ ಮಾಲ ಸಮರ್ಪಣೆ ನಡೆಯಲಿದೆ.
45 ದಿನಗಳ ಕಾಲ ಪ್ರತಿ ಎರಡು ದಿನಕ್ಕೆ ಒಂದು ಹೊತ್ತು ಊಟ ಮಾತ್ರ ಸೇವಿಸಿ, ಹಣ್ಣಿನ ರಸ, ಟೀ ಸಹಿತ ಯಾವುದನ್ನೂ ಸ್ವೀಕರಿಸದೇ, ತಲೆಗೂದಲು, ಗಡ್ಡ ತೆಗೆಯದೇ, ಸ್ನಾನವೂ ಮಾಡದೇ ಆಚರಿಸುವ ವ್ರತ ಇದಾಗಿದೆ. 8 ವರ್ಷ ಮಕ್ಕಳಿಂದ 72 ವರ್ಷದ ವೃದ್ಧರವರೆಗೆ ಒಟ್ಟು 210 ಮಂದಿ ಈ ವ್ರತ ಆಚರಣೆ ಮಾಡಿದರು.
ಬೆಳಿಗ್ಗೆ 3 ಗಂಟೆಯಿಂದ ಸಂಜೆಯವರೆಗೂ ವಿವಿಧ ಧಾರ್ಮಿಕ ಪಾಠಗಳು, ಪ್ರವಚನ, ಬೋಧನೆಗಳು ನಿತ್ಯ ನಡೆದಿದ್ದವು.
ಜೈನ ಗುರುಗಳು ಹೇಗೆ ಬದುಕತ್ತಾರೋ ಹಾಗೆಯೇ ಬದುಕಿ ತೋರುವ ಈ ವ್ರತದಲ್ಲಿ ಭಾಗವಹಿಸಿದವರನ್ನು ಗುರುವಾರ ಮೆರವಣಿಗೆ ಮಾಡಲಾಯಿತು. ಪ್ರಧಾನ ಗುರುಗಳಾದ ಅಭಯ್ ಶೇಖರ್ ಸುರೀಶ್ವರ್ ಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. 23 ಗುರುಗಳು ಭಾಗವಹಿಸಿದ್ದರು. ಸಮುದಾಯದವರು ಉಪಸ್ಥಿತರಿದ್ದರು.