Saturday, December 14, 2024
Homeಮನೋರಂಜನೆಗಂಧದ ಗುಡಿ ಟೈಟಲ್ ಟ್ರೈಲರ್ ಡಿ. 6ಕ್ಕೆ ಬಿಡುಗಡೆ

ಗಂಧದ ಗುಡಿ ಟೈಟಲ್ ಟ್ರೈಲರ್ ಡಿ. 6ಕ್ಕೆ ಬಿಡುಗಡೆ

ಅಶ್ರಿನಿ ಪುನೀತ್‌ ರಾಜ್‌ಕುಮಾರ್‌ ಅವರ ಟ್ವೀಟ್‌

ಬೆಂಗಳೂರು: ದಿವಂಗತ ಕನ್ನಡ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಯೋಜನೆಯಾದ ಗಂಧದ ಗುಡಿ ಟೈಟಲ್ ಟ್ರೈಲರ್ ಡಿಸೆಂಬರ್ 6ಕ್ಕೆ ಬಿಡುಗಡೆಯಾಗುತ್ತಿದೆ.

ಅಪ್ಪು ಅವರ ಅಮೋಘವಾದ ಕನಸಿನ ಪಯಣ. ಹಿಂದೆಂದೂ ಕಾಣದ ರೋಮಾಂಚನ ಅನುಭವ ಎಂದು ಅಶ್ವನಿ ಪುನೀತ್‌ ರಾಜ್‌ಕುಮಾರ್‌ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಟೈಟಲ್‌ ಟೀಸರ್‌ ಆನ್‌ 6.12.2021 ಎಂದು ಬರೆದುಕೊಂಡಿದ್ದಾರೆ. ಆದರೆ ಟೈಟಲ್‌ ಹೆಸರು ಹಾಕಿಲ್ಲ.

ಡಿಸೆಂಬರ್ 6ಕ್ಕೆ ಪುನೀತ್ ಅವರ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನದಂದು ಟ್ರೈಲರ್ ಬಿಡುಗಡೆಗೊಳ್ಳಲಿದೆ. ಈ ಹಿಂದೆ ನವೆಂಬರ್ 1 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಪುನೀತ್ ಅವರ ಅಕಾಲಿಕ ಮರಣದಿಂದಾಗಿ ಬಿಡುಗಡೆ ಮುಂದೂಡಲಾಗಿತ್ತು.

ಇದು ಪವರ್ ಸ್ಟಾರ್ ಸಾಹಸಮಯ ಪಯಣವನ್ನು ಸೆರೆಹಿಡಿಯುವ ಸಿನಿಮೀಯ ಅನುಭವವಾಗಿದೆ. ಈ ಚಿತ್ರವು ಪುನೀತ್ ರಾಜ್‌ಕುಮಾರ್ ಮತ್ತು ವನ್ಯಜೀವಿ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕ ಅಮೋಘವರ್ಷ ಅವರ ಸಹಯೋಗದಲ್ಲಿದೆ ಎಂದು ವರದಿಯಾಗಿದೆ. ಇದಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.

ಅಕ್ಟೋಬರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರು ಟ್ವೀಟ್ ಮಾಡಿದ್ದು ಬಳಿಕ ಈ ನಿಗೂಢ ಯೋಜನೆ ಕುರಿತು ಊಹಾಪೋಹಗಳು ಹೆಚ್ಚಾಗಿತ್ತು. ‘ಕಥೆಯು ದಶಕಗಳ ಹಿಂದೆ ಹುಟ್ಟಿತ್ತು. ನಮ್ಮ ಜನರು, ನಮ್ಮ ನೆಲದ ವೈಭವ. ನಮ್ಮ ತಳಸಮುದಾಯಗಳು ಪ್ರಪಂಚದಾದ್ಯಂತ ಹರಡಿಕೊಂಡಿವೆ. ಪೀಳಿಗೆಗೆ ಸ್ಫೂರ್ತಿ ಅದಮ್ಯವಾಗಿತ್ತು. ಆ ಇತಿಹಾಸವನ್ನು ಮೆಲುಕು ಹಾಕುವ ಸಮಯ ಬಂದಿದೆ’ ಎಂದು ಬರೆದುಕೊಂಡಿದ್ದರು.

ಗಂಧದ ಗುಡಿಯನ್ನು ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ಮತ್ತು ಮಡ್‌ಸ್ಕಿಪ್ಪರ್ ನಿರ್ಮಿಸಿದ್ದಾರೆ.