ಹೊಸದಿಲ್ಲಿ: ರೈತರು ಮುಂದಿಟ್ಟಿರುವ ಎಲ್ಲ ಐದು ಬೇಡಿಕೆಗಳನ್ನು ಈಡೇರಿಸಲಾಗಿದೆ. ಹಾಗಾಗಿ ಇನ್ನು ಪ್ರತಿಭಟನೆ ಮುಂದುವರಿಸಬಾರದು ಎಂದು ಕೇಂದ್ರ ಸರ್ಕಾರ ಲಿಖಿತ ಪತ್ರ ಬರೆದ ಕಾರಣ ರೈತರು ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ರೈತರು ನಡೆಸುತ್ತಿದ್ದ ಪ್ರತಿಭಟನೆ ಸ್ಥಗಿತಗೊಳಿಸಲು ರೈತರು ನಿರ್ಧರಿಸಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಮೂರು ಗಡಿಗಳಲ್ಲಿ ಸುಮಾರು 380 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರು. 15 ತಿಂಗಳ ಹಿಂದೆ ಜಾರಿಗೆ ಬಂದಿದ್ದ ಕಾಯ್ದೆಗಳನ್ನು 10 ದಿನಗಳ ಮೊದಲು, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಹಿಂದಕ್ಕೆ ಪಡೆಯಲಾಗಿತ್ತು. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ರೂಪಿಸುವುದು ಸೇರಿ ರೈತರ ಇತರ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರವು ಲಿಖಿತ ಭರವಸೆ ಕೊಟ್ಟಿದೆ. ಹಾಗಾಗಿ, ಪ್ರತಿಭಟನೆಯನ್ನು ಸ್ಥಗಿತಗೊಳಿಸಲು ರೈತರು ಮುಂದಾಗಿದ್ದಾರೆ.
ಪ್ರತಿಭಟನೆಯನ್ನು ‘ಚಾರಿತ್ರಿಕ’ ಎಂದು ಸಂಯುಕ್ತ ಕಿಸಾನ್ ಮೋರ್ಚಾವು (ಎಸ್ಕೆಎಂ) ಬಣ್ಣಿಸಿದೆ. ರೈತರು ಪ್ರತಿಭಟನೆಯ ಸ್ಥಳವನ್ನು ತೆರವು ಮಾಡುವ ಕೆಲಸವನ್ನು ಶನಿವಾರ ಆರಂಭಿಸಲಿದ್ದಾರೆ. ರೈತರು ತಮ್ಮ ಊರುಗಳಿಗೆ ‘ವಿಜಯ ಯಾತ್ರೆ’ ನಡೆಸಲಿದ್ದಾರೆ ಎಂದಿದೆ. ಸರ್ಕಾರವು ಭರವಸೆಗಳನ್ನು ಈಡೇರಿಸದೇ ಇದ್ದರೆ 2022ರ ಜನವರಿ 15ರಿಂದ ಪ್ರತಿಭಟನೆ ಪುನರಾರಂಭ ಆಗಲಿದೆ ಎಂಬ ಎಚ್ಚರಿಕೆಯನ್ನೂ ಎಸ್ಕೆಎಂ ನೀಡಿದೆ. 2022ರ ಜನವರಿ 15ರಂದು ರೈತ ಮುಖಂಡರು ಸಭೆ ನಡೆಸಿ, ಬೇಡಿಕೆಗಳು ಈಡೇರಿದೆಯೇ ಎಂದು ಪರಿಶೀಲಿಸಲಿದ್ದಾರೆ.
‘ಎಲ್ಲ ರೈತರು ದೆಹಲಿಯ ಗಡಿ ತೊರೆಯಲು ಕೆಲವು ದಿನಗಳು ಬೇಕಾಗಬಹುದು. ನಾನು ಇದೇ 14ರಂದು ಮನೆಗೆ ಹೋಗುತ್ತೇನೆ. 13ರಂದು ಸ್ವರ್ಣ ಮಂದಿರಕ್ಕೆ ಹೋಗುತ್ತೇನೆ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಕೇಶ್ ಟಿಕಾಯತ್ ಹೇಳಿದ್ದಾರೆ.
‘ಪ್ರತಿಭಟನೆಯಿಂದಾಗಿ ಜನರಿಗೆ ಆಗಿರುವ ತೊಂದರೆಗೆ ಕ್ಷಮೆ ಯಾಚಿಸುತ್ತೇವೆ’ ಎಂದು ರೈತ ನಾಯಕ ಶಿವಕುಮಾರ್ ಕಾಕ್ಕ ಹೇಳಿದ್ದಾರೆ. ಪ್ರತಿಭಟನೆಯ ಸಂದರ್ಭದಲ್ಲಿ ರೈತರ ಜತೆಗೆ ನಿಂತ ಜನರಿಗೆ ರೈತ ಮುಖಂಡ ಬಲಬೀರ್ ಸಿಂಗ್ ರಾಜೇವಾಲ್ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರತಿಭಟನೆಯನ್ನು ಸದ್ಯಕ್ಕೆ ನಿಲ್ಲಿಸಲಾಗುವುದು, ಆದರೆ ರೈತರ ಹಕ್ಕುಗಳಿಗಾಗಿ ಹೋರಾಟ ನಿಲ್ಲುವುದಿಲ್ಲ ಎಂದು ರಾಜೇವಲ್ ಸ್ಪಷ್ಟಪಡಿಸಿದ್ದಾರೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಕಳೆದ 2020ರ ನವೆಂಬರ್ 26ರಂದು ರೈತರು ಪ್ರತಿಭಟನೆ ಆರಂಭಿಸಿದ್ದರು. ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರತಿಭಟನೆಗೆ ವರ್ಷ ತುಂಬುವುದಕ್ಕೆ ವಾರ ಮೊದಲು ಅಂದರೆ 2021ರ ನವೆಂಬರ್ 19ರಂದು ಘೋಷಿಸಿದ್ದರು. ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವೇ (ನವೆಂಬರ್ 29) ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಮಸೂದೆ ಅಂಗೀಕಾರ ಆಗಿತ್ತು.
ಆದರೆ, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಮತ್ತು ಇತರ ಬೇಡಿಕೆಗಳ ಕಾರಣದಿಂದ ರೈತರು ಪ್ರತಿಭಟನೆ ಮುಂದುವರಿಸಿದ್ದರು.