ಮಂಡ್ಯ
ಇವರಿಗೆ,
ಶ್ರೀ ನಿರ್ಮಲಾನಂದನಾಥ ಸ್ವಾಮಿ ಅವರು
ಶ್ರೀಆದಿಚುಂಚನಗಿರಿ ಸಂಸ್ಥಾನ ಮಠ
ಆದಿ ಚುಂಚನಗಿರಿ, ಬೆಳ್ಳೂರು
ಮಂಡ್ಯ ಜಿಲ್ಲೆ
ದಿನಾಂಕ 12-12-2021
ಇಂದು 12-12-2021 ಸೋಷಿಯಲ್ ಮೀಡಿಯಾದಲ್ಲಿ ತಾವು ‘ಸಾವರ್ಕರ್’ ಕುರಿತಾದ ಪುಸ್ತಕವೊಂದರ ಬಿಡುಗಡೆಗೆ ದಿವ್ಯ ಸಾನಿಧ್ಯವಹಿಸುತ್ತಿರುವ ಕುರಿತು ಪ್ರಕಟವಾದ ಆಹ್ವಾನ ಪತ್ರಿಕೆಯನ್ನೊಂದನ್ನು ಗಮನಿಸಿದೆ. ( ಪ್ರತಿ ಲಗತ್ತಿಸಲಾಗಿದೆ) ಅದನ್ನು ಕಂಡು ಆಶ್ಚರ್ಯವೂ, ಅವಮಾನವೂ ಆಯಿತು.
ಒಕ್ಕಲಿಗರು ಸೇರಿದಂತೆ ಮಾಂಸಾಹಾರಿಗಳಾದ ಶೂದ್ರ ಸಮುದಾಯಗಳನ್ನು ಅತ್ಯಂತ ನಿಕೃಷ್ಠವಾಗಿ ಕಾಣುವ, ಅಮಾನವೀಯವಾದ ವರ್ಣಾಶ್ರಮ ಧರ್ಮವನ್ನು ಇವತ್ತಿಗೂ ಬೆಂಬಲಿಸುವ, ಜಾತೀಯ ದ್ರಿಷ್ಟಿಯಿಂದ ನಮ್ಮನ್ನು ಅಸ್ಪೃಶ್ಯರಾಗಿ ನಡೆಸಿಕೊಳ್ಳುವ ಪೈಶಾಚಿಕ ಬ್ರಾಹ್ಮಣ ಮತವೇ ಉತ್ತಮವೆಂದು ಬಗೆವ ‘ನಿಲುಮೆ’ ಯಂತಹ ಬಿಜೆಪಿ ಪಕ್ಷವಾದಿ, ಕೋಮುವಾದಿ ಸಂಘಟನೆಯು ಏರ್ಪಡಿಸಿರುವ ಅಂತಹದ್ದೇ ಕೋಮುವಾದಿಯೂ ಆಗಿರುವ ‘ಸಾವರ್ಕರ್’ ಕುರಿತಾದ ಪ್ರಾಪಗಾಂಡ ಆಧಾರಿತ ಪುಸ್ತಕ ಬಿಡುಗಡೆಯಲ್ಲಿ ತಾವು ದಿವ್ಯಸಾನಿಧ್ಯವಹಿಸುವುದು ಎಷ್ಟರ ಮಟ್ಟಿಗೆ ಸರಿ? ಎಂಬುದನ್ನು ತಾವು ವಿವೇಚಿಸಬೇಕಿದೆ.
ಅಧಿಕಾರಸ್ಥರು ತಮ್ಮ ಗದ್ದುಗೆ ಉಳಿಸಿಕೊಳ್ಳಲು ಎಲ್ಲಿಗೆ ಬೇಕಾದರೂ ಹೋಗುತ್ತಾರೆ, ಯಾವ ಕೆಲಸ ಬೇಕಾದರೂ ಮಾಡುತ್ತಾರೆ ಆದ್ರೆ ಸ್ವಾಮಿ ಅವರಿಗೆ ಅಂತಹ ಅಗತ್ಯ ಇಲ್ಲ. ಸಮುದಾಯದ ಒಳಿತಿಗಾಗಿ ಕೆಲಸ ಮಾಡುವ ಸ್ವಾಮಿಯವರು, ಸಮುದಾಯ ಕೇಂದ್ರಿತ ಕಾರ್ಯಕ್ರಮಗಳಿಗೆ ದಿವ್ಯಸಾನಿಧ್ಯ ವಹಿಸಬೇಕೇ ಪರಂತು ಪ್ರಾಪಗಾಂಡ ಆಧಾರಿತ ಕಾರ್ಯಕ್ರಮಗಳಿಗೆ ಖಂಡಿತ ಅಲ್ಲ.
ದಕ್ಷಿಣ ಕರ್ನಾಟಕದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಒಕ್ಕಲಿಗ ಸಮುದಾಯದಲ್ಲಿ ಉಪಜಾತಿ ಧ್ರುವೀಕರಣವು ಅತಿಯಾಗಿ ಪಂಗಡಗಳು ವಿಪರೀತ ಆಗುತ್ತಿವೆ. ಇವುಗಳ ನಡುವೆ ವೈವಾಹಿಕ ಸಂಬಂಧಗಳೂ ಸಾಧ್ಯವಾಗದಷ್ಟು ಬಿಗಡಾಯಿಸಿಕೊಳ್ಳುತ್ತಿವೆ. ಬರ–ನೆರೆ, ಮಾರುಕಟ್ಟೆ ಧಾರಣೆ ಕುಸಿತ, ಸಿಗದ ಬೆಂಬಲ ಬೆಲೆ, ಸಕ್ಕರೆ ಕಾರ್ಖಾನೆಗಳು ಪಾವತಿಸದ ಬಾಕಿ, ಕೃಷಿ ಭೂಮಿಯ ಲ್ಯಾಂಡ್ ಮಾಫಿಯಾ ಹೀಗೆ ದಕ್ಷಿಣ ಕರ್ನಾಟಕದ ರೈತಾಪಿ ವರ್ಗ ಎದುರಿಸುತ್ತಿರುವ ಸಮಸ್ಯೆಗಳು ಸಾಲು ಸಾಲು ಇವೆ.
ಜನಸಾಮಾನ್ಯರು ಬದುಕಲು ಕಷ್ಟವಾಗುತ್ತಿರುವ ಹೊತ್ತಿನಲ್ಲಿ ‘ನಿಲುಮೆ’ ಯಂತಹ ಸಂಘಟನೆ ಜಾತಿ ಧರ್ಮಾಧಾರಿತವಾಗಿ ಜನರನ್ನು ಒಡೆಯಲು ಸತತವಾಗಿ ಪ್ರಯತ್ನಿಸುತ್ತಲೇ ಇವೆ.
ಹೌದು! ಆ ಸಂಘಟನೆಯಲ್ಲಿ ಕೆಳಜಾತಿಯ ಕೆಲವು ಜನರು ಕೂಡ ಇದ್ದಾರೆ. ಆದರೆ ಅವರೆಲ್ಲರ ಆಲೋಚನೆಗಳು ಬ್ರಾಹ್ಮಣ್ಯದ ದಾಸ್ಯಕ್ಕೆ ತೊತ್ತಾಗಿವೆ.
ಇವಾಗ ನೀವು ನಿಲ್ಲಬೇಕಾದ್ದು ನಮ್ಮ ಜನಗಳ ಜೊತೆಗೆ ಹೊರತು ಕೋಮುವಾದಿಗಳ ಅಂಗಳದಲ್ಲಿ ಖಂಡಿತ ಅಲ್ಲ. ಅದರಲ್ಲೂ ನಮ್ಮ ಸಂಸ್ಕೃತಿ, ಆಹಾರ ಮತ್ತು ಆಡುನುಡಿಗಳನ್ನ ಅಪಹಾಸ್ಯ ಮಾಡುವವರ ಸಂಗಡವಂತೂ ಅಲ್ಲವೇ ಅಲ್ಲ.
ಸ್ವಾಮಿಯವರು ವಿಜ್ಞಾನ, ವೇದಾಂತಗಳನ್ನೂ ಓದಿಕೊಂಡ ಹಾಗೆಯೆ ಸೂಫಿ ಕವಿಗಳ ಕಾವ್ಯವನ್ನು ತುಂಬಾ ಅಸ್ಥೆಯಿಂದ ಓದುವುದನ್ನ ನಾನು ಕೇಳಿ ತಿಳಿದಿದ್ದೇನೆ. ಹಾಗಿದ್ದ ಮೇಲೆ ಇಸ್ಲಾಂ ಧರ್ಮ ಮತ್ತು ಸಂಸ್ಕೃತಿಗಳ ಕುರಿತು ಅವ್ಯಾಹತವಾದ ದ್ವೇಷ ಮತ್ತು ಈರ್ಷೆಯನ್ನು ಸದಾಕಾಲವೂ ಪ್ರಚೋದಿಸುತ್ತಲೇ ಬಂದಿರುವ ‘ನಿಲುಮೆ’ ಮತ್ತು ‘ಸಾವರ್ಕರ್’ ಅಂತಹ ಜನರ ನಡುವೆ ಕುಳಿತು ಯಾವ ಮಾತುಗಳನ್ನು ಆಡಲು ಸಾಧ್ಯವಿದೆ ಹೇಳಿ? ಅಲ್ಲದೆ ಮಹಾತ್ಮಾ ಗಾಂಧಿ ಅವರ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಮತ್ತು ಸಂಭ್ರಮಿಸುವ ಮನಸ್ಥಿತಿಗಳು ಕೂಡ ಇದೆ ‘ನಿಲುಮೆ’ ಗುಂಪಿನಲ್ಲಿವೆ. ಅಂತಹವರ ನಡುವೆ ನೀವು ಕುಳಿತುಕೊಳ್ಳುವುದು ನಿಮ್ಮ ಮತ್ತು ಶ್ರೀಮಠದ ಗೌರವಕ್ಕೆ ತಕ್ಕುನಾದುದೇ? ದಯವಿಟ್ಟು ಯೋಚಿಸಿರಿ..
ಶತಮಾನಗಳಿಂದ ಶೂದ್ರ ಸಮುದಾಯಗಳನ್ನು ಜ್ಞಾನ, ಅಕ್ಷರ, ಅಧಿಕಾರ, ಅನುಭೋಗಗಳಿಂದ ವಂಚಿಸುತ್ತಾ ಬಂದ ಬ್ರಾಹ್ಮಣ ಸಮುದಾಯವು ಈಗ ಶೂದ್ರ ಸಮುದಾಯದ ಸ್ವಾಮಿಗಳು ಮತ್ತು ರಾಜಕಾರಣಿಗಳನ್ನು ಆಕರ್ಷಿಸಿ ಜನಪದ ದೈವ – ಸಂಸ್ಕೃತಿಗಳನ್ನು ವೈದಿಕೀಕರಣಗೊಳಿಸುತ್ತಾ. ಎರಡೂ ಬೇರೆಯಲ್ಲ ಎಂಬ ಭ್ರಮೆಯನ್ನು ಹುಟ್ಟಿಸುತ್ತಿವೆ. ಅಂತಹ ಭ್ರಮೆಗೆ ತಾವೂ ಸಿಲುಕಬಾರದು. ಉಪಖಂಡವು ವೈದಿಕ ಮತ ಸಂಸ್ಕೃತಿಗಿಂತಲೂ ಭಿನ್ನವಾದ ನೂರಾರು ಬುಡಕಟ್ಟು ಜಾತೀಯ ಸಂಸ್ಕೃತಿಗಳನ್ನು ಹೊಂದಿವೆ. ಇದು ನಿಮಗೆ ತಿಳಿಯದೇ ಇರುವ ವಿಚಾರವೇನಲ್ಲ. ಆದರೆ ನೆನೆಪಿಸಬೇಕಾದ ವಿಚಾರವಾಗಿದೆ.
ಶೂದ್ರ ಸಮುದಾಯವೊಂದರ ಮಠದ ಸ್ವಾಮಿ ಅವರಾದ ನಿಮಗೆ ಬ್ರಾಹ್ಮಣ ಮಠಗಳು ಕೊಟ್ಟಿರುವ ಪ್ರಾಮುಖ್ಯತೆ ಎಷ್ಟರ ಮಟ್ಟಗಿನದು ಎಂಬುದು ಈ ವೇಳೆಗಾಗಲೇ ತಮಗೆ ಅರ್ಥವಾಗಿರಬಹುದು ಎಂದು ಭಾವಿಸುತ್ತೇನೆ. ನೀವೀಗ ಪಾಲ್ಗೊಳ್ಳುತ್ತಿರುವುದು ಅಂತಹದೇ ಒಂದು ಬ್ರಾಹ್ಮಣ್ಯದ ಕೂಟ. ಅವರು ಎಂದೂ ನಮ್ಮ ಸಂಸ್ಕೃತಿ, ಆಹಾರ ಮತ್ತು ಆಡುನುಡಿಗಳನ್ನ ಗೌರವದಿಂದ ಖಂಡಿಲ್ಲ. ಅಂತಹರೊಡನೆ ತಾವು ಇರುವುದನ್ನು ನಾವು ಒಪ್ಪಲಾರೆವು.
ಈ ಹಿಂದೆ ಶ್ರೀಕುವೆಂಪು ಅವರು ಶ್ರೀಮಠದ ಹಿರಿಯ ಸ್ವಾಮಿ ಅವರಿಗೆ ಹೇಳಿದ್ದ ಕಿವಿಮಾತನ್ನು ಇಲ್ಲಿ ಮತ್ತೆ ಉಲ್ಲೇಖಿಸುತ್ತಿದ್ದೇನೆ.
“ವೈದಿಕ ಮಠಗಳನ್ನು ಅನುಕರಣೆ ಮಾಡುತ್ತಾ , ಪಾದಪೂಜೆ , ಅಡ್ಡಪಲ್ಲಕ್ಕಿ, ಕಿರೀಟಧಾರಣೆ ಇವುಗಳ ನಕಲಿಯಲ್ಲಿ ತೊಡಗಬೇಡಿ. ಏಕೆಂದರೆ ನೀವು ಭಾರತೀಯ ಸನಾತನ ಧರ್ಮದ ವೈದಿಕ ಆವೃತ್ತಿಯನ್ನು ಪುರಸ್ಕರಿಸುವುದಾದರೆ ಅದು ಕಟ್ಟ ಕಡೆಗೆ ಜಗದ್ಗುರುವಾಗುವ ನಿಮ್ಮ ಅರ್ಹತೆಯನ್ನೇ ತಿರಸ್ಕರಿಸುತ್ತದೆ .
ನೀವು ರಾಮಕೃಷ್ಣ ಮಿಶನ್‌ನ ರೀತಿ ನಿಯಮಗಳನ್ನೂ ಧ್ಯೇಯ-ಧೋರಣೆಗಳನ್ನೂ ತಿಳಿದುಕೊಂಡು ಆ ರೀತಿ ವರ್ತಿಸಿ , ಇಡೀ ಶೂದ್ರ ಸಮುದಾಯವನ್ನು ಬದಲಾಯಿಸುವ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ”
ಇವತ್ತಿಗೆ ಮುಂದುವರಿದು ಹೇಳುವುದಾದರೆ ‘ಅನಗತ್ಯವಾದ ಪ್ರಾಪಗಾಂಡ ಆಧಾರಿತ ಬ್ರಾಹ್ಮಣರ ಕೂಟಗಳಲ್ಲಿ ದಿವ್ಯಸಾನಿಧ್ಯವಹಿಸುವುದು, ಅವರನ್ನು ಅನಗತ್ಯವಾಗಿ ಶ್ರೀಮಠಕ್ಕೆ ಕರೆಸಿ ಆತಿಥ್ಯವಹಿಸುವುದು, ಬಲಪಂಥೀಯ ರಾಜಕಾರಣಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವುದು/ ಬೆಂಬಲಿಸುವುದು, ಜನಪದ ಸಾಮಾನ್ಯ ಆಚರಣೆಗಳನ್ನು ಕೈಬಿಟ್ಟು ವೈದಿಕ ಸಂಪ್ರದಾಯದ ಆಚರಣೆಗಳಿಗೆ ಪ್ರಾಮುಖ್ಯತೆ ಕೊಡುವುದು – ಇದೆಲ್ಲವನ್ನು ಬಿಟ್ಟು ಸಮುದಾಯದ ಜನರ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆ, ಅಭಿವೃದ್ದಿಗಾಗಿ ಶ್ರಮಿಸುವ ಸ್ವಾಮಿಯವರಾಗಬೇಕು’ ಎಂಬುದು ನನ್ನಂತಹ ಹಲವರ ನಿರೀಕ್ಷೆ.
ಶ್ರೀಗಳು ಇದಕ್ಕೆ ಪ್ರತಿಕ್ರಿಯೆ ಬರೆಯಬೇಕು ಎಂದು ನಾನು ಬಯಸುವುದಿಲ್ಲ. ನಿಮ್ಮ ನಡೆಯೇ ನಮಗೆ ಉತ್ತರವೂ, ಮಾರ್ಗದರ್ಶನವೂ ಆಗಿರುತ್ತದೆ ಎಂದು ಭಾವಿಸುತ್ತೇನೆ. ಶ್ರೀಮಠವು ರಾಜಕೀಯ ಬಂಡವಾಳದ ಕೇಂದ್ರವಾಗಿಯಷ್ಟೇ ಉಳಿಯದೇ ಸಮುದಾಯದ ಸಮಸ್ತರ ಒಳಿತಿನ ಕೇಂದ್ರವಾಗಲಿ ಎಂದು ಬಯಸುತ್ತೇನೆ.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ರಾಜೇಂದ್ರ ಪ್ರಸಾದ್, ಮಂಡ್ಯ
ನಾಗೇಗೌಡ ಕೀಲಾರ ಶಿವಲಿಂಗಯ್ಯ