Monday, May 19, 2025
Homeಸುದ್ದಿರಾಷ್ಟ್ರೀಯಎರಡು ದಶಕಗಳ ಬಳಿಕ ಭಾರತದ ಸುಂದರಿಗೆ ಮಿಸ್ ಯುನಿವರ್ಸ್ ಕಿರೀಟ

ಎರಡು ದಶಕಗಳ ಬಳಿಕ ಭಾರತದ ಸುಂದರಿಗೆ ಮಿಸ್ ಯುನಿವರ್ಸ್ ಕಿರೀಟ

ಎಲಿಯಟ್ (ಇಸ್ರೇಲ್): ಭಾರತದ ಪಂಜಾಬ್ ಮೂಲದ ರೂಪದರ್ಶಿ ಹರ್ನಾಝ್ ಕೌರ್‌ ಸಂಧು ಮಿಸ್ ಯುನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2000ರಲ್ಲಿ ಲಾರಾ ದತ್ತಾ ಈ ಗೌರವಕ್ಕೆ ಪಾತ್ರರಾದ ಬಳಿಕ ಭಾರತಕ್ಕೆ ಈಗ ಈ ಕಿರೀಟ ಲಭಿಸಿದೆ.

ಸದ್ಯ ವಿಜೇತ ಹರ್ನಾಝ್‍ಗೆ ಭಾರತ ಸೇರಿದಂತೆ ವಿಶ್ವದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇಸ್ರೇಲ್‍ನ ಎಲಿಯಟ್‍ನಲ್ಲಿ ನಡೆದ 70ನೇ ಮಿಸ್ ಯುನಿವರ್ಸ್-2021 ಸ್ಪರ್ಧೆಯಲ್ಲಿ ಹರ್ನಾರ್ ಸಿಂಧೂ ಅವರು ಪೆರಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸ್ಪರ್ಧಿಗಳಿಗಿಂತ ಮೇಲುಗೈ ಸಾಧಿಸಿ ಪ್ರಶಸ್ತಿಗೆ ಭಾಜನರಾದರು. 2020ರಲ್ಲಿ ಮಿಕ್ಸಿಕೋದಲ್ಲಿ ವಿಜೇತರಾದ ಹಾಲಿ ಭುವನ ಸುಂದರಿ ಆ್ಯಂಡ್ರೆ ಮೆಝಾ ಅವರು ಸಂಧುಗೆ ಕಿರೀಟ ತೊಡಿಸಿದರು.

ಪೆರುಗ್ವೆ ಹಾಗೂ ದಕ್ಷಿಣ ಆಫ್ರಿಕಾ ಪ್ರಥಮ ಹಾಗೂ ದ್ವಿತೀಯ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಅಗ್ರ ಮೂವರ ಸುತ್ತಿನಲ್ಲಿ ಸ್ಪರ್ಧಿಗಳಿಗೆ, “ಇಂದಿನ ಮಹಿಳೆಯರು ಎದುರಿಸುತ್ತಿರುವ ಒತ್ತಡವನ್ನು ಹೇಗೆ ನಿಭಾಯಿಸಬಹುದು ಎಂಬ ಬಗ್ಗೆ ಈ ಕಾರ್ಯಕ್ರಮ ವೀಕ್ಷಿಸುತ್ತಿರುವ ಯುವತಿಯರಿಗೆ ಏನು ಸಲಹೆ ನೀಡಲು ಬಯಸುತ್ತೀರಿ” ಎಂದು ಪ್ರಶ್ನೆ ಕೇಳಲಾಗಿತ್ತು. “ಇಂದಿನ ಯುವಜನತೆ ಎದುರಿಸುತ್ತಿರುವ ಅತಿದೊಡ್ಡ ಸವಾಲುಎಂದರೆ ತಮ್ಮ ಮೇಲಿನ ನಂಬಿಕೆ. ನೀವು ವಿಶಿಷ್ಟ ಎಂದು ತಿಳಿದುಕೊಳ್ಳುವುದು ನಿಮ್ಮನ್ನು ಸುಂದರವಾಗಿ ಮಾಡುತ್ತದೆ. ನಿಮ್ಮನ್ನು ಇತರರ ಜತೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ, ವಿಶ್ವದಲ್ಲಿ ನಡೆಯುವ ಪ್ರಮುಖ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚಾಗಿ ಮಾತನಾಡಿ. ಮುಂದೆಬಂದು ನಿಮ್ಮ ಬಗ್ಗೆ ಮಾತನಾಡಿ. ಏಕೆಂದರೆ ನೀವು ನಿಮ್ಮ ಬದುಕಿನ ನಾಯಕರು. ನೀವು ನಿಮ್ಮ ಧ್ವನಿ. ನನ್ನ ಮೇಲೆ ನನಗೆ ನಂಬಿಕೆ ಇದೆ. ಆದ್ದರಿಂದ ಇಂದು ನಾನಿಲ್ಲಿ ನಿಂತಿದ್ದೇನೆ” ಎಂದು ಸಂಧು ಉತ್ತರಿಸಿದರು.

ಹಲವು ಸುತ್ತುಗಳಲ್ಲಿ ನಡೆದ ಸ್ಪರ್ಧೆಯ ಅಂತ್ಯದಲ್ಲಿ ಸಂಧು ಅವರಿಗೆ ವಿಜೇತ ಕಿರೀಟ ತೊಡಿಸಲಾಯಿತು.