ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ, ಕುವೆಂಪುರವರ ಸೊಸೆ ರಾಜೇಶ್ವರಿ ತೇಜಸ್ವಿ(84) ಅಲ್ಪಕಾಲದ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.
ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ನ ತಮ್ಮ ಪುತ್ರಿಯ ನಿವಾಸದಲ್ಲಿ ಕೊನೆಕಾಲವನ್ನು ಕಳೆಯುತ್ತಿದ್ದ ರಾಜೇಶ್ವರಿಯವರ ದೇಹವನ್ನು ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ.
ಖ್ಯಾತ ಕವಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿಯವರು 1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂಎ ಓದುತ್ತಿದ್ದಾಗ ಪೂರ್ಣಚಂದ್ರ ತೇಜಸ್ವಿ ಅವರ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ 1966ರಲ್ಲಿ ವಿವಾಹವಾಗಿದ್ದರು.
ಹೊಲಿಗೆ, ಅಂಚೆಚೀಟಿ ಸಂಗ್ರಹ, ಕ್ರೋಶ ಹಾಕುವುದು ರಾಜೇಶ್ವರಿ ಅವರ ನೆಚ್ಚಿನ ಹವ್ಯಾಸವಾಗಿತ್ತು. ರಾಜೇಶ್ವರಿ ಅವರು ಬರೆದಿರುವ ‘ನನ್ನ ತೇಜಸ್ವಿ’ ಪುಸ್ತಕ ಈವರೆಗೆ ಐದು ಮುದ್ರಣಗಳನ್ನು ಕಂಡಿದೆ. ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಎನ್ನುವ ಅವರ ಮತ್ತೊಂದು ಪುಸ್ತಕವೂ ಜನಪ್ರಿಯವಾಗಿದೆ.
ಮೂಡಿಗೆರೆ ತಾಲ್ಲೂಕಿನ ಕಾಫಿತೋಟ ಮತ್ತು ಮನೆ ‘ನಿರುತ್ತರ’ದಲ್ಲಿ ತೇಜಸ್ವಿ ಅವರೊಂದಿಗೆ ವಾಸವಿದ್ದರು. ತೇಜಸ್ವಿ ನಿಧನದ ನಂತರವೂ ಅಲ್ಲಿಯೇ ವಾಸವಿದ್ದ ರಾಜೇಶ್ವರಿ ಅವರು ತೇಜಸ್ವಿ ಅವರ ಕೃಷಿ, ಸಾಹಿತ್ಯ ಹಾಗೂ ಹತ್ತಾರು ಹವ್ಯಾಸಗಳಿಗೆ ಹೆಗಲೆಣೆಯಾಗಿದ್ದವರು.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ನ ತೋಟದ ಮನೆಯಲ್ಲಿ ವಾಸವಾಗಿದ್ದ ರಾಜೇಶ್ವರಿ, ಇಬ್ಬರು ಪುತ್ರಿಯರನ್ನು ಇಂದು ಅಗಲಿದ್ದಾರೆ. ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನ ಪುತ್ರಿ ಸುಶ್ಮಿತಾ ಅವರ ಮನೆಯಲ್ಲಿ ಸಂಜೆ 5:30ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.
ರಾಜೇಶ್ವರಿಯವರ ನಿಧನಕ್ಕೆ ನಾಡಿದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.