Saturday, December 14, 2024
Homeಕರಾವಳಿ ಕರ್ನಾಟಕಉಡುಪಿಭಿನ್ನ ಕೋಮಿನ ಮದುವೆಗೆ ಮಕ್ಕಳಿಂದಲೇ ವಿರೋಧ

ಭಿನ್ನ ಕೋಮಿನ ಮದುವೆಗೆ ಮಕ್ಕಳಿಂದಲೇ ವಿರೋಧ

ಉಡುಪಿ: ಉಡುಪಿಯಲ್ಲಿ ಭಿನ್ನಕೋಮಿನ ಮಧ್ಯವಯಸ್ಕ ಜೋಡಿಯೊಂದರ ವಿವಾಹವನ್ನು ಮಕ್ಕಳೇ ತಪ್ಪಿಸಿದ ಘಟನೆ ನಡೆದಿದೆ.

ಉಡುಪಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇವತ್ತು ಮದುವೆಗೆ ಸಿದ್ಧತೆಗಳು ನಡೆದಿದ್ದವು. ವಿವಾಹಿತ ಪುರುಷ ಮತ್ತು ಮಹಿಳೆಯ ವಿವಾಹ ಇದಾಗಿತ್ತು. ಆದರೆ ಎರಡನೇ ಮದುವೆಯಾಗಲು ಹೊರಟ ಪುರುಷನ ಮಕ್ಕಳೇ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇವತ್ತು ಆಗಬೇಕಿದ್ದ ಮದುವೆ ರದ್ದಾಗಿದೆ.

ಉಡುಪಿಯ ಮಧ್ವನಗರದ ಅಶ್ಫಾಕ್ ಸಾಹೇಬ್ ಮತ್ತು ಜಯಲಕ್ಷ್ಮಿ ಎಂಬವರು ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆಯಾಗಲು ನೋಂದಣಿ ಮಾಡಿಕೊಂಡಿದ್ದರು.ಅರ್ಜಿಯಲ್ಲಿ ಅವಿವಾಹಿತರು ಎಂದು ಸುಳ್ಳು ಮಾಹಿತಿ ನೀಡಲಾಗಿತ್ತು. ಅಲ್ಲದೆ ಅಷ್ಫಾಕ್ ಸಾಹೇಬ್ ಗೆ ನಾಲ್ವರು ಮಕ್ಕಳಿದ್ದು ಹಿರಿಯ ಮಗ ಉಪನೋಂದಣಾಧಿಕಾರಿ ಕಚೇರಿಗೆ ಆಗಮಿಸಿ ತಂದೆಯ ಮದುವೆಗೆ ಆಕ್ಷೇಪ ಸಲ್ಲಿಸಿ ಅರ್ಜಿ ಹಾಕಿದ್ದಾನೆ.

ಅಷ್ಫಾಕ್ ವಿವಾಹಿತನಾಗಿದ್ದು ನಾಲ್ವರು ಮಕ್ಕಳಿದ್ದಾರೆ. ಆದರೆ ಕೊರೋನಾದಿಂದಾಗಿ ಪತ್ನಿ ಮೃತಪಟ್ಟಿದ್ದರು. ಇವರು ಮಧ್ವ ನಗರ ಜಯಲಕ್ಷ್ಮಿ ಎಂಬಾಕೆಯನ್ನು ಪ್ರೀತಿಸುತ್ತಿದ್ದು ಇಬ್ಬರೂ ಸ್ವಇಚ್ಛೆಯಿಂದ ಮದುವೆಯಾಗಲು ಅರ್ಜಿ ಸಲ್ಲಿಸಿದ್ದರು. ಈ ಸಂಗತಿಯು ಊರವರಿಗೆ ಗೊತ್ತಾಗಿ ಈ ಮದುವೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.ಅಲ್ಲದೆ ನಾಲ್ವರು ಮಕ್ಕಳೂ ಈ ಮದುವೆ ಬೇಡ,ತಂದೆ ಮೊದಲೇ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ.ಇನ್ನೊಂದು ಮದುವೆಯಾದರೆ ನಾವು ಬೀದಿಗೆ ಬೀಳುತ್ತೇವೆ ಎಂದು ಆಕ್ಷೇಪ ಸಲ್ಲಿಸಿದ್ದರಿಂದ ,ಉಪನೋಂದಣಾಧಿಕಾರಿಗಳು ಇದನ್ನು ಪರಿಗಣಿಸಿ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಹಿಂದೂ ಸಂಘಟನೆಗಳು ಕೂಡ ಮದುವೆಗೆ ವಿರೋಧ ವ್ಯಕ್ತಪಡಿಸಿ ಮನವಿ ಸಲ್ಲಿಸಿದವು.