Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿರೈತ ಸಂಘ, ಹಸಿರು ಸೇನೆ ಸದಸ್ಯರ ಪ್ರತಿಭಟನೆ ಬೆಳೆ ಹಾನಿ: ಸಮರ್ಪಕ ಪರಿಹಾರಕ್ಕೆ ಆಗ್ರಹ

ರೈತ ಸಂಘ, ಹಸಿರು ಸೇನೆ ಸದಸ್ಯರ ಪ್ರತಿಭಟನೆ ಬೆಳೆ ಹಾನಿ: ಸಮರ್ಪಕ ಪರಿಹಾರಕ್ಕೆ ಆಗ್ರಹ

ಬೆಳಗಾವಿ: ‘ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆಗೆ ಸಮರ್ಪಕ ಪರಿಹಾರವನ್ನು ತ್ವರಿತವಾಗಿ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಮತ್ತು ತೋಟಗಾರಿಕೆ ಕೆಲಸಕ್ಕೂ ವಿಸ್ತರಿಸಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ತಾಲ್ಲೂಕಿನ ಸುವರ್ಣ ವಿಧಾನಸೌಧದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

‘ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಕಾಲಮಿತಿಯೊಳಗೆ ಜಮಾ ಮಾಡಬೇಕು. ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ರದ್ದುಗೊಳಿಸಬೇಕು. ಪ್ರತಿ ವರ್ಷ ನೆರೆಪೀಡಿತವಾಗುವ ಪ್ರದೇಶಗಳ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮಳೆ ನೀರನ್ನು ಬಳಸಿಕೊಳ್ಳಲು ಸಮಗ್ರ ನೀರಾವರಿ ಯೋಜನೆ ಕೈಗೊಳ್ಳಬೇಕು. ಕರ್ನಾಟಕ ಕೃಷಿ ಬೆಲೆ ಆಯೋಗದ ಬೆಲೆಸೂಚಿಯನ್ನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಬಗರ್‌ಹುಕುಂ ಸಾಗುವಳಿ ಮಾಡಿರುವ ರೈತರಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರಿ ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳ ಸಮರ್ಪಕ ನಿರ್ವಹಣೆಗಾಗಿ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹನಿ ನೀರಾವರಿ ಸಹಾಯಧನವನ್ನು ಆರು ವರ್ಷಗಳಿಗೊಮ್ಮೆ ಪ್ರತಿ ರೈತರಿಗೂ ಪುನರಾವರ್ತಿಸಬೇಕು’ ಎಂದು ಒತ್ತಾಯಿಸಿದರು.

‘ಟನ್ ಕಬ್ಬಿಗೆ ಇಲಾಖೆ ₹4,200 ನಿಗದಿಪಡಿಸಿ ಕಬ್ಬಿನ ಎಲ್ಲಾ ಉಪಉತ್ಪನ್ನಗಳ ಆದಾಯದಲ್ಲಿ ರೈತರಿಗೂ ಪಾಲು ಸಿಗುವಂತೆ ಮಾಡಬೇಕು. ಕೃಷ್ಣಾ, ಶಿವಸಾಗರ, ಮಲಪ್ರಭಾ ಮತ್ತು ರನ್ನ‌ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳ ಬಗ್ಗೆ ವಿಶೇಷ ಚರ್ಚೆಯೊಂದಿಗೆ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು. ‘ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ತಿಳಿಸಿದರು.

‘ತೋಟಗಳಲ್ಲಿ ವಾಸವಾಗಿರುವ ರೈತರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಎಲ್ಲ ರೀತಿಯ ಸರ್ಕಾರಿ ಕರ, ವಿದ್ಯುತ್ ಬಿಲ್ ಮನ್ನಾ ಆಗಬೇಕು. ರೈತರ ಅನುಮತಿ ಇಲ್ಲದೆ ಜಮೀನನ್ನು ಸಾರ್ವಜನಿಕ ಬಳಕೆಯ ನೆಪದಲ್ಲಿ ಕಿತ್ತುಕೊಳ್ಳಬಾರದು. ಬಿ.ಟಿ. ಬೀಜಗಳ ತಂತ್ರಜ್ಞಾನವನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಸಾವಯವ ಮತ್ತು ಸಿರಿ ಧಾನ್ಯಗಳ ಕೃಷಿ ಉತ್ತೇಜಿಸಬೇಕು.‌ ಪಡಿತರ ವ್ಯವಸ್ಥೆ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ, ಚೂನಪ್ಪ ಪೂಜೇರಿ, ರಾಮಣ್ಣ ಕೆಂಚನಹಳ್ಳಿ, ಶಶಿಕಾಂತ ಪಡಸಲಗಿ, ಸುರೇಶಬಾಬು ಪಾಟೀಲ, ಜಯಶ್ರೀ ಗುರವನ್ನವರ, ಗಂಗಾಧರ ಮೇಟಿ, ಸಿದ್ದವೀರಪ್ಪ ಪಾಲ್ಗೊಂಡಿದ್ದರು.