ಮೈಸೂರಿನ ರಂಗಾಯಣ ಕರ್ನಾಟಕದ ಒಂದು ಮುಖ್ಯವಾದ ಸಾಂಸ್ಕೃತಿಕ ಕೇಂದ್ರ. ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಬಿ.ವಿ ಕಾರಂತರ ಆಶಯದಂತೆ ಆರಂಭಗೊಂಡ ಸಂಸ್ಥೆ.ಅಂದಿನಿಂದ ಇಂದಿನತನಕವೂ ರಂಗಾಯಣ ಮಹತ್ವಪೂರ್ಣ ನಾಟಕಗಳನ್ನು ಸಂಘಟಿಸುವ ಮೂಲಕ ಉತ್ತಮ ಕೆಲಸವನ್ನು ಮಾಡುತ್ತಾ ಬಂದಿದೆ.
ಇದೀಗ ರಂಗಾಯಣದ ವಾತಾವರಣ ಹದಗೆಡುತ್ತಿದೆ ಏಕೆ? ಕಾರಣ ಸ್ಪಷ್ಟವಿದೆ.ಹಿಂದುತ್ವವಾದಿಗಳಿಗೆ ಪ್ರವೇಶ ದೊರಕಿಸಿಕೊಟ್ಟಿರುವುದು.ಬಿಜೆಪಿ ಮತ್ತು ಆರೆಸ್ಸೆಸ್ ವಕ್ತಾರರಿಗೆ ಯಾವ ಸಾಂಸ್ಕೃತಿಕ ಸೂಕ್ಷ್ಮತೆಗಳು ಇರುವುದೂ ಸಾಧ್ಯವಿಲ್ಲ. ಸಾಂಸ್ಕೃತಿಕ ಕೇಂದ್ರಗಳಿರುವುದು ತಮ್ಮ ಹಿಂದುತ್ವವಾದಿ ಅಜೆಂಡಾವನ್ನು ಜಾರಿಗೆ ತರಲು ಎಂದು ನಂಬಿರುವವರು ಅವರು.ಮಧ್ಯಪ್ರದೇಶದ ಸಾಂಸ್ಕೃತಿಕ ಸಮುಚ್ಚಯವಾದ ಭಾರತ ಭವನವನ್ನು ಅವರು ನಾಶಪಡಿಸಿದ್ದು ಕಲಾವಿದನೇ ಅಲ್ಲದ ಆರೆಸ್ಸೆಸ್ ಮೂಲದ ವ್ಯಕ್ತಿಯೊಬ್ಬನನ್ನು ನಿರ್ದೇಶಕನನ್ನಾಗಿ ಮಾಡುವ ಮೂಲಕ. ಆ ಸಮಯದಲ್ಲಿ ಇದ್ದ ಅತ್ಯುತ್ತಮ ಕಲಾವಿದರನ್ನೂ ರಂಗಕರ್ಮಿಗಳನ್ನೂ ಕಿತ್ತು ಹಾಕುವುದರ ಮೂಲಕ. ಆ ಬಗ್ಗೆ ಅವರಿಗೆ ಈಗಲೂ ಯಾವ ಖೇದವೂ ಇರುವ ಹಾಗಿಲ್ಲ. ಇದೀಗ ರಂಗಾಯಣಕ್ಕೆ ಅವರು ನೇಮಕ ಮಾಡಿರುವುದೂ ಆರೆಸ್ಸೆಸ್ ಮೂಲದ ಅಡ್ಡಂಡ ಕಾರ್ಯಪ್ಪ ಅವರನ್ನು. ಸೂಕ್ಷ್ಮಜ್ಞರ ಅವಶ್ಯಕತೆಯೇ ತಮಗಿಲ್ಲ ಎಂಬ ವಾತಾವರಣ ಈಗ ಇಲ್ಲಿಯೂ ಕಾಣಿಸಿಕೊಂಡಿದೆ.
ಈ ನೆಲೆಯಲ್ಲಿಯೇ ಈಗ ರಂಗಾಯಣದಲ್ಲಿ ನಡೆಯುತ್ತಿರುವ ಕೆಲವು ಅನಪೇಕ್ಷಿತ ವಿದ್ಯಮಾನಗಳನ್ನು ನಾವು ನೋಡಬೇಕಾಗಿದೆ.ಈ ಸಲದ ರಂಗಾಯಣದಲ್ಲಿ ನಡೆಯಲಿರುವ ಬಹುರೂಪಿ ನಾಟಕೋತ್ಸವದಲ್ಲಿ ಚಕ್ರವರ್ತಿ ಸೂಲಿಬೆಲೆ ಮತ್ತು ಮಾಳವಿಕಾ ಅವರನ್ನು ಅತಿಥಿಗಳನ್ನಾಗಿ ಕರೆದಿರುವುದು ಉದ್ದೇಶಪೂರ್ವಕವಾದುದು.ಕಾರ್ಯಪ್ಪ ಹಾಗೆ ಮಾಡಲೆಂದೇ ನೇಮಕವಾದವರು.
ಆದುದರಿಂದಲೇ ಅವರ ಮಾತುಗಳು ಅಷ್ಟು ಉಗ್ರವಾಗಿ ಹೊಮ್ಮುತ್ತಿವೆ.ನಾಡಿನ ರಂಗಭೂಮಿಯಲ್ಲಿ ಈವರೆಗೆ ಮಹತ್ವದ ಕೆಲಸ ಮಾಡುತ್ತಾ ಬಂದಿರುವ ಎಲ್ಲರ ಮಾತುಗಳನ್ನು ಧಿಕ್ಕರಿಸುತ್ತಾ ರಂಗಾಯಣದಲ್ಲಿಯೂ ಹಿಂದುತ್ವದ ಬೀಜ ಬಿತ್ತುವ ಕಾರ್ಯಕ್ಕಾಗಿಯೇ ಇರುವವನು ತಾನು ಎಂಬಂತೆ ಅವರು ವರ್ತಿಸುತ್ತಿರುವುದೂ ಇದೇ ಕಾರಣಕ್ಕೆ. ಅದರಲ್ಲಿ ರಾಜಕೀಯ ಆಕಾಂಕ್ಷೆಯ ಸುಳಿವೂ ಇರುವ ಹಾಗಿದೆ.
ರಂಗಭೂಮಿ ಯಾರ ಕಟ್ಟಿಗೂ ಸಿಗುವಂಥದ್ದಲ್ಲ. ಪ್ರತಿರೋಧವೇ ರಂಗಭೂಮಿಯ ಶಕ್ತಿ. ಸೂಕ್ಷ್ಮವಾಗಿಯಾದರೂ ಸಾಮಾಜಿಕ ಬದಲಾವಣೆಯನ್ನು ತರುವ ಆಶಯವನ್ನು ರಂಗಭೂಮಿ ಹೊಂದಿರುತ್ತದೆ.ಹೀಗಾಗಿ,ಎಡ ಮತ್ತು ಬಲದ ಪ್ರಶ್ನೆಯೂ ರಂಗಭೂಮಿಯಲ್ಲಿ ಅಷ್ಟು ಮುಖ್ಯವಾಗುವುದಿಲ್ಲ.ಆದರೆ ರಂಗಭೂಮಿಗೂ ಜನಸಮುದಾಯಕ್ಕೆ ನೇರ ಸಂಬಂಧ ಇರುವುದರಿಂದ,ಅಲ್ಲಿ ಕೆಲಸ ಮಾಡುವ ಹೆಚ್ಚಿನವರು ವಿಶಾಲ ಅರ್ಥದಲ್ಲಿ ಎಡಪಂಥೀಯ ಒಲವು ಹೊಂದಿರುವವರೇ ಆಗಿರುತ್ತಾರೆ.ಇದು ಆರೆಸ್ಸೆಸ್ ಹಿನ್ನೆಲೆಯ ಮಂದಿಗೆ ಪಥ್ಯವಾಗಲು ಸಾಧ್ಯವಿಲ್ಲ. ಸಾಂಸ್ಕೃತಿಕವಾಗಿ ಸಮಾಜದ ಜೊತೆ ಯಾವ ರೀತಿಯ ಮಾತುಕತೆ ನಡೆಸಬೇಕು ಎಂಬುದೇ ಅವರಿಗೆ ಗೊತ್ತಿಲ್ಲ.ರಂಗಾಯಣದ ಇಂದಿನ ಸ್ಥಿತಿಗೆ ಇದೇ ಕಾರಣ.
ಇದರ ಅನುಭವವಿದ್ದ ಬಿ.ವಿ. ಕಾರಂತರು ಭಾರತ್ ಭವನ ಬಿಟ್ಟ ನಂತರ ಕರ್ನಾಟಕದಲ್ಲಿ ಅದೇ ಮಾದರಿಯ ಸರಕಾರಿ ಪ್ರಾಯೋಜಿತ ರಂಗಾಯಣವನ್ನು ಕಟ್ಟುವ ಯೋಚನೆ ಏಕೆ ಮಾಡಿದರು ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಪ್ರಾಯಶ: ಗಟ್ಟಿಯಾದ ರೆಪರ್ಟರಿ ಒಂದನ್ನು ಕಟ್ಟುತ್ತಿರುವುದರಿಂದ ಮುಂದೆ ತೊಂದರೆಯಾಗಲಿಕ್ಕಿಲ್ಲ ಎಂದು ಅವರು ಭಾವಿಸಿರಬೇಕು.ಹಾಗಾಗಲಿಲ್ಲ. ಭಾರತ್ ಭವನದ ಹಾಗೆ ರಂಗಾಯಣ ಸಂಪೂರ್ಣವಾಗಿ ನಾಶವಾಗಲಾರದು ಎಂಬ ದೂರದ ಆಸೆಯಷ್ಟೇ ಈಗ ನಮಗುಳಿದಿರುವುದು.
ಬಿಜೆಪಿ ಸರ್ಕಾರ ಮತ್ತು ತಾನು ಇರುವ ತನಕ ಅಂತಹ ನಿರೀಕ್ಷೆಗೆ ಅವಕಾಶವಿಲ್ಲ ಎಂಬ ದಾಷ್ಟ್ಯವನ್ನು ಸದ್ಯದ ರಂಗಾಯಣ ನಿರ್ದೇಶಕರು ತೋರಿಸುತ್ತಿದ್ದಾರೆ.
ಎಸ್.ಎಲ್ .ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ಎತ್ತಿಕೊಳ್ಳುವ ಮೂಲಕ ಅವರು ಆ ಸೂಚನೆಯನ್ನು ನೀಡಲು ಪ್ರಯತ್ನಿಸಿದರು. ಅದಕ್ಕಿಂತ ಮುಖ್ಯವಾಗಿ ಅವರು ಆ ನಾಟಕಕ್ಕೆ ನಿರ್ದೇಶಕರನ್ನಾಗಿ ಕರೆಸಿಕೊಂಡದ್ದು ‘ಗುಜರಾತ್ ಮಾದರಿಯಲ್ಲಿ ಬಂಗಾಲದಲ್ಲಿಯೂ ಗಲಭೆ ಎಬ್ಬಿಸಬೇಕು’ಎಂಬ ಕೋಮುಪ್ರಚೋದಕ ಹೇಳಿಕೆ ನೀಡಿದ ಪ್ರಕಾಶ್ ಬೆಳವಾಡಿಯವರನ್ನು. ಆದರೆ ಅಂದಿನ ಸಂದರ್ಭದಲ್ಲಿ,ಒಂದು ರಂಗಕೃತಿ ನಿರ್ಮಾಣ ಮುಖ್ಯವಾದುದರಿಂದ ರಂಗಾಸಕ್ತರು ಆ ಬಗ್ಗೆ ಹೆಚ್ಚು ಯೋಚಿಸಲು ಹೋಗಲಿಲ್ಲ.ಇದೀಗ ಬಹುರೂಪಿ ನಾಟಕೋತ್ಸವಕ್ಕೆ ಸೂಲಿಬೆಲೆ ಮತ್ತು ಮಾಳವಿಕಾ ಕರೆಸುವ ಹಿನ್ನೆಲೆಯಲ್ಲಿ ಇರುವುದು ಇನ್ನಷ್ಟು ಪ್ರಚೋದಿಸುವ ಉದ್ದೇಶ.ಇದಕ್ಕೆ ಸಹಜವಾಗಿಯೇ ಪ್ರತಿರೋಧ ವ್ಯಕ್ತವಾಗಿದೆ.ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಕಾರ್ಯಪ್ಪ ಅವರಿಗೆ ತಿಳಿದಂತಿಲ್ಲ. ಇದ್ದಕ್ಕಿದ್ದಂತೆ ವ್ಯಗ್ರಗೊಂಡು ‘ನೀವು ನನ್ನನ್ನು ಕೋಮುವಾದಿ ಎಂದು ಕರೆದರೆ ನಾನು ನಿಮ್ಮನ್ನು ಮಾವೋವಾದಿ ಎಂದು ಕರೆಯುತ್ತೇನೆ’ ಎಂಬ ಅಸಂಬದ್ಧ ಮಾತು ಆಡುತ್ತಿದ್ದಾರೆ.ಇದು ಬಾಲಿಶವಾದುದು.ಖಂಡನಾರ್ಹವಾದುದು.
ಪ್ರತಿಯೊಬ್ಬರೂ ಗಂಭೀರವಾಗಿ ಯೋಚಿಸಬೇಕಾದ ವಿಚಾರ.ಇಂತಹ ವಿದ್ಯಮಾನ ರಂಗಭೂಮಿಯಲ್ಲಿ ಖಂಡಿತ ನಡೆಯಬಾರದು.ಕರ್ನಾಟಕದ ಎಲ್ಲಾ ಪ್ರಜ್ಞಾವಂತ ರಂಗಕರ್ಮಿಗಳೂ ಲೇಖಕರೂ ರಂಗಾಯಣದ ಗೌರವಕ್ಕೆ ಚ್ಯುತಿ ತರುವಂತಹ ಈ ಬೆಳವಣಿಗೆಗೆ ಪ್ರತಿರೋಧ ತೋರಿರುವುದು ಸರಿಯಾಗಿಯೇ ಇದೆ.
ಇಲ್ಲಿ ನಾವು ಗಮನ ಹರಿಸಬೇಕಾದ ಇನ್ನೊಂದು ವಿಷಯವಿದೆ.ಇದು ಇಂದು ಒಬ್ಬ ಕಾರ್ಯಪ್ಪ ಅವರ ಪ್ರಶ್ನೆಯಾಗಿ ಉಳಿದಿಲ್ಲ. ಅವರು ಹೋದರೆ ಇನ್ನೊಬ್ಬ ಅತ್ಯುಗ್ರ ಹಿಂದುತ್ವವಾದಿಯನ್ನು ತರಲು ಖಂಡಿತ ಬಿಜೆಪಿ ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ. ತನ್ನ ಆಲೋಚನೆಯನ್ನು ಇನ್ನೊಬ್ಬರ ಮೇಲೆ ಬಲವಾಗಿ ಹೇರುವ ಫ್ಯಾಸಿಸ್ಟ್ ಧೋರಣೆ ಇರುವ ಯಾವುದೇ ಸರ್ಕಾರ ಕಲೆಯ ಬೆಳವಣಿಗೆಯನ್ನು ಕಿಂಚಿತ್ತೂ ಸಹಿಸಲಾರದು ಎಂಬುದಕ್ಕೆ ಇಂದಿನ ರಂಗಾಯಣದ ಬೆಳವಣಿಗೆಗಳು ಒಂದು ಉದಾಹರಣೆಯಾಗಿ ಕಾಣಿಸುತ್ತಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ರಂಗಭೂಮಿಯಲ್ಲಿ, ಹಿಂದುತ್ವವಾದಿ ಶಕ್ತಿಗಳು ಪ್ರವೇಶ ಪಡೆಯುತ್ತಿರುವ ಸಂದರ್ಭದಲ್ಲಿ ರಂಗಕರ್ಮಿಗಳ ಮತ್ತು ಚಿಂತಕರ ಪ್ರತಿರೋಧದ ರೀತಿ ಹೇಗಿರಬೇಕು ಎಂಬುದು ಬಹಳ ಮುಖ್ಯವಾಗುತ್ತದೆ.ರಂಗಾಯಣದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸದೆ ಇರುವುದಿರುವುದರ ಮೂಲಕ ಇದನ್ನು ದಾಖಲಿಸಬಹುದು.
‘ರಂಗಾಯಣದಂತಹ ಸಂಸ್ಥೆ ತಮ್ಮನ್ನು ಕರೆಯುವುದೇ ದೊಡ್ಡದು’ ಎಂಬ ಯೋಚನೆಯನ್ನು ಈಗಲಾದರೂ ಕೈಬಿಡಬೇಕಾದ ಕಾಲ ಬಂದಿದೆ. ರಂಗಾಯಣದ ನಿರ್ದೇಶಕರ ನಿಲುವು ಗೊತ್ತಿದ್ದೂ ‘ಗಾಂಧಿ ವಿಚಾರಸಂಕಿರಣ’ ಮಾಡಿದಾಗ ಅದು ತಮಗೆ ಸಂದ ಗೌರವ ಎಂಬಂತೆ ಹೋಗಿ ಉಪನ್ಯಾಸ ನೀಡಿರುವವರನ್ನು ನೋಡಿದ್ದೇವೆ. ರಂಗಾಯಣ ಹೋಗುತ್ತಿರುವ ದಾರಿಯನ್ನು ಗಮನಿಸಿ,’ತಾನು ಬರುವುದಿಲ್ಲ’ಎಂಬ ಸಾಂಕೇತಿಕ ಪ್ರತಿರೋಧವನ್ನಾದರೂ ಅವರು ಒಡ್ಡಬೇಕಾಗಿತ್ತು. ಹಾಗೆ ಹೇಳಿದ್ದರೆ ಅದರ ಪರಿಣಾಮವೇ ಬೇರೆ ಇರುತ್ತಿತ್ತು. ಅಂತಹ ವೈಚಾರಿಕ ಪ್ರಖರತೆ ಇಂದಿನ ಅಗತ್ಯ.
ತಾನು ಕೋಮುವಾದಿಗಳ ಜೊತೆ ವೇದಿಕೆ ಹಂಚಿಕೊಳ್ಳಲಾರೆ ಎಂದು ಹೇಳಬೇಕಾದುದೂ ಅಷ್ಟೇ ಮುಖ್ಯ.ಇದೀಗ ರಂಗಾಯಣದ ಉತ್ಸವದಲ್ಲಿ ಅತಿಥಿಗಳಾಗಿ ಭಾಗವಹಿಸಲು ಒಪ್ಪಿಕೊಂಡಿರುವ ನಾ.ಡಿಸೋಜ,ಎಚ್.ಎಸ್. ವೆಂಕಟೇಶಮೂರ್ತಿ ಮುಂತಾದವರು ಹಾಗೆ ಮಾಡಬಲ್ಲರೆ? ಇಲ್ಲ ಅನಿಸುತ್ತಿದೆ.ಇದು ಸದ್ಯದ ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇರುವ ದೊಡ್ಡ ಸಮಸ್ಯೆ. ಮೌನ,ನಿಷ್ಕ್ರಿಯತೆ ಮತ್ತು ಸಮಯಸಾಧಕತನ.
ಪ್ರತಿರೋಧ ತೋರುವವರಿಗೆ ಹಿಂದುತ್ವವಾದಿಗಳಿಂದ ಎದುರಾಗಬಹುದಾದ ಸಮಸ್ಯೆಗಳನ್ನು ನೋಡಿ ಹೆದರಿಯೇ ಅನೇಕರು ಈ ರೀತಿಯ ರಾಜಿ ಕಬೂಲಿಗೆ ಇಳಿದಿರಲೂಬಹುದು.ಅಲ್ಲದೆ ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಸಾಮೂಹಿಕ ಇಚ್ಛಾಶಕ್ತಿ ಕಾಣಿಸಿಕೊಂಡಿದ್ದು ಬಹಳ ಕಡಿಮೆ.ವೈಯಕ್ತಿಕ ಸಾಹಸ, ಬಾಜಾಭಜಂತ್ರಿಗಳೇ ಇಲ್ಲಿ ಮುಖ್ಯವಾಗಿಬಿಟ್ಟಿವೆ. ತಮ್ಮವ,ತಮ್ಮ ಜಾತಿಯವ,ತಮ್ಮ ಗುಂಪಿನವ ಎಂಬ ಒಳ ಲೆಕ್ಕಾಚಾರ ಬೇರೆ.ಇದೆಲ್ಲದರ ಪರಿಣಾಮವಿದು. ಈ ವಾತಾವರಣ ಯಾವಾಗ ಹೋದೀತು? ಹೋಗಬೇಕು.
ಎಲ್ಲವನ್ನೂ ಬಿಡಿ ಘಟನೆಗಳಾಗಿ ನೋಡುವುದನ್ನೂ ನಾವು ಬಿಡಬೇಕಾಗುತ್ತದೆ.ನಿನ್ನೆ ಕರ್ನಾಟಕ ಸಾಹಿತ್ಯ ಪರಿಷತ್ತು ರಾಜಕೀಯ ವೇದಿಕೆಯಾಗುತ್ತಿರುವುದರ ಬಗ್ಗೆ ಪ್ರತಿಭಟಿಸುತ್ತೇವೆ.ಇಂದು ರಂಗಾಯಣ
ಹಿಂದುತ್ವವಾದಿಗಳ ಕೈಗೆ ಹೋಗುತ್ತಿರುವುದರ ಬಗ್ಗೆ ಪ್ರತಿಭಟಿಸುತ್ತೇವೆ.ಅಲ್ಲಿಗೆ ಎಲ್ಲವೂ ನೆನಪು ಹೋಗುತ್ತವೆ. ಸಾಂಸ್ಕೃತಿಕ ಪರಿಸರವನ್ನು ನಾಶ ಮಾಡಲು ಹಿಂದುತ್ವವಾದಿಗಳು ನೂರು ವರ್ಷದಿಂದ ಕಾದಿದ್ದರು ಎಂಬುದನ್ನು ಮರೆತುಬಿಡುತ್ತೇವೆ.ಇದರಿಂದ ಉತ್ತೇಜಿತರಾಗಿ ಅವರು ಇನ್ನಷ್ಟು ಪ್ರಬಲವಾಗಿ ತಮ್ಮ ಕಾರ್ಯತಂತ್ರಗಳನ್ನು ಹೆಣೆಯುತ್ತಲೇ ಇರುತ್ತಾರೆ. ಇದನ್ನು ಹೇಗೆ ಎದುರಿಸಬೇಕು?
ಈಗ ಎಲ್ಲಕ್ಕಿಂತ ಮುಖ್ಯವಾಗಿ ನಾವು ಚರ್ಚೆಗೆ ಎತ್ತಿಕೊಳ್ಳಬೇಕಾದ ವಿಷಯ ಇದು.ಎಲ್ಲ ವಿದ್ಯಮಾನಗಳನ್ನು ಸಮಗ್ರವಾಗಿ ಗ್ರಹಿಸಿ ಪ್ರತಿರೋಧ ರೂಪಿಸುವುದು.ರಂಗಾಯಣದಲ್ಲಿ ಕಾಣಿಸಿಕೊಂಡಿರುವುದು ರೋಗದ ಮುಖ್ಯ ಲಕ್ಷಣ ಎಂದು ಗ್ರಹಿಸುವುದು.ಇದು ಒಂದು ದಿವಸದ ಕೆಲಸವಲ್ಲ. ಸತತವಾಗಿ ಮಾಡುತ್ತಿರಬೇಕಾಗುತ್ತದೆ.
ಅಂತಿಮವಾಗಿ ಅದು ಮನಸ್ಸನ್ನು ರೂಪಿಸುವ ಕೆಲಸವೂ ಹೌದು.
ಇವತ್ತಿನ ಈ ಬದಲಾದ ಸಾಂಸ್ಕೃತಿಕ ಸನ್ನಿವೇಶಕ್ಕೂ ದೇಶದಲ್ಲಿ ವೇಗವಾಗಿ ಹಬ್ಬುತ್ತಿರುವ ಫ್ಯಾಸಿಸಂ ಮತ್ತು ಹಿಂದುತ್ವವಾದಿ ಅಬ್ಬರಕ್ಕೂ ನೇರವಾದ ಸಂಬಂಧ ಇದೆ ಎಂದು ಗ್ರಹಿಸಿದಾಗಲೇ ನಮ್ಮ ಪ್ರತಿರೋಧಕ್ಕೆ ಒಂದು ಅರ್ಥ ಬರುವುದು. ರಂಗಾಯಣದಲ್ಲಿ ಇಂದು ಕಾಣಿಸಿಕೊಂಡಿರುವುದು ಪ್ರಜಾಪ್ರಭುತ್ವದ ಹೆಸರಿನಲ್ಲಿನ
ಫ್ಯಾಸಿಸಂ ಚಹರೆ.ಇದಕ್ಕೆ ತಡೆಯೊಡ್ಡುವ ಇಚ್ಚಾಶಕ್ತಿ ಮತ್ತು ಅದನ್ನು ಸಾಧಿಸಬೇಕಾದ ರೀತಿ ಎಲ್ಲಕ್ಕಿಂತ ಮುಖ್ಯವಾದುದು.
- ವಸಂತ ಬನ್ನಾಡಿ