ರಾಮನಗರ: ಮಾಗಡಿ ತಾಲ್ಲೂಕಿನ ದಮ್ಮನಕಟ್ಟೆ ಗ್ರಾಮದಲ್ಲಿ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ.
ಗ್ರಾಮದ ನಿವಾಸಿಗಳಾದ ಸಿದ್ದಮ್ಮ (55), ಆಕೆಯ ಪುತ್ರಿ ಸುಮಿತ್ರಾ (30) ಹಾಗೂ ಅಳಿಯ ಹನುಮಂತ ರಾಜು (35) ಮೃತರು. ಸುಮಿತ್ರಾರ ಹಿರಿಯ ಪುತ್ರಿ ಕೀರ್ತನಾಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ಹನುಮಂತರಾಜು ದಮ್ಮನಕಟ್ಟೆಯಲ್ಲಿ ವ್ಯವಸಾಯ ಮಾಡಿಕೊಂಡು ಕುಟುಂಬ ಸಮೇತ ಅತ್ತೆಯ ಮನೆಯಲ್ಲೇ ನೆಲೆಸಿದ್ದರು. ಮಂಗಳವಾರ ರಾತ್ರಿ ಮದ್ಯಪಾನ ಮಾಡಿಬಂದು ಮನೆಯಲ್ಲಿ ಜಗಳ ತೆಗೆದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಕುಟುಂಬದವರು ಕೆರೆಗೆ ತೆರಳಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಸುಮಿತ್ರಾರ ಕಿರಿಯ ಪುತ್ರಿ ಚಂದನಾ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಮುಳುಗುತ್ತಿದ್ದ ಕೀರ್ತನಾಳನ್ನು ರಕ್ಷಣೆ ಮಾಡಿದರು. ಉಳಿದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು ಎಂದು ಸ್ಥಳೀಯರು ಮಾಹಿತಿ ನೀಡಿದರು.ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.