ಮೈಸೂರು: ಇಲ್ಲಿನ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರನ್ನು ವಜಾಗೊಳಿಸಲು ಆಗ್ರಹಿಸಿ ಹಾಗೂ ಅವರನ್ನು ಬೆಂಬಲಿಸಿ ನಡೆಯುತ್ತಿರುವ ಪರ ಹಾಗೂ ವಿರುದ್ಧದ ಪ್ರತಿಭಟನೆಗಳು ಗುರುವಾರವೂ ಮುಂದುವರಿದಿವೆ.
ರಂಗಾಯಣಕ್ಕೆ ಸಂಪರ್ಕ ಕಲ್ಪಿಸುವ ಹುಣಸೂರು ರಸ್ತೆಯ ಸಿಗ್ನಲ್ನಲ್ಲಿ ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು ಕಾರ್ಯಪ್ಪ ಅವರನ್ನು ಬೆಂಬಲಿಸಿ ಧರಣಿ ಕುಳಿತರೆ, ಕುಕ್ಕರಹಳ್ಳಿ ಸಮೀಪ ಕಾರ್ಯಪ್ಪ ಅವರನ್ನು ವಿರೋಧಿಸಿ ರಂಗಾಯಣ ಉಳಿಸಿ ಹೋರಾಟ ಸಮಿತಿ ಮುಖಂಡರು ಧರಣಿ ಕುಳಿತರು. ಇದರಿಂದ ರಸ್ತೆಯ ಎರಡೂ ಬದಿಯನ್ನು ಬ್ಯಾರಿಕೇಡ್ ಹಾಕಿ ಮುಚ್ಚಿದ ಪೊಲೀಸರು ಸಂಚಾರವನ್ನು ನಿರ್ಬಂಧಿಸಿದರು.
ಪೊಲೀಸರು ಬಂಧಿಸುವ ಎಚ್ಚರಿಕೆ ನೀಡುತ್ತಿದ್ದಂತೆ ರಂಗಾಯಣ ಉಳಿಸಿ ಹೋರಾಟ ಸಮಿತಿ ಮುಖಂಡರು ಪ.ಮಲ್ಲೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಕಾರ್ಯಪ್ಪ ಪರ ಧರಣಿ ಕುಳಿತಿದ್ದವರನ್ನೂ ಪೊಲೀಸರು ಚದುರಿಸಿದರು. ಈ ವೇಳೆ ಪೊಲೀಸರಿಗೂ ಪ್ರತಿಭಟನಕಾರರಿಗೂ ವಾಗ್ವಾದ ನಡೆಯಿತು.
ಮತ್ತೆ ಯಾರಾದರೂ ಇಲ್ಲಿ ಪ್ರತಿಭಟನೆ ಮಾಡಲು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಪ್ರದೀಪ್ಗುಂಟಿ ಎಚ್ಚರಿಕೆ ನೀಡಿದರು.