ಕೊಪ್ಪಳ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 150 (ಹೊಸಪೇಟೆ -ಹುನಗುಂದ) ಶನಿವಾರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸಾವಿಗೀಡಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಭಾನುವಾರ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಮೃತಪಟ್ಟ ವ್ಯಕ್ತಿಯನ್ನು ಶಾಪುರ ಗ್ರಾಮದ ಬೋಜಪ್ಪ ಎಂದು ಗುರುತಿಸಲಾಗಿದೆ.
ಹೆದ್ದಾರಿ ಪ್ರಾಧಿಕಾರದಿಂದ ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ ಮಾಡಿದ್ದು, ಇವರ ನಿರ್ಲಕ್ಷದಿಂದ ಒಂದು ತಿಂಗಳಲ್ಲಿ ಮೂವರು ಅಮಾಯಕ ಯುವಕರು ಬಲಿಯಾಗಿದ್ದಾರೆ.ಅಲ್ಲದೆ ದ್ವಿಚಕ್ರ ವಾಹನ ಸವಾರರು ಗಾಯಗೊಂಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಅಪಘಾತದಿಂದ ಮೃತರಾದ ಭೋಜಪ್ಪವರ ಶವ ಇಟ್ಟು ಪ್ರತಿಭಟನೆಗೆ ಮುಂದಾಗಿದ್ದ ಗ್ರಾಮಸ್ಥರನ್ನು ಪೊಲೀಸರು ಸಮಾಧಾನಪಡಿಸಿದರು.
ಮೃತ ಯುವಕರ ಕುಟುಂಬಕ್ಕೆ ಪರಿಹಾರ ನೀಡಬೇಕು. ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಭಾನುವಾರ ಟೋಲ್ಗೇಟ್ ಗಳಿಗೆ ಸುತ್ತಲಿನ ಗ್ರಾಮಸ್ಥರು ಮುತ್ತಿಗೆ ಹಾಕಿದರು.
ಮುನಿರಾಬಾದ್ ಪಿಎಸ್ಐ ಸುಪ್ರೀತ್ ಪಾಟೀಲ್, ಗ್ರಾಮೀಣ ಸಿಪಿಐ ವಿಶ್ವನಾಥ ಹಿರೇಗೌಡರ್ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಗ್ರಾಮಸ್ಥರ ಆಕ್ರೋಶಕ್ಕೆ ಟೋಲ್ ಬಂದ್ ಮಾಡಲಾಯಿತು.
2 ಟೋಲ್ ಗೇಟ್ ನಲ್ಲಿ ಶುಲ್ಕರಹಿತ ವಾಹನ ಸಂಚಾರ ಪಡೆಯುತ್ತಿದೆ. ಟೋಲ್ ಗೇಟ್ ಸಿಬ್ಬಂದಿಯನ್ನು ಗ್ರಾಮಸ್ಥರು ಹೊರಗೆ ಕಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಇದೆ.